ಚಾಮರಾಜನಗರ: ಹೊಟ್ಟೆ ನೋವು ಕಾಣಿಸಿಕೊಂಡಿದ್ದ 17 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆಂಬುಲೆನ್ಸ್ ನಲ್ಲೇ ಹೆರಿಗೆಯಾಗಿದೆ.
ಗುಂಡ್ಲುಪೇಟೆ ತಾಲೂಕಿನ ದೇಶಿಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದ ಆರೋಪದ ಮೇರೆಗೆ ಆಕೆಯ ಸಂಬಂಧಿಯಾಗಿರುವ ದೇಶಿಪುರ ಗ್ರಾಮದ ಸುರೇಶ್(46) ಎಂಬುವನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮೂರು ದಿನಗಳ ಹಿಂದೆ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪರೀಕ್ಷಿಸಿದ ವೈದ್ಯರು ಚಾಮರಾಜನಗರ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದು, ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಕರೆದೊಯ್ಯುವಾಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಆಕೆ ಗರ್ಭಿಣಿಯಾಗಲು ಸಂಬಂಧಿ ಕಾರಣ ಎಂದು ಅಪ್ರಾಪ್ತೆ ತಂದೆ ಬಳಿ ಹೇಳಿದ್ದು, ಆಕೆಯ ತಂದೆ ದೂರು ನೀಡಿದ್ದಾರೆ. ಸುರೇಶ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

