ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಇಂಡೋನೇಷ್ಯಾ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರವಾಸದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಭಾರತ-ಇಂಡೋನೇಷ್ಯಾ ದ್ವಿಪಕ್ಷೀಯ ಸಂಬಂಧಗಳು ಹೊಸ ಹಂತಕ್ಕೆ ಪ್ರವೇಶಿಸಿವೆ ಎಂದು ಹೇಳಿದ್ದಾರೆ.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ನೀಡಿದ ಆತ್ಮೀಯ ಸ್ವಾಗತ ಹಾಗೂ ಅಲ್ಲಿನ ಜನರ ಪ್ರೀತಿಪೂರ್ವಕ ಆತಿಥ್ಯಕ್ಕೆ ಮೋದಿ ಕೃತಜ್ಞತೆ ಸಲ್ಲಿಸಿದರು. ಈ ಭೇಟಿ ಉಭಯ ದೇಶಗಳ ಭವಿಷ್ಯದ ಸಹಭಾಗಿತ್ವಕ್ಕೆ ಬಲವಾದ ಅಡಿಪಾಯ ಹಾಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರವಾಸದ ವೇಳೆ ರಕ್ಷಣೆ, ಭದ್ರತೆ, ಸಮುದ್ರ ಸಹಕಾರ, ಪ್ರಮುಖ ಹಾಗೂ ಉದಯೋನ್ಮುಖ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆ (AI), ಡಿಜಿಟಲ್ ನವೀನತೆ, ಕೌಶಲ್ಯಾಭಿವೃದ್ಧಿ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ವಿಸ್ತರಿಸುವ ಕುರಿತು ಚರ್ಚೆಗಳು ನಡೆದವು. ಭೌಗೋಳಿಕ ಹಾಗೂ ಕಾರ್ಯತಂತ್ರದ ಜೊತೆಗೆ ಆರ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಉಭಯ ರಾಷ್ಟ್ರಗಳು ಮುಂದುವರಿಯುವ ಸಂಕಲ್ಪ ವ್ಯಕ್ತಪಡಿಸಿವೆ.
ಪ್ರವಾಸದ ಅತ್ಯಂತ ಮಹತ್ವದ ಘಟ್ಟವಾಗಿ, UNESCO ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟ Prambanan Temple Compounds ಸಂರಕ್ಷಣೆ ಮತ್ತು ಪುನರುತ್ಥಾನ ಯೋಜನೆಗೆ ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಜಂಟಿಯಾಗಿ ಚಾಲನೆ ನೀಡಿದರು. ಇದು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಶತಮಾನಗಳ ನಾಗರಿಕತೆ, ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ಬಾಂಧವ್ಯದ ಪ್ರತೀಕವಾಗಿದೆ ಎಂದು ಮೋದಿ ಹೇಳಿದರು. ಐತಿಹಾಸಿಕ ಪರಂಪರೆಯನ್ನು ಉಳಿಸುವುದು ಕೇವಲ ಕಟ್ಟಡಗಳ ಸಂರಕ್ಷಣೆಯಲ್ಲ, ಮುಂದಿನ ಪೀಳಿಗೆಗೆ ಪ್ರೇರಣೆಯಾಗುವ ಮೌಲ್ಯಗಳನ್ನು ಉಳಿಸುವ ಕಾರ್ಯವೂ ಆಗಿದೆ ಎಂದು ಅವರು ತಿಳಿಸಿದರು.
ಈ ಪರಂಪರೆ ಸಂರಕ್ಷಣಾ ಯೋಜನೆಯಲ್ಲಿ ಭಾರತ ಪಾಲುದಾರವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೋದಿ ಹೇಳಿದರು. ಉಭಯ ದೇಶಗಳು ತಮ್ಮ ಸಾಂಸ್ಕೃತಿಕ ಬೇರುಗಳನ್ನು ಗೌರವಿಸುತ್ತಾ, ಭೂತಕಾಲವನ್ನು ಸಂರಕ್ಷಿಸಿಕೊಂಡು ಭವಿಷ್ಯವನ್ನು ಒಟ್ಟಾಗಿ ನಿರ್ಮಿಸುವ ಸಂಕಲ್ಪ ಹೊಂದಿವೆ ಎಂದರು. ಇಂಡೋನೇಷ್ಯಾದಲ್ಲಿರುವ ಭಾರತೀಯ ಸಮುದಾಯಕ್ಕೂ ಈ ಸಹಭಾಗಿತ್ವದಿಂದ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ತಿಳಿಸಿದರು.
ಪ್ರವಾಸದ ಮತ್ತೊಂದು ಪ್ರಮುಖ ಘಟ್ಟವಾಗಿ ಪ್ರಧಾನಿ ಮೋದಿ ಇಂಡೋನೇಷ್ಯಾ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದರು. ಭಾರತ ಮತ್ತು ಇಂಡೋನೇಷ್ಯಾವನ್ನು ಶತಮಾನಗಳ ಇತಿಹಾಸ, ಸಂಸ್ಕೃತಿ ಹಾಗೂ ಜನರ ನಡುವಿನ ಬಾಂಧವ್ಯ ಒಗ್ಗೂಡಿಸಿದೆ ಎಂದು ಹೇಳಿದ ಅವರು, ಸ್ನೇಹ, ಸಹಕಾರ ಹಾಗೂ ಸಮಾನ ಅಭಿವೃದ್ಧಿಯ ಆಧಾರದ ಮೇಲೆ ಭವಿಷ್ಯವನ್ನು ರೂಪಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಅವರು “ಗಂಗಾ–ಮಹಾಕಾಮ್ ವಿಷನ್“ ಎಂಬ ಹೊಸ ಸಹಭಾಗಿತ್ವದ ಪರಿಕಲ್ಪನೆಯನ್ನು ಪ್ರಸ್ತಾಪಿಸಿದರು. ನಾಗರಿಕತೆಗಳ ಬಾಂಧವ್ಯ, ಸಮಾನ ಅಭಿವೃದ್ಧಿ, ಭದ್ರತೆ ಮತ್ತು ಕಾರ್ಯತಂತ್ರದ ವಿಶ್ವಾಸ, ಸಮುದ್ರ ಸಮೃದ್ಧಿ ಹಾಗೂ ಗ್ಲೋಬಲ್ ಸೌತ್ ರಾಷ್ಟ್ರಗಳ ಧ್ವನಿಗೆ ಆದ್ಯತೆ ನೀಡುವ ಐದು ಪ್ರಮುಖ ಸ್ತಂಭಗಳನ್ನು ಅವರು ವಿವರಿಸಿದರು. ಇಂಡೋನೇಷ್ಯಾದ 2022ರ ಜಿ20 ಅಧ್ಯಕ್ಷತೆ ಹಾಗೂ ಭಾರತದ 2023ರ ಜಿ20 ಅಧ್ಯಕ್ಷತೆಯ ವೇಳೆ ಗ್ಲೋಬಲ್ ಸೌತ್ ರಾಷ್ಟ್ರಗಳ ಸಮಸ್ಯೆಗಳನ್ನು ಜಾಗತಿಕ ವೇದಿಕೆಗೆ ತಂದಿದ್ದನ್ನು ಸ್ಮರಿಸಿದ ಮೋದಿ, ಮುಂದೆಯೂ ಈ ದಿಕ್ಕಿನಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವುದಾಗಿ ಹೇಳಿದರು.
ಭೌಗೋಳಿಕವಾಗಿ ದೆಹಲಿ ಮತ್ತು ಜಕಾರ್ತಾ ಸಾವಿರಾರು ಕಿಲೋಮೀಟರ್ ದೂರದಲ್ಲಿದ್ದರೂ, ಸಮುದ್ರ ಮಾರ್ಗದಲ್ಲಿ ಎರಡೂ ದೇಶಗಳ ನಡುವಿನ ಅಂತರ ಸುಮಾರು 150 ಕಿಲೋಮೀಟರ್ ಮಾತ್ರ ಎಂದು ಮೋದಿ ತಿಳಿಸಿದರು. ಈ ಸಮುದ್ರ ಸಂಪರ್ಕವೇ ಭವಿಷ್ಯದ ಕಾರ್ಯತಂತ್ರ, ವ್ಯಾಪಾರ ಹಾಗೂ ಭದ್ರತಾ ಸಹಭಾಗಿತ್ವದ ಕೇಂದ್ರಬಿಂದುವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಧಾನಿ ಮೋದಿಗೆ ಅತ್ಯುನ್ನತ ನಾಗರಿಕ ಗೌರವ
ಪ್ರವಾಸದ ವೇಳೆ ಪ್ರಧಾನಿ ಮೋದಿಗೆ ಇಂಡೋನೇಷ್ಯಾದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಒಂದಾದ “ಅಡಿಪುರಾ ಸ್ಟಾರ್ ಆಫ್ ದ ರಿಪಬ್ಲಿಕ್ ಆಫ್ ಇಂಡೋನೇಷ್ಯಾ“ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಈ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತಿದ್ದು, ಇದು ಕೇವಲ ತನಗಲ್ಲ, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಸಲ್ಲುವ ಗೌರವ ಎಂದು ಮೋದಿ ಹೇಳಿದರು. ಈ ಪ್ರಶಸ್ತಿ ಉಭಯ ದೇಶಗಳ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಆತ್ಮೀಯ ಬಾಂಧವ್ಯದ ಪ್ರತೀಕವಾಗಿದೆ ಎಂದು ಹೇಳಿ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಇಂಡೋನೇಷ್ಯಾ ಸರ್ಕಾರ ಹಾಗೂ ಅಲ್ಲಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು.
ಪ್ರಧಾನಿ ಮೋದಿ ಅವರ ಇಂಡೋನೇಷ್ಯಾ ಪ್ರವಾಸವು ಕೇವಲ ರಾಜತಾಂತ್ರಿಕ ಭೇಟಿ ಮಾತ್ರವಾಗಿರದೆ, ರಕ್ಷಣೆ, ಡಿಜಿಟಲ್ ತಂತ್ರಜ್ಞಾನ, ಸಾಂಸ್ಕೃತಿಕ ಪರಂಪರೆ, ಸಮುದ್ರ ಭದ್ರತೆ, ಗ್ಲೋಬಲ್ ಸೌತ್ ಸಹಕಾರ ಹಾಗೂ ಜನ-ಜನರ ಬಾಂಧವ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತ-ಇಂಡೋನೇಷ್ಯಾ ಸಂಬಂಧಗಳಿಗೆ ಹೊಸ ದಿಕ್ಕು ನೀಡಿದ ಮಹತ್ವದ ಪ್ರವಾಸವಾಗಿ ಗುರುತಿಸಿಕೊಂಡಿದೆ. ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಹಾಗೂ ದೀರ್ಘಕಾಲಿಕ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವಲ್ಲಿ ಈ ಭೇಟಿ ಮಹತ್ವದ ಮೈಲಿಗಲ್ಲಾಗುವ ನಿರೀಕ್ಷೆಯಿದೆ.

