ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರ ಶುಕ್ರವಾರ ಕರ್ನಾಟಕ ಬಜೆಟ್-2026 ಮಂಡಿಸಿದರು. ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದ ಸಿದ್ದರಾಮಯ್ಯ ಅವರು ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡಿದರು.
ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಚುನಾವಣೆ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಈ ಬಾರಿ 4.49 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ನಲ್ಲಿ ಬೆಂಗಳೂರಿಗೆ ಬಂಪರ್ ಕೊಡುಗೆ ನೀಡಿದರು. 369 ವಾರ್ಡ್, 5 ನಗರ ಪಾಲಿಕೆಗಳ ಜಿಬಿಎಗೆ ಜೂನ್ ಅಂತ್ಯದಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ಬಜೆಟ್ ಭಾಷಣದಲ್ಲಿ ಸಿದ್ದರಾಮಯ್ಯ ಬೆಂಗಳೂರು ಕೇವಲ ಒಂದು ನಗರವಷ್ಟೇ ಅಲ್ಲ. ಇದು ಅಸಂಖ್ಯಾತ ಕನಸುಗಳ ನೆಲೆಬೀಡು. ನಾಡಪ್ರಭು ಕೆಂಪೇಗೌಡರ ಆಡಳಿತದಿಂದ ಹಿಡಿದು ಇಂದಿನ ಸ್ಟಾರ್ಟ್‌ಅಪ್ ಕ್ರಾಂತಿಯವರೆಗೆ ಈ ನಗರವು ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಬೆಂಗಳೂರನ್ನು ವಿಶ್ವದ ಅತ್ಯುತ್ತಮ ವಾಸಯೋಗ್ಯ ನಗರವನ್ನಾಗಿ ಮಾಡುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿರುತ್ತದೆ. 2025-26ನೇ ಸಾಲಿನಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರಿನ ಐದು ನಗರ ಪಾಲಿಕೆಗಳಲ್ಲಿ 1,255 ಕೋಟಿ ರೂ.ಗಳ ಮೊತ್ತದ ವಾರ್ಡ್ ರಸ್ತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ. 1,700 ಕೋಟಿ ರೂ.ಗಳ ಮೊತ್ತದಲ್ಲಿ 158 ಕಿ.ಮೀ. ಉದ್ದದ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ. 1,936 ಕೋಟಿ ರೂ.ಗಳ ಮೊತ್ತದ ಮುಖ್ಯ ಮತ್ತು ಉಪಮುಖ್ಯ (Arterial and Sub Arterial) ರಸ್ತೆಗಳ ಅಭಿವೃದ್ಧಿ. ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆ.ಆರ್.ಪುರಂ ಮೆಟ್ರೋ ನಿಲ್ದಾಣದವರೆಗೂ ಹೊರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸುವ 450 ಕೋಟಿ ರೂ.ಗಳ ಯೋಜನೆ ಕೈಗೊಳ್ಳಲಾಗಿದೆ ಎಂದರು.
ಬೆಂಗಳೂರಿಗೆ ಘೋಷಣೆಗಳು
- ಬೆಂಗಳೂರಿನ ನಾಗರಿಕರಿಗೆ ಪಾರದರ್ಶಕ, ಜನಸ್ನೇಹಿ, ಸಹಭಾಗಿತ್ವವುಳ್ಳ ತುರ್ತು ಸ್ಪಂದನೆಯ ಆಡಳಿತವನ್ನು ಒದಗಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಹಾಗೂ ಐದು ಮಹಾನಗರ ಪಾಲಿಕೆಗಳನ್ನು ಸ್ಥಾಪಿಸಲಾಗಿದೆ.
- 2025-26ನೇ ಸಾಲಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ರಾಜ್ಯ ಸರ್ಕಾರ ನೀಡುತ್ತಿದ್ದ 3,000 ಕೋಟಿ ರೂ. ಅನುದಾನವನ್ನು 7,000 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿರುತ್ತದೆ. ಪ್ರಸಕ್ತ ಸಾಲಿನಲ್ಲಿಯೂ ಈ ಅನುದಾನವನ್ನು ಮುಂದುವರೆಸಲಾಗುವುದು.
- ರಸ್ತೆಗಳ ದೀರ್ಘ ಕಾಲದ ಬಾಳಿಕೆಗಾಗಿ ಮುಂದಿನ ಮೂರು ವರ್ಷಗಳಲ್ಲಿ 450 ಕಿ.ಮೀ ಗೂ ಹೆಚ್ಚು ಉದ್ದದ ರಸ್ತೆಗಳನ್ನು 3,000 ಕೋಟಿ ರೂ.ಗಳ ವೆಚ್ಚದಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು.
- ಬೆಂಗಳೂರು ನಗರ ಪಾಲಿಕೆಗಳ ಸ್ವಂತ ಸಂಪನ್ಮೂಲದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 175 ಜಂಕ್ಷನ್‌ಗಳ ಸೌಂದರ್ಯೀಕರಣ, 500 ಕಿ.ಮೀ. ಉದ್ದದ ಪಾದಚಾರಿ ಮಾರ್ಗವನ್ನು ಮೇಲ್ದರ್ಜೆಗೇರಿಸಲು ಮತ್ತು 100 Sky Walk ಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
- ವಿಶ್ವಬ್ಯಾಂಕ್ ನೆರವಿನ ಜಲಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮದ ಕ್ರಿಯಾಯೋಜನೆಯಡಿ ರಾಜಕಾಲುವೆಗಳ ಅಭಿವೃದ್ಧಿ / ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಒಟ್ಟು 2,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು ಅನುಷ್ಠಾನಗೊಳಿಸಲಾಗುತ್ತಿದೆ.
- ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿಯ ಐದು ಮಹಾನಗರ ಪಾಲಿಕೆಗಳು ತಮ್ಮ Balance Sheet ಆಧಾರದಲ್ಲಿ ʻಮುನಿಸಿಪಲ್ ಬಾಂಡ್’ಗಳನ್ನು ಹೊರಡಿಸುವ ಮೂಲಕ ಅಭಿವೃದ್ಧಿ ಕಾಮಗಾರಿಗಳಿಗೆ ಸಂಪನ್ಮೂಲವನ್ನು ಕ್ರೋಢೀಕರಿಸಲಾಗುವುದು.
- 2027ರ ಅಂತ್ಯದೊಳಗೆ ಬೆಂಗಳೂರಿಗೆ ಹೊಸ ಪರಿಷ್ಕೃತ ಮಾಸ್ಟರ್ ಪ್ಲಾನ್-2041 ಅನ್ನು (RMP) ಜಾರಿಗೊಳಿಸಲಾಗುವುದು. ಇದರ ಜೊತೆಗೆ ಸಮಗ್ರ ಮೊಬಿಲಿಟಿ ಯೋಜನೆಯನ್ನು (CMP) ಆರು ತಿಂಗಳೊಳಗೆ ರೂಪಿಸಲಾಗುವುದು.
- ʻನಮ್ಮ ಮೆಟ್ರೋ’ ದೇಶದ ಎರಡನೇ ಅತಿದೊಡ್ಡ ಮೆಟ್ರೋ ರೈಲು ಜಾಲವಾಗಿದೆ. ಪ್ರಸ್ತುತ ಕಾರ್ಯಾಚರಣಾ ಜಾಲವು 96 ಕಿ.ಮೀ. ಆಗಿದ್ದು, ಇದರಿಂದ ಪ್ರತಿ ದಿನ 10 ಲಕ್ಷ ಪ್ರಯಾಣಿಕರಿಗೆ ಪ್ರಯೋಜನಕಾರಿಯಾಗಿದೆ. ಇಲ್ಲಿಯವರೆಗೂ ವೆಚ್ಚವಾಗಿರುವ 67,460 ಕೋಟಿ ರೂ.ಗಳಲ್ಲಿ ನಮ್ಮ ಸರ್ಕಾರದ ಪಾಲು 59,376 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರದ ಪಾಲು 8,084 ಕೋಟಿ ರೂ.ಗಳಾಗಿರುತ್ತದೆ. ಇದು ರಾಜ್ಯ ಸರ್ಕಾರದ ಪಾಲಿನ ಶೇ.88ರಷ್ಟರ ಎದುರಾಗಿ ಕೇಂದ್ರದ ಪಾಲು ಕೇವಲ ಶೇ.12 ರಷ್ಟಿರುತ್ತದೆ.
- 2026–27ರ ಹಣಕಾಸು ವರ್ಷದಲ್ಲಿ ಒಟ್ಟು 41 ಕಿ.ಮೀ. ಹೆಚ್ಚುವರಿ ಮೆಟ್ರೋ ಮಾರ್ಗಗಳನ್ನು ಪೂರ್ಣಗೊಳಿಸಲು ಯೋಜಿಸಲಾಗಿದೆ. ಇದರಿಂದ ದಿನಕ್ಕೆ 15 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
- ಹೊರ ವರ್ತುಲ ರಸ್ತೆಯ ಮೆಟ್ರೋ ವಯಾಡಕ್ಟ್ ಉದ್ದಕ್ಕೂ 9 ಕಿ.ಮೀ ಪಾದಚಾರಿ ನಡಿಗೆ ಮಾರ್ಗವನ್ನು ಅಂದಾಜು 160 ಕೋಟಿ ರೂ.ಗಳ ವೆಚ್ಚದಲ್ಲಿ ಹೊರ ವರ್ತುಲ ಕಂಪನಿಗಳ ಸಂಘದ (ORRCA) ಪ್ರಾಯೋಜಕತ್ವದಲ್ಲಿ ನಿರ್ಮಿಸಲಾಗುವುದು.
- ಬೆಂಗಳೂರು ನಗರದ ಸುಮಾರು 1.40 ಕೋಟಿ ಜನರಿಗೆ ಕುಡಿಯುವ ನೀರು ಪೂರೈಸಲು ಕಾವೇರಿ ನೀರು ಸರಬರಾಜು ಯೋಜನೆಯ 1 ರಿಂದ 5ನೇ ಹಂತಗಳ ಮೂಲಕ ಒಟ್ಟು 2,225 MLD ನೀರು ಪೂರೈಸಲಾಗುತ್ತಿದೆ. ಇದೀಗ JICA ನೆರವಿನಿಂದ 6,939 ಕೋಟಿ ರೂ.ಗಳ ವೆಚ್ಚದಲ್ಲಿ ಹೆಚ್ಚುವರಿಯಾಗಿ ಆರು ಟಿ.ಎಂ.ಸಿ. ನೀರನ್ನು ಪೂರೈಸಲು ಕಾವೇರಿ 6ನೇ ಹಂತದ ಯೋಜನೆಯನ್ನು ನಮ್ಮ ಸರ್ಕಾರದಿಂದ ರೂಪಿಸಲಾಗಿದೆ.
- ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ತುಮಕೂರು ರಸ್ತೆಯಿಂದ ಹೊಸೂರು ರಸ್ತೆಯವರೆಗೆ 73 ಕಿ.ಮೀ ಉದ್ದದ ಬೆಂಗಳೂರು ಬಿಸ್‌ನೆಸ್ ಕಾರಿಡಾರ್ ಭಾಗ-1 ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ರೈತರಿಗೆ ಸಮರೋಪಾದಿಯಲ್ಲಿ ಪರಿಹಾರ ವಿತರಿಸಲಾಗುತ್ತಿದೆ. ಈ ರಸ್ತೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
- ಹೆಬ್ಬಾಳ ಜಂಕ್ಷನ್ ನಿಂದ ಹೆಚ್.ಎಸ್.ಆರ್ ಲೇಔಟ್ ಸಿಲ್ಕ್ ಬೋರ್ಡ್ ವರೆಗಿನ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆ ಹಾಗೂ ಕೆ.ಆರ್.ಪುರಂ ನಿಂದ ಮೈಸೂರು ರಸ್ತೆಯವರೆಗಿನ ಪೂರ್ವ-ಪಶ್ಚಿಮ ಕಾರಿಡಾರ್ ಯೋಜನೆಯ ಒಟ್ಟಾರೆ 40 ಕಿ.ಮಿ. ಉದ್ದದ ಸುರಂಗ ಮಾರ್ಗವನ್ನು 40,000 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ BOOT ಮಾದರಿಯಲ್ಲಿ ಕೈಗೊಳ್ಳಲು ಅನುಮೋದಿಸಲಾಗಿದೆ. ಮೊದಲನೇ ಹಂತದಲ್ಲಿ 17 ಕಿ.ಮಿ. ಉದ್ದದ ಉತ್ತರ-ದಕ್ಷಿಣ ಕಾರಿಡಾರ್ ಯೋಜನೆಯನ್ನು 17,780 ಕೋಟಿ ರೂ.ಗಳ ಮೊತ್ತಕ್ಕೆ ಟೆಂಡರ್ ಕರೆಯಲಾಗಿದೆ.
- ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ಸರ್ಕಲ್ ವರೆಗೆ ಸುರಂಗ ಮಾರ್ಗ (Tunnel Road) ಹಾಗೂ ಮೇಲು ಸೇತುವೆ (Elevated) ರಸ್ತೆಯನ್ನು 2,250 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಿರ್ಮಿಸಲಾಗುವುದು.
- ಬೆಂಗಳೂರು ನಗರದ ದಟ್ಟಣೆಯನ್ನು ಕಡಿಮೆ ಮಾಡಲು ನೆಲಮಂಗಲ-ತಾವರೆಕೆರೆ-ಬಿಡದಿ ಮಧ್ಯಂತರ ವರ್ತುಲ ರಸ್ತೆಯನ್ನು BMRDA ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳ ಆರ್ಥಿಕ ಸಂಪನ್ಮೂಲಗಳಿಂದ ನಿರ್ಮಿಸಲಾಗುವುದು.

