ನವದೆಹಲಿ: ಮದ್ಯ ಸೇವನೆ ಮಾಡಿರುವ ಶಂಕೆ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಪೈಲಟ್ ಓರ್ವರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಕೆನಡಾದ ವ್ಯಾಂಕೋವರ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವ್ಯಾಂಕೋವರ್ ನಿಂದ ದೆಹಲಿಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನವನ್ನು ಮುನ್ನಡೆಸಬೇಕಿದ್ದ ಪೈಲಟ್ ಮದ್ಯ ಸೇವನೆ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ವರದಿಗಳ ಪ್ರಕಾರ ವ್ಯಾಂಕೋವರ್ ಏರ್ ಪೋರ್ಟ್ ನ ಡ್ಯೂಟಿ ಫ್ರೀ ಅಂಗಡಿಯ ಸಿಬ್ಬಂದಿಯೊಬ್ಬರು ಪೈಲಟ್ ಮದ್ಯ ಸೇವನೆ ಮಾಡುತ್ತಿದ್ದುದನ್ನು ನೋಡಿದ್ದಾರೆ ಎನ್ನಲಾಗಿದೆ. ತಕ್ಷಣ ಅವರು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಭದ್ರತಾ ಪಡೆಗಳು ಪೈಲಟ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಪೈಲಟ್ ಬ್ರೀಥಲೈಜರ್ ಪರೀಕ್ಷೆ ನಡೆಸಿದಾಗ ಅವರು ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ಕರ್ತವ್ಯಕ್ಕೆ ಪೈಲಟ್ ಫಿಟ್ನೆಸ್ ಬಗ್ಗೆ ಕೆನಡಾದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದು, ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಸುರಕ್ಷತಾ ಮಾನದಂಡಗಳ ಪ್ರಕಾರ ವಿಮಾನವನ್ನು ಮುನ್ನಡೆಸಲು ಪರ್ಯಾಯ ಪೈಲಟ್ ನಿಯೋಜಿಸಲಾಯಿತು. ಆದಾಗ್ಯೂ ವಿಮಾನ ವಿಳಂಬದಿಂದ ಪ್ರಯಾಣಿಕರಿಗೆ ಆದ ಅನಾನೂಕೂಲತೆ ಬಗ್ಗೆ ವಿಷಾದಿಸುವುದಾಗಿ ತಿಳಿಸಿದೆ.

