ಪ್ರಯಾಗ್ರಾಜ್: ವಿವಾಹಿತ ಪುರುಷನೊಬ್ಬ ಮತ್ತೊಬ್ಬ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧ ಹೊಂದುವುದು ಸಾಮಾಜಿಕವಾಗಿ ನೈತಿಕವಲ್ಲದಿರಬಹುದು, ಆದರೆ ಅದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ಶಹಜಹಾನ್ಪುರದ ಪ್ರೇಮಿಗಳ ಪ್ರಕರಣದಲ್ಲಿ ದಂಪತಿಗೆ ರಕ್ಷಣೆ ನೀಡಿದ ನ್ಯಾಯಾಲಯ, ವಯಸ್ಕರ ವೈಯಕ್ತಿಕ ನಿರ್ಧಾರಗಳಲ್ಲಿ ಕಾನೂನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸಾರಿದೆ.
ಹೌದು. ವಿವಾಹಿತ ಪುರುಷನೋರ್ವ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ‘ಲೈವ್-ಇನ್’ ಸಂಬಂಧದಲ್ಲಿದ್ದರೆ, ಆತನನ್ನು ಯಾವುದೇ ಕ್ರಿಮಿನಲ್ ಅಪರಾಧದ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಲು ಅಥವಾ ಶಿಕ್ಷಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದೆ.
ಉತ್ತರ ಪ್ರದೇಶದ ಶಹಜಹಾನ್ಪುರದ ಅನಾಮಿಕಾ ಮತ್ತು ನೇತ್ರಪಾಲ್ ಎಂಬ ದಂಪತಿ ಸಲ್ಲಿಸಿದ್ದ ಕ್ರಿಮಿನಲ್ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಆದೇಶ ನೀಡಿದೆ. “ಕಾನೂನು ಮತ್ತು ನೈತಿಕತೆ ಬೇರೆ ಬೇರೆ” ಎಂದು ಅಭಿಪ್ರಾಯಪಟ್ಟ ಪೀಠವು, ಸಾಮಾಜಿಕ ಅಭಿಪ್ರಾಯ ಅಥವಾ ನೈತಿಕತೆಯ ಆಧಾರದ ಮೇಲೆ ನಾಗರಿಕರ ಹಕ್ಕುಗಳನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ
- ದೂರು: ಜನವರಿ 8, 2026 ರಂದು ಅನಾಮಿಕಾಳ ತಾಯಿ ಕಾಂತಿ ಎಂಬುವವರು ನೇತ್ರಪಾಲ್ ವಿರುದ್ಧ ಶಹಜಹಾನ್ಪುರದ ಜೈತಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನೇತ್ರಪಾಲ್ ತನ್ನ ಮಗಳನ್ನು ಪುಸಲಾಯಿಸಿ ಕರೆದೊಯ್ದಿದ್ದಾನೆ ಎಂದು ಆರೋಪಿಸಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 87 ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿತ್ತು.
- ವಾದ: ವಿಚಾರಣೆ ವೇಳೆ ಅರ್ಜಿದಾರರ ತಾಯಿ ಪರ ವಕೀಲರು, ನೇತ್ರಪಾಲ್ ಈಗಾಗಲೇ ವಿವಾಹಿತನಾಗಿರುವುದರಿಂದ ಮತ್ತೊಬ್ಬ ಮಹಿಳೆಯೊಂದಿಗೆ ವಾಸಿಸುವುದು ಅಪರಾಧ ಎಂದು ವಾದಿಸಿದರು.
- ನ್ಯಾಯಾಲಯದ ನಿಲುವು: ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್, ಇಬ್ಬರೂ ವಯಸ್ಕರಾಗಿದ್ದು ಒಮ್ಮತದಿಂದ ಜೊತೆಗಿದ್ದಾರೆ. ಈ ಸಂಬಂಧದಲ್ಲಿ ನೇತ್ರಪಾಲ್ ಯಾವುದೇ ಕ್ರಿಮಿನಲ್ ಅಪರಾಧ ಎಸಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಹೀಗಾಗಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂದು ತಿಳಿಸಿದೆ.
ಅರ್ಜಿದಾರ ದಂಪತಿಯನ್ನು ಬಂಧಿಸದಂತೆ ಪೊಲೀಸರಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯ ಸೂಚಿಸಿದೆ.ಅನಾಮಿಕಾಳ ಕುಟುಂಬದ ಸದಸ್ಯರು ದಂಪತಿಗೆ ಯಾವುದೇ ಹಾನಿ ಮಾಡದಂತೆ ನಿರ್ಬಂಧ ಹೇರಲಾಗಿದೆ.ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ನಿಗದಿಪಡಿಸಲಾಗಿದೆ.

