ನವದೆಹಲಿ: ಕಳೆದ ಎರಡು ದಿನಗಳಿಂದ ಅನೇಕ ತೆರಿಗೆದಾರರು ಮತ್ತು ಚಾರ್ಟರ್ಡ್ ಅಕೌಂಟೆಂಟ್‌ಗಳಲ್ಲಿ ಆತಂಕ ಸೃಷ್ಟಿಸಿದ್ದ ಮುಂಗಡ ತೆರಿಗೆ ಇಮೇಲ್‌ಗಳ ಕುರಿತು ಈಗ ಆದಾಯ ತೆರಿಗೆ ಇಲಾಖೆಯೇ ಅಧಿಕೃತ ಸ್ಪಷ್ಟನೆ ನೀಡಿದೆ. ಇಲಾಖೆಯಿಂದ ಬಂದ ಕೆಲವು ಇಮೇಲ್‌ಗಳಲ್ಲಿ ತಪ್ಪು ಮಾಹಿತಿಗಳಿದ್ದು, ಅವುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತೆ ಸೂಚಿಸಲಾಗಿದೆ.
ಏನಿದು ತಾಂತ್ರಿಕ ಎಡವಟ್ಟು?
ಆದಾಯ ತೆರಿಗೆ ಇಲಾಖೆಯು ಪ್ರಸ್ತುತ 2026-27ನೇ ಸಾಲಿನ ಮುಂಗಡ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಇ-ಅಭಿಯಾನ ನಡೆಸುತ್ತಿದೆ. ಈ ವೇಳೆ ಸ್ವಯಂಚಾಲಿತ ವ್ಯವಸ್ಥೆಯ ಮೂಲಕ ತೆರಿಗೆದಾರರಿಗೆ ಇಮೇಲ್‌ಗಳನ್ನು ಕಳುಹಿಸಲಾಗಿತ್ತು. ಆದರೆ, ಈ ಪ್ರಕ್ರಿಯೆಯಲ್ಲಿ ದೊಡ್ಡ ತಾಂತ್ರಿಕ ದೋಷ ಸಂಭವಿಸಿದ್ದು, ಅನೇಕರಿಗೆ ಅವರು ಮಾಡದ ಮಹತ್ವದ ವಹಿವಾಟುಗಳ (Significant Transactions) ಬಗ್ಗೆ ಮಾಹಿತಿ ರವಾನೆಯಾಗಿದೆ. ಅಂದರೆ, ವಾಸ್ತವಕ್ಕೆ ಸಂಬಂಧವಿಲ್ಲದ ಡೇಟಾ ನೋಡಿ ಜನರು ಕಂಗಾಲಾಗಿದ್ದರು.
ಇಲಾಖೆಯ ಪ್ರಮುಖ ಸೂಚನೆಗಳು ಇಲ್ಲಿವೆ:
ಗಾಬರಿ ಬೇಡ, ಇಗ್ನೋರ್ ಮಾಡಿ: ಮುಂಗಡ ತೆರಿಗೆ ಬಗ್ಗೆ ಈ ಮೊದಲು ಬಂದಿರುವ ಇಮೇಲ್‌ಗಳಲ್ಲಿ ದೋಷವಿರುವುದರಿಂದ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ.
ಇದು ನೋಟಿಸ್ ಅಲ್ಲ: ಈ ಇಮೇಲ್‌ಗಳು ಕೇವಲ ಮುಂಗಡ ತೆರಿಗೆ ಪಾವತಿಯನ್ನು ನೆನಪಿಸುವ ನೆನಪೋಲೆ’ಗಳಾಗಿವೆಯೇ ಹೊರತು, ಇವು ಯಾವುದೇ ರೀತಿಯ ಅಧಿಕೃತ ನೋಟಿಸ್‌ಗಳಲ್ಲ.
ಪರಿಶೀಲಿಸುವುದು ಹೇಗೆ?: ನಿಮ್ಮ ವಹಿವಾಟಿನ ಸರಿಯಾದ ಮಾಹಿತಿಗಾಗಿ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ನಲ್ಲಿರುವ ‘Compliance Portal’ ಗೆ ಭೇಟಿ ನೀಡಿ, ಅಲ್ಲಿನ ‘e-Campaign’ ಟ್ಯಾಬ್ ಅನ್ನು ಪರಿಶೀಲಿಸಿ.
ಇಲಾಖೆಯ ವಿಷಾದ:
ನಮ್ಮ ಸೇವಾ ಪೂರೈಕೆದಾರರ ಜೊತೆಗೂಡಿ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ನಾವು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇವೆ. ತೆರಿಗೆದಾರರಿಗೆ ಉಂಟಾದ ಅನಾನುಕೂಲಕ್ಕೆ ನಾವು ವಿಷಾದಿಸುತ್ತೇವೆ,” ಎಂದು ಇಲಾಖೆಯು ತನ್ನ ‘X’ ಖಾತೆಯಲ್ಲಿ ತಿಳಿಸಿದೆ.

