ಬೆಂಗಳೂರು: ರಾಜ್ಯದ ಆಸ್ಪತ್ರೆಗಳಲ್ಲಿ ಸಮಗ್ರ ಅಪಘಾತ ಆರೈಕೆ ಸೇವೆ ಕಲ್ಪಿಸಲು ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ.
182 ತಾಲೂಕು ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಮಗ್ರ ಅಪಘಾತ ಆರೈಕೆ ಸೇವೆ ಕಲ್ಪಿಸಲು ತುರ್ತು ಚಿಕಿತ್ಸಾ ಕೊಠಡಿ ಮತ್ತು ಶಸ್ತ್ರ ಚಿಕಿತ್ಸಾ ಕೊಠಡಿ, ಐಸಿಯುಗಳಿಗೆ ವೈದ್ಯಕೀಯ ಉಪಕರಣ ಮತ್ತು ಸಾಧನಗಳ ಪೂರೈಕೆಗೆ 46 ಕೋಟಿ ರೂ. ವೆಚ್ಚಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಇದರಡಿ 100 ಬೇಸಿಕ್ ಲೈಫ್ ಸಪ್ಪೋರ್ಟ್ ಆಂಬುಲೆನ್ಸ್ ಗಳು, ಮೈಸೂರು, ದಾವಣಗೆರೆ, ಬೆಂಗಳೂರು ಸಿವಿ ರಾಮನ್ ಆಸ್ಪತ್ರೆಗಳಿಗೆ ಮೂರು ಸಿಟಿ ಸ್ಕ್ಯಾನ್ ಯಂತ್ರಗಳು, ಐಸಿಟಿ ಉಪಕರಣಗಳು ಸೇರಿ ಚಿಕಿತ್ಸಾ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ಇನ್ನು ರಾಜ್ಯದಲ್ಲಿ ಭೀಕರ ಬರದ ಪರಿಸ್ಥಿತಿ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮೇವು ಕಿಟ್ ಖರೀದಿಸಲು ಪಶು ಸಂಗೋಪನಾ ಇಲಾಖೆಗೆ 25 ಕೋಟಿ ರೂ. ಮಂಜೂರು ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ.

