HomeKarnatakaಬೆಂಗಳೂರಿನಲ್ಲಿ ಎಐ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಎಐ ವಿಶ್ವವಿದ್ಯಾಲಯ ಸ್ಥಾಪನೆ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ(ಎಐ) ವಿಶ್ವವಿದ್ಯಾಲಯ ಸ್ಥಾಪಿಸುವ ಚಿಂತನೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬುಧವಾರ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್(ಕೆ –ಡಿಇಎಂ) ಸಹಭಾಗಿತ್ವದಲ್ಲಿ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯು ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ) ಮುಖಂಡರ ಜೊತೆಗೆ ಹಮ್ಮಿಕೊಂಡಿದ್ದ ಕ್ಯಾಟಲಿಸ್ಟ್ ಕನೆಕ್ಟ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಪ್ರಪಂಚಕ್ಕೆ ಬೇಕಾಗಿರುವುದನ್ನು ನೀಡಬೇಕೆಂಬ ಉದ್ದೇಶ ನಮ್ಮದಾಗಿದ್ದು, ಎಐ ವಿಶ್ವವಿದ್ಯಾಲಯ ಮಾಡುವ ಬಗ್ಗೆ ಚಿಂತನೆ ನಡೆಸಿದ್ದು, ಈ ಬಗ್ಗೆ ಸಲಹೆ ಕೇಳಿದ್ದೇವೆ ಎಂದು ಹೇಳಿದ್ದಾರೆ.

ವಿಶ್ವ ಭೂಪಟದಲ್ಲಿ ಮಾಹಿತಿ ತಂತ್ರಜ್ಞಾನದ ರಾಜಧಾನಿಯಾಗಿ ಗುರುತಿಸಿಕೊಂಡಿರುವ ಕರ್ನಾಟಕ, ಈಗ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCCs) ಮುಂಚೂಣಿ ತಾಣವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ರಾಜ್ಯದಲ್ಲಿ ನಾವೀನ್ಯತೆ-ನೇತೃತ್ವದ ಬೆಳವಣಿಗೆಯ ಮುಂದಿನ ಹಂತವನ್ನು ರೂಪಿಸುವ ನಿಟ್ಟಿನಲ್ಲಿ ಆಯೋಜಿಸಲಾದ ‘ಕ್ಯಾಟಲಿಸ್ಟ್ ಕನೆಕ್ಟ್’ (KATALYST CONNECT) ಉನ್ನತ ಮಟ್ಟದ ಕಾರ್ಯತಂತ್ರದ ಸಭೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಶಾಸಕ ಶರತ್‌ ಬಚ್ಚೇಗೌಡ ಅವರು ಜೊತೆಯಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಮಾಲೋಚನಾ ಸಭೆಗೂ ಮುನ್ನ ಮುಖ್ಯಮಂತ್ರಿಗಳು ಟಾರ್ಗೆಟ್ ಇಂಡಿಯಾದ ಬೆಂಗಳೂರು ಕ್ಯಾಂಪಸ್‌ಗೆ ಭೇಟಿ ನೀಡಿ, ಕೃತಕ ಬುದ್ಧಿಮತ್ತೆ, ಡೇಟಾ ಸೈನ್ಸ್ ಹಾಗೂ ಉತ್ಪನ್ನ ಅಭಿವೃದ್ಧಿ ಸೇರಿದಂತೆ ರಾಜ್ಯದಿಂದ ಜಾಗತಿಕ ಮಟ್ಟಕ್ಕೆ ವಿಸ್ತರಿಸುತ್ತಿರುವ ಸಾಮರ್ಥ್ಯಗಳ ಕುರಿತು ಸಮಾಲೋಚನೆ ನಡೆಸಿದರು. ಈ ಸಂವಾದದಲ್ಲಿ ಗೂಗಲ್, ಇಂಟೆಲ್, ಐಬಿಎಂ, ಬಾಷ್ ಸೇರಿದಂತೆ ಪ್ರಮುಖ ಬಹುರಾಷ್ಟ್ರೀಯ ಉದ್ಯಮಗಳ 150ಕ್ಕೂ ಹೆಚ್ಚು ಹಿರಿಯ ಕಾರ್ಯನಿರ್ವಾಹಕರು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಕೃತಕ ಬುದ್ಧಿಮತ್ತೆ (AI), ಉದ್ಯಮ ಪರಿವರ್ತನೆ, ಕೌಶಲ್ಯಾಭಿವೃದ್ಧಿ, ಡಿಜಿಟಲ್ ಹಾಗೂ ನಗರ ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಬೆಂಗಳೂರಿನ ಆಚೆಗೂ ‘ಜಿಸಿಸಿ’ ಹೂಡಿಕೆಗಳನ್ನು ವಿಸ್ತರಿಸುವ ಕುರಿತು ಸಭೆಯಲ್ಲಿ ಉದ್ಯಮ ಪ್ರಮುಖರಿಂದ ಮಹತ್ವದ ಸಲಹೆ-ಶಿಫಾರಸುಗಳನ್ನು ಪಡೆಯಲಾಯಿತು. ಉದ್ಯಮಗಳು ಹೆಚ್ಚಿನ ಆತ್ಮವಿಶ್ವಾಸದಿಂದ ವಹಿವಾಟು ನಡೆಸಲು ಮತ್ತು ಜಾಗತಿಕ ಗುಣಮಟ್ಟದ ಪ್ರತಿಭೆಗಳನ್ನು ಆಕರ್ಷಿಸಲು ಅಗತ್ಯವಿರುವ ನಾವೀನ್ಯತೆಯ ಪರಿಸರವನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

1,100 ಕ್ಕೂ ಹೆಚ್ಚು ಜಿಸಿಸಿಗಳಿಗೆ ನೆಲೆಯಾಗಿರುವ ಬೆಂಗಳೂರು, ಹೊಸತನ, ಅನ್ವೇಷಣೆ ಮತ್ತು ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ಹೊರಹೊಮ್ಮಿದೆ. ಅಲ್ಲದೆ, ಭಾರತದ ರಿಟೇಲ್ ಜಿಸಿಸಿ ಎಐ (AI) ಪ್ರತಿಭೆಗಳಲ್ಲಿ ಶೇ. 30.6 ರಷ್ಟು ಪಾಲನ್ನು ಹೊಂದುವ ಮೂಲಕ, ಕೃತಕ ಬುದ್ಧಿಮತ್ತೆ (AI) ಆರ್ಥಿಕತೆಯಲ್ಲಿ ಕರ್ನಾಟಕದ ನಾಯಕತ್ವವನ್ನು ನಾವು ಮತ್ತೊಮ್ಮೆ ಸಾಬೀತುಪಡಿಸಿದ್ದೇವೆ.

ರಾಜ್ಯದ ಆರ್ಥಿಕ ಪ್ರಗತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ನಮ್ಮ ಸರ್ಕಾರವು 2029ರ ಒಳಗೆ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ, ಯುವ ಜನತೆಗೆ 3.5 ಲಕ್ಷ ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ₹ 4.76 ಲಕ್ಷ ಕೋಟಿ ($50 ಶತಕೋಟಿ ಡಾಲರ್) ಮೊತ್ತದ ಆರ್ಥಿಕ ಉತ್ಪಾದನೆಯ ಗುರಿ ಸಾಧಿಸುವ ಮಹತ್ವಾಕಾಂಕ್ಷಿ ಬದ್ಧತೆಯನ್ನು ಪುನರುಚ್ಚರಿಸಲಾಯಿತು. ಕೈಗಾರಿಕಾ ವಲಯದ ಬದಲಾಗುತ್ತಿರುವ ಅಗತ್ಯಗಳಿಗೆ ಸ್ಪಂದಿಸಲು ‘ಕರ್ನಾಟಕ ಜಿಸಿಸಿ ನೀತಿ 2024-2029’, ‘ಕ್ಯಾಟಲಿಸ್ಟ್’, ‘ಲೀಪ್’ ಹಾಗೂ ‘ನಿಪುಣ’ ನಂತಹ ಪ್ರಮುಖ ಉಪಕ್ರಮಗಳ ಮೂಲಕ ಉದ್ಯಮ ಹಾಗೂ ಸರ್ಕಾರದ ಸಹಭಾಗಿತ್ವವನ್ನು ಇನ್ನಷ್ಟು ಬಲಪಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular