ನವದೆಹಲಿ: ಇಂಧನ ಬಳಕೆ ತಗ್ಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿತಗೊಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೈದರಾಬಾದ್ ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ದೇಶದ ಜನರು ಪೆಟ್ರೋಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಿ, ಇಂಧನ ಬಳಕೆ ತಗ್ಗಿಸಿ, ಬಸ್, ಮೆಟ್ರೋಗಳಲ್ಲಿ ಪ್ರಯಾಣಿಸಿ. ಒಂದು ವರ್ಷದ ವರೆಗೆ ಚಿನ್ನಾಭರಣ ಖರೀದಿ ನಿಲ್ಲಿಸಿ, ಅಡುಗೆ ಎಣ್ನೆ ಮಿತವಾಗಿ ಬಳಕೆ ಮಾಡುವಂತೆ ದೇಶದ ಜನತೆಗೆ ಕರೆ ನೀಡಿದ್ದರು. ಈ ಮೂಲಕ ಪಶ್ಚಿಮ ಏಷ್ಯಾ ರಾಅಷ್ಟ್ರಗಳಲ್ಲಿನ ಯುದ್ಧದಿಂದಾಅಗಿ ಭಾರತ ಆರ್ಥಿಕತೆ ಮೇಲೆ ಬೀರುತ್ತಿರುವ ಪರಿಣಾಮಗಳನ್ನು ಎದುರಿಸಲು ಕೆಲವು ಸಲಹೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಬೆನ್ನಲ್ಲೇ ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಬೆಂಗಾವಲು ವಾಹನಗಳ ಸಂಖ್ಯೆ ಕಡಿತಗೊಳಿಸಿದ್ದಾರೆ.
ಇನ್ನು ಬಿಜೆಪಿ ಆಡಳಿತವಿರುವ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಇಂಧನ ಬಳಕೆ ತಗ್ಗಿಸಲು ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಹಾಗೂ ಸಚಿವರ ವಾಹನಗಳ ಸಂಖ್ಯೆಯಲ್ಲಿ ಶೇ.50ರಷ್ಟು ಕಡಿತ ಮಾಡುವಂತೆ ಆದೇಶಿಸಿದ್ದಾರೆ.
ಸಚಿವರು ಮತ್ತು ಶಾಸಕರು ವಾರಕ್ಕೊಮ್ಮೆ ಕಡ್ಡಾಯವಾಗಿ ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಸೂಚಿಸಿದ್ದಾರೆ. ರಾಜ್ಯದಲ್ಲಿ ವರ್ಕ್ ಫ್ರಂ ಹೋಮ್ ವ್ಯವಸ್ಥೆಗೆ ಉತ್ತೇಜನ ಕೊಡಲು, ಮತ್ತು ಹೆಚ್ಚು ಸಿಬ್ಬಂದಿ ಇರುವ ಸಂಸ್ಥೆಗಳಲ್ಲಿ ವಾರಕ್ಕೆ ಎರಡು ದಿನ ವರ್ಕ್ ಫ್ರಂ ಮಾಡಲು ಶಿಫಾರಸು ಮಾಡುವಂತೆ ಸಿಎಂ ಸೂಚಿಸಿದ್ದಾರೆ.
ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಅಧಿಕೃತ ಕೆಲಸಗಳಿಗೆ ಕನಿಷ್ಠ ವಾಹನ ಬಳಸುವುದಾಗಿ ತಿಳಿಸಿದ್ದಾರೆ. ತಮ್ಮನ್ನೂ ಒಳಗೊಂಡಂತೆ ದೆಹಲಿಯ ಎಲ್ಲಾ ಬಿಜೆಪಿ ಶಾಸಕರು ಮತ್ತು ಅಧಿಕಾರಿಗಳು ಕಾರ್-ಪೂಲಿಂಗ್ (ವಾಹನ ಹಂಚಿಕೆ) ಮತ್ತು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಪ್ರಧಾನಿಗಳ ಸಲಹೆ ಪಾಲಿಸುವಂತೆ ಸಾರ್ವಜನಿಕರಿಗೂ ಮನವಿ ಮಾಡಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ತಮ್ಮ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದಾಗಿ ಘೋಷಿಸಿದ್ದು, ಇತರ ಸಚಿವರಿಗೂ ಇದೇ ರೀತಿ ಅನುಸರಿಸುವಂತೆ ಸೂಚಿಸಿದ್ದಾರೆ. ಸಾಮಾನ್ಯ ಜನರು ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸರ್ಕಾರಿ ವಿಮಾನ ಮತ್ತು ಹೆಲಿಕಾಪ್ಟರ್ ಬಳಕೆಗೆ ಬ್ರೇಕ್ ಹಾಕಲಾಗಿದೆ. ಸಚಿವರು ತುರ್ತು ಕೆಲಸಗಳಿಗಾಗಿ ವಿಮಾನ ಬಳಸಬೇಕಿದ್ದರೆ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಅವರ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ.
ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಅವರು ತಮ್ಮ ವೈಯಕ್ತಿಕ ಬಳಕೆಯ ವಾಹನಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿತಗೊಳಿಸಿದ್ದು, ಅತ್ಯಗತ್ಯವಿದ್ದಾಗ ಮಾತ್ರ ಅಧಿಕೃತ ಪ್ರವಾಸ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಗುಜರಾತ್ ರಾಜ್ಯಪಾಲರು ಹೆಲಿಕಾಪ್ಟರ್ ಅಥವಾ ವಿಮಾನಗಳ ಬದಲಿಗೆ ರಾಜ್ಯದೊಳಗೆ ಪ್ರಯಾಣಿಸಲು ರೈಲು ಮತ್ತು ಎಸ್‌ಟಿ ಬಸ್‌ಗಳನ್ನು ಬಳಸಲು ನಿರ್ಧರಿಸಿದ್ದಾರೆ. ಇನ್ನು ರಾಜ್ಯದ ಉಪಮುಖ್ಯಮಂತ್ರಿ ಹರ್ಷ ಸಂಘವಿ ಅವರು ತಮ್ಮ ನಿಗದಿತ ಅಮೆರಿಕ ಪ್ರವಾಸವನ್ನು ರದ್ದುಗೊಳಿಸುವ ಮೂಲಕ ವಿದೇಶಿ ಪ್ರಯಾಣದ ವೆಚ್ಚಕ್ಕೆ ಕಡಿವಾಣ ಹಾಕಿದ್ದಾರೆ.

