ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಮಾರ್ಚ್ 6, 2026) ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಒಂದು ದೊಡ್ಡ ‘ಬಜೆಟ್ ಗಿಫ್ಟ್’ ನೀಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಹೌದು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಅನ್ನಭಾಗ್ಯ’ ಯೋಜನೆಯಲ್ಲಿ ಈ ಬಾರಿ ದೊಡ್ಡ ಬದಲಾವಣೆ ಮಾಡಲಾಗಿದ್ದು, ಬಿಪಿಎಲ್ (BPL) ಕುಟುಂಬಗಳಿಗೆ ಕೇವಲ ಅಕ್ಕಿಯಷ್ಟೇ ಅಲ್ಲದೆ, ಅಗತ್ಯ ವಸ್ತುಗಳನ್ನೊಳಗೊಂಡ ‘ಇಂದಿರಾ ಆಹಾರ ಕಿಟ್’ (Indira Food Kit) ನೀಡಲು ನಿರ್ಧರಿಸಲಾಗಿದೆ.
ಏನಿದು ಹೊಸ ಯೋಜನೆ? ಇಲ್ಲಿಯವರೆಗೆ ಅನ್ನಭಾಗ್ಯ ಯೋಜನೆಯಡಿ ಕೇಂದ್ರದ 5 ಕೆಜಿ ಅಕ್ಕಿಯ ಜೊತೆಗೆ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿ ಅಥವಾ ಅಕ್ಕಿ ಬದಲಿಗೆ ಹಣವನ್ನು ನೀಡುತ್ತಿತ್ತು. ಆದರೆ ಇನ್ಮುಂದೆ ಈ ಹೆಚ್ಚುವರಿ 5 ಕೆಜಿ ಅಕ್ಕಿಯ ಬದಲಿಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಕಿಟ್ ನೀಡಲು ಸರ್ಕಾರ ಮುಂದಾಗಿದೆ.
ಕಿಟ್’ನಲ್ಲಿ ಏನೇನಿರಲಿದೆ? ಪ್ರತಿ ತಿಂಗಳು ಬಿಪಿಎಲ್ ಕುಟುಂಬಗಳಿಗೆ ವಿತರಿಸಲಾಗುವ ಈ ‘ಇಂದಿರಾ ಆಹಾರ ಕಿಟ್’ನಲ್ಲಿ ಈ ಕೆಳಗಿನ ವಸ್ತುಗಳು ಇರಲಿವೆ:
- ತೊಗರಿಬೇಳೆ
- ಸಕ್ಕರೆ
- ಉಪ್ಪು
- ಅಡುಗೆ ಎಣ್ಣೆ
ಬಜೆಟ್ ಹಂಚಿಕೆ ಮತ್ತು ವ್ಯಾಪ್ತಿ:
- ಈ ಹೊಸ ಯೋಜನೆಯಿಂದ ರಾಜ್ಯದ ಸುಮಾರು 4.54 ಕೋಟಿ ಬಡ ಫಲಾನುಭವಿಗಳಿಗೆ ಅನುಕೂಲವಾಗಲಿದೆ.
- 2026-27ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಗಾಗಿ ಸರ್ಕಾರ 6,200 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ.
ಕಳೆದ ಮೂರು ವರ್ಷಗಳಲ್ಲಿ ಅನ್ನಭಾಗ್ಯ ಯೋಜನೆಗಾಗಿ ಸರ್ಕಾರ ಒಟ್ಟು 17,167 ಕೋಟಿ ರೂ. ವೆಚ್ಚ ಮಾಡಿದೆ. ಈಗ ಕೇವಲ ಅಕ್ಕಿ ನೀಡುವುದಕ್ಕಿಂತ ಹೆಚ್ಚಾಗಿ, ಬಡ ಕುಟುಂಬಗಳ ದಿನನಿತ್ಯದ ಅಡುಗೆಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಒದಗಿಸುವ ಮೂಲಕ ಅವರ ಆರ್ಥಿಕ ಹೊರೆಯನ್ನು ತಗ್ಗಿಸುವುದು ಮತ್ತು ಪೌಷ್ಟಿಕಾಂಶ ಹೆಚ್ಚಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

