HomeKarnatakaಗ್ರಾಮೀಣಾಭಿವೃದ್ಧಿ ಇಲಾಖೆಯ AEE ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಭಾಗಿ: ದಾಖಲೆ ಬಿಡುಗಡೆ ಮಾಡಿದ...

ಗ್ರಾಮೀಣಾಭಿವೃದ್ಧಿ ಇಲಾಖೆಯ AEE ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆ ಭಾಗಿ: ದಾಖಲೆ ಬಿಡುಗಡೆ ಮಾಡಿದ ಕುಮಾರಸ್ವಾಮಿ

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆಯ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ (AEE) ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಇದರಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಎಇಇ ಅಕ್ರಮದ ಬಗ್ಗೆ ತನಿಖೆ ನಡೆದಿದೆ. 24 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ಸಾಬೀತಾಗಿದ್ದರೂ, ಅಂದಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತರಾತುರಿಯಲ್ಲಿ ನೇಮಕಾತಿ ಪತ್ರಗಳನ್ನ ಹಸ್ತಾಂತರಿಸಿದ್ದಾರೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ವೇಳೆ ದಾಖಲೆ ಬಿಡುಗಡೆ ಮಾಡಿ ಮಾತನಾಡಿದ ಕುಮಾರಸ್ವಾಮಿ, ಈ ಪ್ರಕರಣದಲ್ಲಿ ಅಂದಿನ ಕೆಪಿಎಸ್‌ಸಿ ಕಾರ್ಯದರ್ಶಿ ಸೇರಿದಂತೆ ಹಲವು ಹಂತಗಳಲ್ಲಿ ಅಕ್ರಮ ನಡೆದಿದೆ. ಈ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸುವಂತೆ ನ್ಯಾಯಾಲಯ ಅಭಿಪ್ರಾಯಪಟ್ಟಿದೆ ಎಂದು ಹೇಳಿದರು. ಗಂಭೀರ ಅಕ್ರಮ ಆರೋಪದಲ್ಲಿ ಭಾಗಿಯಾಗಿರುವ ಸಚಿವ ಪ್ರಿಯಾಂಕ್ ಖರ್ಗೆ, ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪರೀಕ್ಷಾ ಪ್ರಕ್ರಿಯೆ ನಡೆದು, 2024ರಲ್ಲಿ ನೇಮಕಾತಿ ನಡೆದಿದೆ. ಒಟ್ಟು 24 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ.

OMR ತಿದ್ದುಪಡಿ ಸೇರಿದಂತೆ ವಿವಿಧ ಹಂತಗಳಲ್ಲಿ ಅಕ್ರಮ ನಡೆದಿದೆ. ತನಿಖೆಗಾಗಿ ರಚಿಸಲಾಗಿದ್ದ ಮೂರು ಸದಸ್ಯರ ಸಬ್ ಕಮಿಟಿ ಪ್ರಕರಣವನ್ನು ಪರಿಶೀಲಿಸಿತ್ತು. ಸಬ್ ಕಮಿಟಿಯ ಶಿಫಾರಸು ಇಲ್ಲದೆ ಹಾಗೂ ಆಯೋಗದ ಅನುಮತಿಯೂ ಇಲ್ಲದೆ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಒತ್ತಡ ಹೇರಲಾಗಿತ್ತು.

ಅಕ್ರಮದ ಆರೋಪ ಎದುರಿಸುತ್ತಿದ್ದ 24 ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿದ್ದು ಏಕೆ? ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಇಲಾಖೆ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಎಇಇ ನೇಮಕಾತಿ ಪ್ರಕರಣದಲ್ಲಿ 24 ಅಭ್ಯರ್ಥಿಗಳು 1 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಅವರ OMR ತಿದ್ದುಪಡಿ ಸೇರಿದಂತೆ ಅಕ್ರಮ ನಡೆದಿದೆ ಎಂಬ ವರದಿ ಇದ್ದರೂ ಈ ಬಗ್ಗೆ ಸಚಿವರು ಏಕೆ ಮಾತನಾಡುತ್ತಿಲ್ಲ? ಯಾವುದೇ ನ್ಯಾಯಾಲಯವೂ ನೇಮಕಾತಿ ಮಾಡಿ ಎಂದು ಹೇಳಿಲ್ಲ. ಹಾಗಿದ್ದರೆ ಯಾರಿಗೆ ಕಿಕ್‌ಬ್ಯಾಕ್ ಹೋಗಿದೆ? ಎಂಬುದನ್ನ ಪ್ರಿಯಾಂಕ್ ಖರ್ಗೆ ಅವರೇ ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ.

ಅಭ್ಯರ್ಥಿಯಾಗಿದ್ದ ಆನಂದ್ ಎಸ್. ಸಿದ್ದರೆಡ್ಡಿ ಅವರು 2023ರ ಸೆಪ್ಟೆಂಬರ್ 25ರಂದು ಕೆಪಿಎಸ್‌ಸಿ ಕಾರ್ಯದರ್ಶಿಗೆ ಇ-ಮೇಲ್ ಮೂಲಕ ಅಕ್ರಮದ ಕುರಿತು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಕೆಪಿಎಸ್‌ಸಿ ಮೂರು ಸದಸ್ಯರ ಸಬ್ ಕಮಿಟಿಯನ್ನು ರಚಿಸಿ ತನಿಖೆ ನಡೆಸಿತ್ತು. ಇದೇ ಅಭ್ಯರ್ಥಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ಅಂತಿಮ ಆದೇಶ ಬರುವವರೆಗೆ ನೇಮಕಾತಿ ಪತ್ರ ನೀಡಬಾರದು ಎಂದು ನ್ಯಾಯಾಲಯ ಸೂಚಿಸಿತ್ತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ನ್ಯಾಯಾಲಯದ ಮುಂದೆ ಪ್ರಕರಣವಿದ್ದರೂ, ಅಕ್ರಮದ ಆರೋಪಗಳಿದ್ದರೂ ನೇಮಕಾತಿ ಪತ್ರ ನೀಡಿದ್ದು ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಕೆಪಿಎಸ್‌ಸಿ ಹಾಗೂ ನೇಮಕಾತಿ ವ್ಯವಸ್ಥೆ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ ಅವರ ಕೃಪಾ ಪೋಷಿತ ಮಂಡಳಿ ನಡೆಯುತ್ತಿದೆ. ಬೇಲಿ ಎದ್ದು ಹೊಲ ಮೇಯ್ದ ಪ್ರಕರಣ ಎಂಬ ರೀತಿಯಲ್ಲಿ ವ್ಯವಸ್ಥೆಯೇ ಅಕ್ರಮಕ್ಕೆ ಕಾರಣವಾಗುತ್ತಿದೆ ಎಂದು ಗುಡುಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular