ಪುಣೆ ಮಹಾನಗರ ಪಾಲಿಕೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಜನವರಿ 15ರಂದು ನಡೆಯುವ ಚುನಾವಣೆಗೆ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಕೆ ಮಾಡುತ್ತಿದ್ದಾರೆ. ಆದರೆ ಗುರುವಾರ ಅಭ್ಯರ್ಥಿಯೊಬ್ಬ ಎದುರಾಳಿ ಪಕ್ಷದ ಅಭ್ಯರ್ಥಿ ಬಿ-ಫಾರಂ ಹರಿದು, ನುಂಗಿದ್ದಾನೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಿವಸೇನೆ ಪಕ್ಷದ ಅಭ್ಯರ್ಥಿ ಎದುರಾಳಿಯ ಬಿ-ಫಾರಂ ನುಂಗಿದ ನಾಯಕ. ಪುಣೆ ನಗರದ ವಾರ್ಡ್ ನಂಬರ್ 34ರಲ್ಲಿ ಶಿವಸೇನೆ ಅಭ್ಯರ್ಥಿ ಉದ್ಧವ್ ಕಾಂಬ್ಳೆ ಮತ್ತು ಮಚ್ಚಿಂದ್ರ ಧಾವಳೆ ನಡುವೆ ತೀವ್ರ ಪೈಪೋಟಿ ಇದೆ.
ರಾಜ್ಯದಲ್ಲಿ ಶಿವಸೇನವೆ ಎರಡು ಭಾಗವಾಗಿದೆ. ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣವಿದೆ. ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ಉದ್ಧವ್ ಕಾಂಬ್ಳೆ ಮಚ್ಚಿಂದ್ರ ಧಾವಳೆ ಬಿ-ಫಾರಂ ಕಸಿದುಕೊಂಡು ಅದನ್ನು ಹರಿದು ಹಾಕಿದರು. ಬಳಿಕ ಅದನ್ನು ನುಂಗಿದರು.
ಚುನಾವಣಾ ಅಧಿಕಾರಿಗೆ ಮಚ್ಚಿಂದ್ರ ಧಾವಳೆ ನಾಮಪತ್ರ ಸಲ್ಲಿಕೆ ಮಾಡುವ ವೇಳೆ ಉದ್ಧವ್ ಕಾಂಬ್ಳೆ ಈ ರೀತಿ ಮಾಡಿದ್ದಾರೆ. ಇದು ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಮತ್ತು ಚುನಾವಣಾ ಕಾರ್ಯಕ್ಕೆ ತೊಂದರೆ ಉಂಟು ಮಾಡಿದ ಕಾರ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ, ಚುನಾವಣಾ ನಿಯಮಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಉದ್ಧವ್ ಕಾಂಬ್ಳೆ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬಿ-ಫಾರಂ ಅನ್ನು ಪಕ್ಷ ತನ್ನ ಅಧಿಕೃತ ಅಭ್ಯರ್ಥಿಗೆ ನೀಡುತ್ತದೆ. ನಾಮಪತ್ರ ಸಲ್ಲಿಕೆ ಮಾಡುವಾಗ ಅಭ್ಯರ್ಥಿ ಬಿ-ಫಾರಂ ಸಲ್ಲಿಕೆ ಮಾಡಬೇಕಿದೆ. ಆದರೆ ಉದ್ಧವ್ ಕಾಂಬ್ಳೆ ಬಿ-ಫಾರಂ ಅನ್ನು ಹರಿದು, ತಿಂದ ಕಾರಣ ಉದ್ಧವ್ ಕಾಂಬ್ಳೆ ನಾಮಪತ್ರ ಮಾನ್ಯವಾಗಲಿದೆಯೇ? ಎಂದು ಕಾದು ನೋಡಬೇಕಿದೆ.
ಧನ್ಕವಾಡಿ ಸಹಕಾರನಗರ ವಾರ್ಡ್ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಬಳಿಕ ಚುನಾವಣಾಧಿಕಾರಿಗಳು ಶಿವಸೇನೆ ಅಭ್ಯರ್ಥಿ ಕಾಂಬ್ಳೆ ವಿರುದ್ಧ ಭಾರತಿ ವಿದ್ಯಾಪೀಠ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಒಂದು ರಾಜಕೀಯ ಪಕ್ಷವು ಚುನಾವಣೆಯಲ್ಲಿ ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ತನ್ನ ಅಧಿಕೃತ ಅಭ್ಯರ್ಥಿ ಎಂದು ಘೋಷಿಸಲು ಬಿ-ಫಾರಂ ನೀಡುತ್ತದೆ. ಇದು ಅತ್ಯಗತ್ಯ ದಾಖಲೆಯಾಗಿದೆ. ಆದ್ದರಿಂದ ಅದನ್ನು ಹರಿದು ಹಾಕಿದ್ದು ಚುನಾವಣಾ ನಿಯಮ ಉಲ್ಲಂಘನೆಯಾಗಿದೆ.
ಬೃಹ್ಮನ್ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ 29 ಮಹಾನಗರ ಪಾಲಿಕೆಗಳ ಚುನಾವಣೆಗಳು ಜನವರಿ 15 ರಂದು ನಡೆಯಲಿದ್ದು, ಮರುದಿನ ಮತ ಎಣಿಕೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಜನವರಿ 2 ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಜನವರಿ 3 ರಂದು ಬಿಡುಗಡೆ ಮಾಡಲಾಗುತ್ತದೆ.

