ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಸ್ಪತ್ರೆಯಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೆಂಕನಿಡಿಯೂರು ನಿವಾಸಿ ಕಿರಣ್ ಪಿಂಟೋ(49) ಬಂಧಿತ ಆರೋಪಿ. ಜನವರಿ 18ರಂದು ಬ್ರಹ್ಮಾವರದ ಬಾರ್ ಎದುರು ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಿರಣ್ ಗಾಯಗೊಂಡು ಉಡುಪಿಯ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ.
ಜನವರಿ 21ರಂದು ಬೆಳಗಿನ ಜಾವ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದ. ತೀವ್ರ ಹುಡುಕಾಟ ನಡೆಸಿದ ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

