ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ಅಕ್ಷರಶಃ ಜಗತ್ತನ್ನೇ ಆಳುತ್ತಿದೆ. ಯಾವುದೋ ಸುಳ್ಳನ್ನು ಅಪ್ಪಟ ವಾಸ್ತವ ಎಂಬಂತೆ ನಂಬಿಸುವ ಶಕ್ತಿ ಈ ತಂತ್ರಜ್ಞಾನಕ್ಕಿದೆ. ಎಐ ಎಂಬುದು ಎಷ್ಟು ವರದಾನವೋ ಅಷ್ಟೇ ಅಪಾಯಕಾರಿ ಕೂಡ ಹೌದು. ಇತ್ತೀಚೆಗೆ ಈ ತಂತ್ರಜ್ಞಾನವನ್ನು ಅಪಪ್ರಚಾರ ಅಥವಾ ಅಶ್ಲೀಲತೆಗೆ ಬಳಸುತ್ತಿರುವ ದೂರುಗಳ ನಡುವೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಒಂದು ಮಜಾವಾದ ಪ್ರಾಂಕ್ ಘಟನೆ ಈಗ ಎಲ್ಲರ ಗಮನ ಸೆಳೆದಿದೆ. ಎಐ ಮೂಲಕ ಸೃಷ್ಟಿಸಿದ ತನ್ನ ನಕಲಿ ಪ್ರೇಮಿಯ ಫೋಟೋ ತೋರಿಸಿ ಮಗಳು ತನ್ನ ತಾಯಿಯ ಕಾಲೆಳೆದಿರುವ ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಲಕ್ನೋದ ಪವನಿ ಅವಸ್ಥಿ ಎಂಬ ಯುವತಿ ಚಾಟ್ಜಿಪಿಟಿ (ChatGPT) ಮೂಲಕ ತಾನು ಒಬ್ಬ ಯುವಕನ ಜೊತೆ ನಿಂತಿರುವಂತೆ ಪಕ್ಕಾ ರಿಯಲಿಸ್ಟಿಕ್ ಫೋಟೋ ಒಂದನ್ನು ಸೃಷ್ಟಿಸಿದ್ದರು. ಈ ನಕಲಿ ಫೋಟೋ ಹಿಡಿದು ಅಮ್ಮನ ಮುಂದೆ ಹೋದ ಪವನಿ ಇವನೇ ನನ್ನ ಬಾಯ್ಫ್ರೆಂಡ್ ಇವನಿಗೆ ಸರ್ಕಾರಿ ಕೆಲಸವಿದೆ ತುಂಬಾ ಶ್ರೀಮಂತ ಕೂಡ ಶೀಘ್ರದಲ್ಲೇ ನಮ್ಮ ಮನೆಗೆ ಬರ್ತಿದ್ದಾನೆ ಎಂದು ಬಾಂಬ್ ಸಿಡಿಸಿದರು
https://www.instagram.com/reel/DTVK0Y-ktfr/?utm_source=ig_web_copy_link
ಫೋಟೋ ನೋಡುತ್ತಿದ್ದಂತೆ ಕೆಂಡಾಮಂಡಲವಾದ ತಾಯಿ ಯಾರವನು? ನನಗೇಕೆ ಗೊತ್ತಿಲ್ಲ? ಅಪ್ಪನಿಗೆ ವಿಷಯ ಗೊತ್ತಾದ್ರೆ ಸುಮ್ಮನೆ ಬಿಡಲ್ಲ ಎಂದು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ. ಅಷ್ಟಕ್ಕೇ ನಿಲ್ಲದೆ ಕೋಪದಲ್ಲಿ ಮಗಳಿಗೆ ಒಂದೇಟು ಕೊಟ್ಟು ಫೋನ್ ಎಸೆಯಲು ಮುಂದಾಗಿದ್ದಾರೆ. ಎಐ ಸೃಷ್ಟಿಸಿದ ಸುಳ್ಳನ್ನು ಅಪ್ಪಟ ಸತ್ಯವೆಂದು ನಂಬಿದ ಅಮ್ಮನ ಈ ರಿಯಾಕ್ಷನ್ ವಿಡಿಯೋ ಈಗ ಇನ್ಸ್ಟಾಗ್ರಾಮ್ನಲ್ಲಿ ಬರೋಬ್ಬರಿ 4 ಮಿಲಿಯನ್ ವೀಕ್ಷಣೆ ಗಳಿಸಿ ಸಖತ್ ವೈರಲ್ ಆಗುತ್ತಿದೆ.
ನೆಟ್ಟಿಗರ ರಿಯಾಕ್ಷನ್:
ಈ ಮಜಾವಾದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು ಈಗಾಗಲೇ 4 ಮಿಲಿಯನ್ (40 ಲಕ್ಷ) ಗೂ ಅಧಿಕ ವೀಕ್ಷಣೆಗಳನ್ನು ಬಾಚಿಕೊಂಡಿದೆ. ವಿಡಿಯೋ ನೋಡಿದ ಸಾವಿರಾರು ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಾ ನಗೆಗಡಲಲ್ಲಿ ತೇಲುತ್ತಿದ್ದಾರೆ.
ಒಬ್ಬ ಬಳಕೆದಾರರು ತಮಾಷೆಯಾಗಿ, ಇವತ್ತಿಗೆ ಮಗಳು ಹೇಗೋ ಪ್ರಾಣಾಪಾಯದಿಂದ ಪಾರಾದಳು, ಆದರೆ ಪದೇ ಪದೇ ಇಂತಹ ಸಾಹಸ ಮಾಡಬೇಡ ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನಾನು ಎಐ ವಿರೋಧಿ ಆದರೆ ಇಂತಹ ಪ್ರಾಂಕ್ಗಳಿಗೆ ಇದನ್ನು ಬಳಸುವುದು ನಿಜಕ್ಕೂ ಕ್ರಿಯೇಟಿವ್ ಆಗಿದೆ ಎಂದು ಶ್ಲಾಘಿಸಿದ್ದಾರೆ. ಒಟ್ಟಿನಲ್ಲಿ ಎಐ ಅಂದಾಕ್ಷಣ ಕೇವಲ ಭಯಪಡುವ ಕಾಲದಲ್ಲಿ ಇಂತಹ ಸಣ್ಣ ಪುಟ್ಟ ತಮಾಷೆಗಳು ಸೋಷಿಯಲ್ ಮೀಡಿಯಾದಲ್ಲಿ ಮಂದಹಾಸ ಮೂಡಿಸುತ್ತಿವೆ

