HomeKarnatakaಅಪಘಾತ ಪರಿಹಾರ ಯೋಜನೆ’: ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಅಪಘಾತ ಪರಿಹಾರ ಯೋಜನೆ’: ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಮಡಿಕೇರಿ : ಕಾರ್ಮಿಕ ಇಲಾಖೆ  ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆಯಡಿಯಲ್ಲಿ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‍ಗಳು ನಿರಂತರವಾಗಿ ಅಪಘಾತಗಳಿಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಅಪಘಾತಕ್ಕೀಡಾದಾಗ ಮರಣಕ್ಕೆ ತುತ್ತಾಗುವ, ಶಾಶ್ವತ ದುರ್ಬಲತೆ ಅಥವಾ ತಾತ್ಕಲಿಕ ದುರ್ಬಲತೆ ಹೊಂದಿದ ಸಂದರ್ಭದಲ್ಲಿ, ಅವರ ದುಡಿಮೆಯನ್ನೇ ಅವಲಂಬಿಸಿರುವ ಅವರ ಕುಟುಂಬವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ. ಇಂತಹ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಅಪಘಾತ ಪರಿಹಾರ ಸೌಲಭ್ಯ ಒದಗಿಸುವ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸುವ ಸದುದ್ದೇಶದಿಂದ ರಾಜ್ಯ ಸರ್ಕಾರವು ‘ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರ ಅಪಘಾತ ಪರಿಹಾರ ಯೋಜನೆ’’ ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು 2012 ರಲ್ಲಿ ಜಾರಿಗೆ ತಂದಿದೆ.

ಈ ಯೋಜನೆಯಡಿ ದೊರಕುವ ಸೌಲಭ್ಯಗಳು ಇಂತಿವೆ. ಅಪಘಾತ ಪರಿಹಾರ ಯೋಜನೆಯ ವಿಶೇಷತೆಗಳು. ಈ ಯೋಜನೆಯು ಕರ್ನಾಟಕ ರಾಜ್ಯಕ್ಕೆ ಮಾತ್ರ ಅನ್ವಯಿಸುತ್ತದೆ. ಯೋಜನೆಯು ಖಾಸಗಿ ವಾಣಿಜ್ಯ ಸಾರಿಗೆ ಕಾರ್ಮಿಕರಾದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‍ಗಳಿಗೆ ಅನ್ವಯಿಸುತ್ತದೆ. ವಯೋಮಿತಿ 20 ರಿಂದ 70 ವರ್ಷಗಳು. ಯೋಜನೆಯ ಸೌಲಭ್ಯಗಳು ಕರ್ತವ್ಯದಲ್ಲಿರುವಾಗ ಹಾಗೂ ಇಲ್ಲದಿರುವಾಗಲೂ ಸಹ ಲಭ್ಯವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯೋಜನೆಯ ಷರತ್ತುಗಳು: ಚಾಲಕರು, ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯಿಂದ ವಾಣಿಜ್ಯ ವಾಹನ ಚಲಾಯಿಸಲು ಊರ್ಜಿತ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಡ್ಡಾಯ. ಚಾಲಕರು ಮಂಡಳಿಯಲ್ಲಿ ಯೋಜನೆಯಡಿ ಪ್ರತ್ಯೇಕವಾಗಿ ನೋಂದಣಿ ಮಾಡಿಸುವ ಅವಶ್ಯಕತೆ ಇರುವುದಿಲ್ಲ. ನಿರ್ವಾಹಕರು ಹಾಗೂ ಕ್ಲೀನರ್‍ಗಳು ಮಂಡಳಿಯ ನಿಯಮಾನುಸಾರ ಅಧಿಸೂಚಿಸಲ್ಪಟ್ಟ ಆಯಾಯ ಜಿಲ್ಲೆಯ ನೋಂದಣಿ ಅಧಿಕಾರಿಗಳಿಂದ ಯೋಜನೆಯಡಿ ಫಲಾನುಭವಿಯಾಗಿ ನೋಂದಣಿ ಮಾಡಿಸಿಕೊಳ್ಳಬೇಕು.

ಯೋಜನೆಯ ಸೌಲಭ್ಯಗಳು: ಅಪಘಾತದಿಂದ ಚಾಲಕರು, ನಿರ್ವಾಹಕರು ಹಾಗೂ ಕ್ಲೀನರ್‍ಗಳು ಮರಣ ಹೊಂದಿದಲ್ಲಿ, ಅವರ  ನಾಮ ನಿರ್ದೇಶಿತರಿಗೆ ರೂ.5 ಲಕ್ಷ ಪರಿಹಾರ. ಅಪಘಾತದಿಂದ ಶಾಶ್ವತ ದುರ್ಬಲತೆ ಹೊಂದಿದಾಗ, ಫಲಾನುಭವಿಗಳಿಗೆ ದುರ್ಬಲತೆಯ ಪ್ರಮಾಣಕ್ಕನುಗುಣವಾಗಿ ಗರಿಷ್ಠ ರೂ.2 ಲಕ್ಷದವರೆಗೆ ಪರಿಹಾರ. ಅಪಘಾತದಿಂದ ತಾತ್ಕಾಲಿಕ ದುರ್ಬಲತೆ ಹೊಂದಿದಾಗ, ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ 15 ದಿನಗಳಿಗಿಂತ ಕಡಿಮೆ ಅವಧಿಗೆ ಒಳರೋಗಿಯಾಗಿ ಚಿಕಿತ್ಸೆ ಪಡೆದಲ್ಲಿ, ಗರಿಷ್ಟ ರೂ.50 ಸಾವಿರವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುವುದು. 15 ದಿನಗಳಿಗಿಂತ ಹೆಚ್ಚು ದಿನ ಒಳರೋಗಿಯಾಗಿ ಚಿಕಿತ್ಸೆ ಪಡೆದಿದ್ದಲ್ಲಿ, ಗರಿಷ್ಠ ರೂ.1 ಲಕ್ಷದವರೆಗೆ ಅಥವಾ ನಿಖರ ಆಸ್ಪತ್ರೆ ವೆಚ್ಚ, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಪಾವತಿಸಲಾಗುವುದು.

ಪರಿಹಾರ ಮೊತ್ತವನ್ನು ಪಡೆಯಲು ಅಪಘಾತ ಸಂಭವಿಸಿದ ಒಂದು ವರ್ಷದೊಳಗೆ ಮಂಡಳಿಗೆ ಫಲಾನುಭವಿ/ ನಾಮ ನಿರ್ದೇಶಿತರು ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳಲ್ಲಿ, ಫಲಾನುಭವಿಯ ನಾಮ ನಿರ್ದೇಶಿತರು ಕ್ಲೇಮ್ ಅರ್ಜಿಯ ಜೊತೆಗೆ ಮರಣ ಪ್ರಮಾಣ ಪತ್ರ, ಮರಣೋತ್ತರ ಪರೀಕ್ಷಾ ವರದಿ, ಪ್ರಥಮ ವರ್ತಮಾನ ವರದಿ ಮತ್ತು ಊರ್ಜಿತ ಚಾಲನಾ/ ನಿರ್ವಾಹಕ ಪರವಾನಗಿ ಹಾಗೂ ಕ್ಲೀನರ್‍ಗಳು ನೋಂದಣಿ ಗುರುತಿನ ಚೀಟಿ ಲಗತ್ತಿಸಿ ಸಲ್ಲಿಸಬೇಕು.

ಅಪಘಾತದಿಂದ ದುರ್ಬಲತೆ ಉಂಟಾದಲ್ಲಿ ಕ್ಲೇಮ್ ಅರ್ಜಿಯ ಜೊತೆಗೆ ಊರ್ಜಿತ ಚಾಲನಾ/ ನಿರ್ವಾಹಕ ಪರವಾನಗಿ/ ಬ್ಯಾಡ್ಜ್, ಕ್ಲೀನರ್‍ಗಳು ನೋಂದಣಿ ಗುರುತಿನ ಚೀಟಿ, ಪ್ರಥಮ ವರ್ತಮಾನ ವರದಿ ಮತ್ತು ಒಳರೋಗಿ ಆಸ್ಪತ್ರೆ ವೆಚ್ಚ ಹಿಂಪಡೆಯಲು ವೈದ್ಯಕೀಯ ಪ್ರಮಾಣ ಪತ್ರ/ಬಿಲ್‍ಗಳ ಮೂಲ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಸ್ವೀಕರಿಸಿದ ಕ್ಲೇಮ್ ಅರ್ಜಿಯ ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸಿ ಅರ್ಹರಿದ್ದಲ್ಲಿ, ಪರಿಹಾರದ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.

ಅಪಘಾತದಿಂದ ಮರಣ ಹೊಂದಿದ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ ಫಲಾನುಭವಿಗಳ ಇಬ್ಬರು ಮಕ್ಕಳಿಗೆ, 1 ನೇ ತರಗತಿಯಿಂದ  ಪದವಿ ಪೂರ್ವ/12 ನೇ ತರಗತಿಯ ವರೆಗೆ ವಾರ್ಷಿಕ ತಲಾ ರೂ. 10,000/-ಗಳ ಶೈಕ್ಷಣಿಕ ಧನ ಸಹಾಯ ನೀಡಲಾಗುವುದು.

 ಶೈಕ್ಷಣಿಕ ಧನ ಸಹಾಯದ ಅರ್ಜಿಗಳನ್ನು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮುಖಾಂತರ ಅಥವಾ ನೇರವಾಗಿ ಮಂಡಳಿಗೆ ಸಲ್ಲಿಸಬಹುದು. ಈ ಅರ್ಜಿಯನ್ನು ಪರಿಶೀಲಿಸಿ, ಧನ ಸಹಾಯದ ಮೊತ್ತವನ್ನು ಅರ್ಜಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಕೊಠಡಿ ಸಂಖ್ಯೆ 11, ಜಿಲ್ಲಾಡಳಿತ ಭವನ, ಮಡಿಕೇರಿ, ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಇಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ಕೊಡಗು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular