ಮಂಗಳೂರು: ಬುದ್ಧಿಮಾತು ಹೇಳಿದ್ದಕ್ಕೆ ಚಿಕ್ಕಪ್ಪನನ್ನೇ ಯುವಕನೊಬ್ಬ ಬಾಟಲಿಯಿಂದ ತಿವಿದು ಹತ್ಯೆಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ನಡೆದಿದೆ.
ಮಧುಸೂದನ್(37) ಕೊಲೆಯಾದ ವ್ಯಕ್ತಿ. ಅವರ ಅಣ್ಣನ ಮಗ ರಾಹುಲ್ ಕೊಲೆ ಆರೋಪಿಯಾಗಿದ್ದಾನೆ. ಮೇ 31 ರಂದು ರಾತ್ರಿ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಕೆಲಸದ ವಿಚಾರವಾಗಿ ರಾಹುಲ್ ಗೆ ಮಧುಸೂದನ್ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಕೋಪಗೊಂಡ ರಾಹುಲ್ ಕಾರ್ಯಕ್ರಮ ಸ್ಥಳದಿಂದ ಹೊರಗೆ ಹೋಗಿದ್ದಾನೆ.
ಕಾರ್ಯಕ್ರಮದ ಮುಗಿದ ನಂತರ ಮನೆಗೆ ಬಂದ ರಾಹುಲ್ ಏಕಾಏಕಿ ಮಧುಸೂದನ್ ಮೇಲೆ ದಾಳಿ ನಡೆಸಿ ಬಿಯರ್ ಬಾಟಲಿಯಿಂದ ಕುತ್ತಿಗೆಗೆ ಚುಚ್ಚಿದ್ದಾನೆ. ರಕ್ತಸ್ರಾವವಾಗಿ ಗಂಭೀರವಾಗಿ ಗಾಯಗೊಂಡ ಮಧುಸೂದನ್ ಅವರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆಯ ಬಳಿಕ ಸ್ಥಳದಿಂದ ಪರಾರಿಯಾಗಿದ್ದ ರಾಹುಲ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

