HomeIndiaತಮಿಳುನಾಡು ಚುನಾವಣೆ; ನಟ ವಿಜಯ್ ಪಕ್ಷಕ್ಕೆ ಚಿಹ್ನೆ ನೀಡಿದ ಆಯೋಗ

ತಮಿಳುನಾಡು ಚುನಾವಣೆ; ನಟ ವಿಜಯ್ ಪಕ್ಷಕ್ಕೆ ಚಿಹ್ನೆ ನೀಡಿದ ಆಯೋಗ

ತಮಿಳುನಾಡು ವಿಧಾನಸಭೆ ಚುನಾವಣೆ-2026 ತಯಾರಿ ನಡೆಸುತ್ತಿರುವ ನಟ ವಿಜಯ್ ಪಕ್ಷಕ್ಕೆ ಕೇಂದ್ರ ಚುನಾವಣಾ ಆಯೋಗ ಚಿಹ್ನೆಯನ್ನು ಹಂಚಿಕೆ ಮಾಡಿದೆ. ತಮಿಳುನಾಡು ಮತ್ತು ಪುದುಚೇರಿ ಚುನಾವಣೆಗೆ ನಟ ವಿಜಯ್ ನೇತೃತ್ವದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ.

ಗುರುವಾರ ಕೇಂದ್ರ ಚುನಾವಣಾ ಆಯೋಗ ನಟ ವಿಜಯ್ ಮತ್ತು ಕಮಲ್ ಹಾಸನ್ ಅವರ ಪಕ್ಷಗಳಿಗೆ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಿ ಆದೇಶವನ್ನು ಹೊರಡಿಸಿದೆ. ಇನ್ನು ಮುಂದೆ ವಿಜಯ್ ಪಕ್ಷದ ಚಿಹ್ನೆಯನ್ನು ಮುಂದಿಟ್ಟುಕೊಂಡು ಚುನಾವಣಾ  ಪ್ರಚಾರ ನಡೆಸಬಹುದು.

ಆಯೋಗ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ‘ವಿಷಲ್’ ಚಿಹ್ನೆಯನ್ನು ನೀಡಿದೆ. ಪಕ್ಷದ ಅಭ್ಯರ್ಥಿಗಳು ಮುಂಬರುವ ತಮಿಳುನಾಡು ಮತ್ತು ಪುದುಚೇರಿ ಚುನಾವಣೆಯಲ್ಲಿ ಈ ಚಿಹ್ನೆಯ ಅಡಿಯಲ್ಲಿಯೇ ಸ್ಪರ್ಧೆ ಮಾಡಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭರವಸೆಯಲ್ಲಿರುವ ನಟ: ನಟ ವಿಜಯ್ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಜನರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಬೆಂಬಲ ನೀಡಲಿದ್ದಾರೆ ಎಂಬ ಭಾರೀ ವಿಶ್ವಾಸದಲ್ಲಿದ್ದಾರೆ. ಪಕ್ಷದ ಸಮಾವೇಶಗಳಿಗೆ ಸಾವಿರಾರು ಜನರು ಸೇರುತ್ತಿದ್ದು, ಪಕ್ಷದ ನಾಯಕರ ಉತ್ಸಾಹ ಇನ್ನಷ್ಟು ಹೆಚ್ಚಿದೆ.

ತಮಿಳುನಾಡು ರಾಜ್ಯದ ಆಡಳಿತ ಪಕ್ಷ ಡಿಎಂಕೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್. ಪ್ರತಿಪಕ್ಷ ಎಐಎಡಿಎಂಕೆ. ವಿಜಯ್ ನೇತೃತ್ವದ ಟಿವಿಕೆ ಪಕ್ಷ ಕಾಂಗ್ರೆಸ್, ಬಿಜೆಪಿ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳದೇ ಇಬ್ಬರು ಸಮಾನ ಎದುರಾಳಿಗಳು ಎಂದು ಹೇಳಿದೆ.

ಟಿವಿಕೆ ಪಕ್ಷ ವಿಜಯ್ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಇಂಡಿಯಾ ಅಥವ ಎನ್‌ಡಿಎ ಮೈತ್ರಿಕೂಟಕ್ಕೆ ಸೇರುವುದಿಲ್ಲ ಎಂದು ಘೋಷಣೆ ಮಾಡಿದೆ. ಆದರೆ ಚುನಾವಣೆ ಹತ್ತಿರ ಬರುವಾಗ ಪಕ್ಷ ನಿಲುವು ಬದಲಾವಣೆ ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.

2024ರಲ್ಲಿಯೇ ಕೇಂದ್ರ ಚುನಾವಣಾ ಆಯೋಗ ಟಿವಿಕೆ ಪಕ್ಷಕ್ಕೆ ಅಧಿಕೃತ ರಾಜಕೀಯ ಪಕ್ಷದ ಸ್ಥಾನಮಾನವನ್ನು ನೀಡಿತ್ತು. ಬಳಿಕ ವಿಜಯ್ ಸಿನಿಮಾದಿಂದಲೂ ಬಿಡುವು ತೆಗೆದುಕೊಂಡು ತಮಿಳುನಾಡಿನಲ್ಲಿ ಪ್ರಚಾರ ಸಭೆಗಳನ್ನು ಮಾಡುತ್ತಿದ್ದಾರೆ.

ಡಿಸೆಂಬರ್ ತಿಂಗಳಿನಲ್ಲಿ ಅವರು ಪುದುಚೇರಿಯಲ್ಲಿಯೂ ಸಮಾವೇಶ ಮಾಡುವ ಮೂಲಕ ಕೇಂದ್ರಾಡಳಿತ ಪ್ರದೇಶದ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಘೋಷಣೆ ಮಾಡಿದ್ದರು.

ನಟ ವಿಜಯ್ ಜನವರಿ 16 ರಂದು ವಿಧಾನಸಭೆ ಚುನಾವಣೆಗೆ ಜಿಲ್ಲಾ ಮತ್ತು ಕ್ಷೇತ್ರ ಮಟ್ಟದಲ್ಲಿ ಪಕ್ಷದ ಚುನಾವಣಾ ಪ್ರಚಾರ ಚಟುವಟಿಕೆಗಳನ್ನು ಸಂಘಟಿಸಲು 12 ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಿದ್ದಾರೆ. 

ಟಿವಿಕೆ ಪಕ್ಷ ಸೆಪ್ಟೆಂಬರ್ 27ರಂದು ಕರೂರಿನಲ್ಲಿ ದೊಡ್ಡ ಸಮಾವೇಶ ಆಯೋಜನೆ ಮಾಡಿತ್ತು. ಈ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದು, ಕೆಲವು ದಿನಗಳ ಕಾಲ ಪ್ರಚಾರ ಸಭೆಯನ್ನೇ ಪಕ್ಷ ಸ್ಥಗಿತಗೊಳಿಸಿತ್ತು.

ನಮ್ಮ ಪಕ್ಷ ಸಾಮಾಜಿಕ ನ್ಯಾಯದ ಹಾದಿಯನ್ನು ಅನುಸರಿಸಲಿದೆ. ಪಕ್ಷವು ಪಾರದರ್ಶಕ, ಜಾತಿ ಮುಕ್ತ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತದೊಂದಿಗೆ ಬದಲಾವಣೆಗಾಗಿ ಹೋರಾಡಲಿದೆ ಎಂದು ನಟ ವಿಜಯ್ ಭರವಸೆ ನೀಡಿದ್ದಾರೆ.

ವಿಜಯ್ ಪಕ್ಷ ಟಿವಿಕೆ ಎಂಬ ಸಂಕ್ಷಿಪ್ತ ರೂಪ ಬಳಕೆ ಮಾಡಲು ಪಿಎಂಕೆಯಿಂದ ವಿಭಜನೆಯಾಗಿ ಪನ್ರುತಿ ಶಾಸಕ ಟಿ ವೇಲುಮುರುಗನ್ ಅವರು ಸ್ಥಾಪಿಸಿರುವ ತಮಿಳಿಗ ವಳುರಿಮೈ ಕಚ್ಚಿ (ಟಿವಿಕೆ) ಪಕ್ಷ ಆಕ್ಷೇಪ ವ್ಯಕ್ತಪಡಿಸಿತ್ತು.

ಈ ಆಕ್ಷೇಪದ ನಡುವೆಯೂ ಅದೇ ರೀತಿಯ ಸಂಕ್ಷಿಪ್ತ ಹೆಸರನ್ನು ವಿಜಯ್ ಅವರ ಹೊಸ ರಾಜಕೀಯ ಪಕ್ಷದ ನೋಂದಣಿಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸಲಾಗಿತ್ತು. ಆಯೋಗ ಇದಕ್ಕೆ ಹಸಿರು ನಿಶಾನೆ ತೋರಿಸಿದೆ.

ಕಾಂಗ್ರೆಸ್ ಪಕ್ಷ ಟಿವಿಕೆ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಈಗಾಗಲೇ ಘೋಷಣೆ ಮಾಡಿದೆ. ಆದರೆ ಬಿಜೆಪಿ-ಟಿವಿಕೆ ಮೈತ್ರಿ ಮಾಡಿಕೊಳ್ಳಲಿವೆ ಎಂಬ ಸುದ್ದಿಗಳು ಇದ್ದು, ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular