ಬೆಂಗಳೂರು: ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಗೆ ದುಷ್ಕರ್ಮಿ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ನಡೆದಿದೆ.
ಆರ್.ಟಿ. ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡಿರುವ ಡಿಜೆ ಹಳ್ಳಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿಜಯ್ ರಾಥೋಡ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜುಲೈ 3ರಂದು ಶುಕ್ರವಾರ ರಾತ್ರಿ ಕರ್ತವ್ಯ ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯ ಮೇಖ್ರಿ ಸರ್ಕಲ್ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ವಿಜಯ್ ರಾಥೋಡ್ ವಾಹನ ನಿಲ್ಲಿಸಿದ್ದಾರೆ. ಆಗ ಅಪರಿಚಿತ ವ್ಯಕ್ತಿ ಅವರ ಬಳಿಗೆ ಬಂದು ಏಕಾಏಕಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಯಾವ ಕಾರಣಕ್ಕಾಗಿ ಚಾಕುವಿನಿಂದ ಇರಿಯಲಾಗಿದೆ ಎನ್ನುವುದರ ಬಗ್ಗೆ ಪರಿಶೀಲನೆ ಪೊಲೀಸರು ನಡೆಸಿದ್ದಾರೆ. ಆರ್.ಟಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

