ಬೆಂಗಳೂರು : ನಮ್ಮ ಮೆಟ್ರೋದ 3ನೇ ಹಂತದ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಮೆಟ್ರೋ ಹಂತ 2 ಎ ಮತ್ತು 2 ಬಿ ಕಾಮಗಾರಿ ಇನ್ನೆರಡು ವರ್ಷಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಇನ್ನಷ್ಟು ಕಡಿಮೆ ಮಾಡುವ ಉದ್ದೇಶದಿಂದ ನಮ್ಮಮೆಟ್ರೋ 3ನೇ ಹಂತದ ಯೋಜನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ರೂ.15,611 ಕೋಟಿ ಅಂದಾಜು ವೆಚ್ಚದಲ್ಲಿ ಈ ಕಾಮಗಾರಿ ನಡೆಯಲಿದೆ.ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಈ ಯೋಜನೆಗೆ ರಾಜ್ಯ ಶೇ.80 ರಿಂದ 85 ರಷ್ಟು ಮೊತ್ತ ಭರಿಸಲಿದ್ದು, ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ನೀಡಲಿದೆ.
ಒಟ್ಟು 44.65 ಕಿ.ಮೀ ಉದ್ದದ ಮೆಟ್ರೋ ಯೋಜನೆ ಇದಾಗಿದ್ದು, ಜೆ.ಪಿ ನಗರ 4ನೇ ಹಂತದಿಂದ ಪಶ್ಚಿಮ ಹೊರವರ್ತುಲ ರಸ್ತೆಯುದ್ದಕ್ಕೂ ಕೆಂಪಾಪುರದವರೆಗೆ 32.15 ಕಿ.ಮೀ. ಹಾಗೂ ಕಾರಿಡಾರ್ -2 ಹೊಸಹಳ್ಳಿಯಿಂದ ಮಾಗಡಿ ರಸ್ತೆಯುದ್ದಕ್ಕೂ ಕಡಬಗೆರೆವರೆಗೆ 12.50 ಕಿ.ಮೀ ವ್ಯಾಪ್ತಿಯಲ್ಲಿ ಈ ಕಾಮಗಾರಿ ನಡೆಯಲಿದ್ದು, 2028ರ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

