ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಸಿನಿಮಾಗಳು ಹಾಗೂ ಜಾಹೀರಾತುಗಳ ಜೊತೆಗೆ ರಿಯಲ್ ಎಸ್ಟೇಟ್‌ನಿಂದಲೂ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಇದೀಗ ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ತಮ್ಮ ವಾಣಿಜ್ಯ ಕಟ್ಟಡದ 3 ಮಹಡಿಗಳನ್ನು ಲೀಸ್‌ಗೆ ನೀಡಿದ್ದು, ಇದರಿಂದ ತಿಂಗಳಿಗೆ ₹33 ಲಕ್ಷ ಬಾಡಿಗೆ ಹಾಗೂ 5 ವರ್ಷಗಳಲ್ಲಿ ಬರೋಬ್ಬರಿ ₹21.88 ಕೋಟಿ ಆದಾಯ ಪಡೆಯಲಿದ್ದಾರೆ.
ಹೌದು.ಬಾಲಿವುಡ್‌ನ ಖ್ಯಾತ ನಟ ಅಮಿತಾಭ್ ಬಚ್ಚನ್ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲೂ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಸಿನಿಮಾಗಳು ಮತ್ತು ಜಾಹೀರಾತುಗಳ ಮೂಲಕ ಸಂಪಾದಿಸುವುದರ ಜೊತೆಗೆ, ತಮ್ಮ ಆಸ್ತಿಗಳನ್ನು ಬಾಡಿಗೆಗೆ ನೀಡುವ ಮೂಲಕವೂ ದೊಡ್ಡ ಮೊತ್ತದ ಆದಾಯ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದ ಮುಂಬೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅಮಿತಾಭ್ ಬಚ್ಚನ್ ಅವರಿಗೆ ಆಸ್ತಿಗಳಿವೆ. ಇವುಗಳಲ್ಲಿ ಹಲವು ಆಸ್ತಿಗಳನ್ನು ಲೀಸ್‌ಗೆ ನೀಡುವ ಮೂಲಕ ಅವರು ಬಾಡಿಗೆ ಆದಾಯ ಗಳಿಸುತ್ತಿದ್ದಾರೆ. ಇದೀಗ ಮುಂಬೈನ ಪಶ್ಚಿಮ ಅಂಧೇರಿಯಲ್ಲಿರುವ ತಮ್ಮ ವಾಣಿಜ್ಯ ಕಟ್ಟಡದ 3 ಮಹಡಿಗಳನ್ನು ಬಾಡಿಗೆಗೆ ನೀಡಿದ್ದು, ತಿಂಗಳಿಗೆ ₹33 ಲಕ್ಷ ಬಾಡಿಗೆ ಪಡೆಯುವ ಒಪ್ಪಂದ ಮಾಡಿಕೊಂಡಿದ್ದಾರೆ.
ಹಲವು ಇಂಗ್ಲಿಷ್ ಮಾಧ್ಯಮಗಳ ವರದಿ ಪ್ರಕಾರ, F&B ಪ್ರೈವೇಟ್ ಲಿಮಿಟೆಡ್ ಎಂಬ ನ್ಯೂಟ್ರಿಷನ್ ಬ್ರ್ಯಾಂಡ್ ಈ ಆಸ್ತಿಯನ್ನು ಲೀಸ್‌ಗೆ ಪಡೆದಿದೆ. ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ತಿಂಗಳಿಗೆ ₹33 ಲಕ್ಷ ಬಾಡಿಗೆ ಪಾವತಿಸುವ ಒಪ್ಪಂದವಾಗಿದೆ.
ಈ ಆಸ್ತಿ ಅಂಧೇರಿ ವೆಸ್ಟ್‌ನ ಓಶಿವಾರಾ ಲಿಂಕ್ ರೋಡ್‌ನ ಸಿಗ್ನೇಚರ್ ಬಿಲ್ಡಿಂಗ್‌ನಲ್ಲಿ ಇದೆ. ಮೂರು ಮಹಡಿಗಳ ಒಟ್ಟು ಕಾರ್ಪೆಟ್ ಏರಿಯಾ ಸುಮಾರು 8,428 ಚದರ ಅಡಿ ಇದೆ. 2026ರ ಆಗಸ್ಟ್ 15ರಿಂದ ಈ ಲೀಸ್ ಒಪ್ಪಂದ ಜಾರಿಗೆ ಬಂದಿದೆ. ಕಾರ್ಪೆಟ್ ಏರಿಯಾ ಆಧಾರದಲ್ಲಿ ಪ್ರತಿ ಚದರ ಅಡಿಗೆ ತಿಂಗಳಿಗೆ ಸುಮಾರು ₹392 ಬಾಡಿಗೆ ಬರುತ್ತದೆ.
ಆಗಸ್ಟ್ 7ರಂದು ನಡೆದ ಲೀಸ್ ಮತ್ತು ಲೈಸೆನ್ಸ್ ಒಪ್ಪಂದದ ಪ್ರಕಾರ, ಒಟ್ಟು 5 ವರ್ಷಗಳ ಅವಧಿಗೆ ಈ ಡೀಲ್ ನಡೆದಿದೆ. ಈ ಅವಧಿಯಲ್ಲಿ ಬಾಡಿಗೆ ರೂಪದಲ್ಲಿ ಒಟ್ಟು ₹21.88 ಕೋಟಿ ಪಾವತಿಯಾಗಲಿದೆ.
ಈ ಒಪ್ಪಂದದ ಭಾಗವಾಗಿ ಕಟ್ಟಡದಲ್ಲಿ 9 ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳನ್ನೂ ಲೀಸ್ ಪಡೆದ ಸಂಸ್ಥೆಗೆ ನೀಡಲಾಗುತ್ತದೆ. ಅಲ್ಲದೆ, ಮುಂಗಡ ಅಥವಾ ಭದ್ರತಾ ಠೇವಣಿಯಾಗಿ ₹1.98 ಕೋಟಿ ಪಾವತಿಸಲಾಗಿದೆ. ದಾಖಲೆಗಳ ಪ್ರಕಾರ, ಪ್ರತಿ ವರ್ಷ ಬಾಡಿಗೆ ಮೊತ್ತವು 5%ರಷ್ಟು ಹೆಚ್ಚಳವಾಗಲಿದೆ.
ಇದೇ ಸಿಗ್ನೇಚರ್ ಬಿಲ್ಡಿಂಗ್‌ನಲ್ಲಿ 2023ರಲ್ಲೂ ಅಮಿತಾಭ್ ಬಚ್ಚನ್ ಅವರು 4 ಕಚೇರಿ ಘಟಕಗಳನ್ನು ವಾರ್ನರ್ ಮ್ಯೂಸಿಕ್ ಪ್ರೈವೇಟ್ ಲಿಮಿಟೆಡ್‌ಗೆ ಬಾಡಿಗೆಗೆ ನೀಡಿದ್ದರು. ಈ ಒಪ್ಪಂದದಲ್ಲಿ ತಿಂಗಳಿಗೆ ₹17.30 ಲಕ್ಷ ಬಾಡಿಗೆ ನಿಗದಿಯಾಗಿತ್ತು. ಐದು ವರ್ಷಗಳ ಈ ಒಪ್ಪಂದವು 2024ರ ಮಾರ್ಚ್‌ನಲ್ಲಿ ಜಾರಿಗೆ ಬಂದಿದ್ದು, 12 ಪ್ರತ್ಯೇಕ ಪಾರ್ಕಿಂಗ್ ಸ್ಥಳಗಳು ಇದರೊಂದಿಗೆ ಸೇರಿವೆ.
ಅಮಿತಾಭ್ ಬಚ್ಚನ್ ಅವರು ಮುಂಬೈ ಮಾತ್ರವಲ್ಲದೆ ಅಯೋಧ್ಯೆ, ಅಲಿಬಾಗ್ ಸೇರಿದಂತೆ ದೇಶದ ವಿವಿಧೆಡೆ ಹಾಗೂ ವಿದೇಶಗಳಲ್ಲೂ ತಮ್ಮ ರಿಯಲ್ ಎಸ್ಟೇಟ್ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಿದ್ದಾರೆ. ಅವರ ಬಳಿ ಐಷಾರಾಮಿ ಮನೆಗಳು, ಅಪಾರ್ಟ್‌ಮೆಂಟ್‌ಗಳು, ವಾಣಿಜ್ಯ ಆಸ್ತಿಗಳು ಮತ್ತು ಇತರೆ ಜಮೀನುಗಳಿವೆ.
ಇನ್ನು ಅಮಿತಾಭ್ ಬಚ್ಚನ್ ಅವರ ನಿವಾಸದ ಬಗ್ಗೆ ಹೇಳುವುದಾದರೆ, ಮುಂಬೈನ ಜುಹೂ ಪ್ರದೇಶದಲ್ಲಿರುವ ಅವರ ಮನೆ ಎರಡು ಮಹಡಿಗಳಲ್ಲಿ ಸುಮಾರು 10,000 ಚದರ ಅಡಿ ವಿಸ್ತೀರ್ಣ ಹೊಂದಿದೆ ಎನ್ನಲಾಗಿದೆ.

