ನವದೆಹಲಿ: ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮೈದಾನದಲ್ಲಿ ಹೆಚ್ಚು ನಗುವುದು ಅಪರೂಪ. ಆದರೆ ಗುರುವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ–ಅಫ್ಘಾನಿಸ್ತಾನ 3ನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಸಿಡಿಸಿದ ಶತಕಕ್ಕೆ ಗಂಭೀರ್ ನಗುತ್ತಿರುವ ದೃಶ್ಯ ಗಮನ ಸೆಳೆಯಿತು.ಅಭಿಷೇಕ್ ಕೇವಲ 30 ಎಸೆತಗಳಲ್ಲಿ ಶತಕ ಬಾರಿಸಿದರು. 9 ಬೌಂಡರಿ ಮತ್ತು 11 ಸಿಕ್ಸರ್‌ಗಳೊಂದಿಗೆ ಅವರು ಅಬ್ಬರಿಸಿದರು.
ಶತಕ ಪೂರೈಸಿದ ನಂತರ ಅಭಿಷೇಕ್ ಮೈದಾನದಲ್ಲೇ ಕುಳಿತು ವಿಭಿನ್ನ ರೀತಿಯಲ್ಲಿ ಸಂಭ್ರಮಿಸಿದರು. ಕಾಲುಗಳನ್ನು ಮಡಚಿಕೊಂಡು, ಕೈಗಳನ್ನು ಮೊಣಕಾಲಿನ ಮೇಲಿಟ್ಟುಕೊಂಡು ಕಣ್ಣು ಮುಚ್ಚಿದ ಅವರು “ಓಂ ನಮಃ ಶಿವಾಯ” ಎಂದು ಜಪಿಸಿದರು. ಈ ದೃಶ್ಯವನ್ನು ಟಿವಿ ಪ್ರಸಾರದ ಕ್ಯಾಮೆರಾಗಳು ಸೆರೆಹಿಡಿದವು.ನಂತರ ಕ್ಯಾಮೆರಾ ಗಂಭೀರ್ ಅವರತ್ತ ಹೋಯಿತು. ಅಭಿಷೇಕ್ ಅವರ ಸಂಭ್ರಮವನ್ನು ನೋಡುತ್ತಿದ್ದ ಗಂಭೀರ್ ಮುಖದಲ್ಲಿ ನಗು ಕಾಣಿಸಿಕೊಂಡಿತು. ಈ ವಿಡಿಯೋ ಇದೀಗ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
https://x.com/FanCode/status/2100600255561826675
ಅಭಿಷೇಕ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಬಳಿಕ ಮತ್ತೊಂದು 50 ರನ್ ಗಳಿಸಲು 14 ಎಸೆತಗಳನ್ನಷ್ಟೇ ತೆಗೆದುಕೊಂಡರು. ಹೀಗಾಗಿ 30 ಎಸೆತಗಳಲ್ಲಿ ಶತಕ ಪೂರ್ಣಗೊಂಡಿತು. ಪವರ್‌ಪ್ಲೇ ಮುಗಿಯುವ ವೇಳೆಗೆ ಭಾರತ ವಿಕೆಟ್ ನಷ್ಟವಿಲ್ಲದೆ 100 ರನ್ ಗಳಿಸಿತ್ತು.
ಒಟ್ಟು 34 ಎಸೆತಗಳನ್ನು ಎದುರಿಸಿದ ಅಭಿಷೇಕ್ 108 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 11 ಸಿಕ್ಸರ್‌ಗಳಿದ್ದವು. ರಶೀದ್ ಖಾನ್ ಬೌಲಿಂಗ್‌ನಲ್ಲಿ ರಹಮಾನುಲ್ಲಾ ಗುರ್ಬಾಜ್‌ಗೆ ಕ್ಯಾಚ್ ನೀಡಿ ಅಭಿಷೇಕ್ ಔಟಾದರು.
ಮೊದಲಿಗೆ ಚೆಂಡು ಬ್ಯಾಟ್‌ಗೆ ತಾಗಿಲ್ಲ ಎಂದು ಅಭಿಷೇಕ್ ಭಾವಿಸಿದ್ದರು. ಆದರೆ ಡಿಆರ್‌ಎಸ್ ಪರಿಶೀಲನೆಯಲ್ಲಿ ಬ್ಯಾಟ್‌ಗೆ ಚೆಂಡು ತಾಗಿರುವುದು ಸ್ಪಷ್ಟವಾಯಿತು. ಇದರಿಂದ ಅವರ ಸ್ಫೋಟಕ ಇನ್ನಿಂಗ್ಸ್ ಮುಕ್ತಾಯವಾಯಿತು

