ಬೆಂಗಳೂರು: ಕೇವಲ 12 ರೂಪಾಯಿಗೆ ದುಬೈ ಕರೆನ್ಸಿ ಧಿರಾಮ್ಸ್ ಕೊಡುವುದಾಗಿ ಹೇಳಿ ಉದ್ಯಮಯನ್ನೇ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಮೂಲದ ಇಮ್ರಾನ್ ಶೇಖ್ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ರುಕ್ಸಾನ್ ಎಸ್ಕೇಪ್ ಆಗಿದ್ದು, ಆತನಿಗಾಗಿ ಶೋಧ ನಡೆಸಲಾಗಿದೆ. ಬಂಧಿತನಿಂದ ನೂರಕ್ಕೂ ಹೆಚ್ಚು ಧಿರಾಮ್ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ಉದ್ಯಮಿಯೊಬ್ಬರನ್ನು ಪರಿಚಯಿಸಿಕೊಂಡು ನಮ್ಮ ಬಳಿ ದುಬೈ ಕರೆನ್ಸಿಗಳಿವೆ, ಅದನ್ನು ಭಾರತದಲ್ಲಿ ವಿನಿಮಯ ಮಾಡುವುದು ಕಷ್ಟ. ಇಲ್ಲಿ ಒಂದು ಧಿರಾಮ್ 22-25 ರೂ ಆಗುತ್ತದೆ. ಆದರೆ ನಾವು ಅರ್ಧ ಬೆಲೆಗೆ ಅಂದರೆ ಕೇವಲ 12 ರೂ.ಗೆ ಕೊಡುತ್ತೇವೆ ಎಂದು ಹೇಳಿ ನಂಬಿಸಿದ್ದರು. ಮೊದಲು ಒಂದು ಒರಿಜಿನಲ್ ನೋಟು ಕೊಟ್ಟು ಸ್ಯಾಂಪಲ್ ತೋರಿಸಿದ್ದ ಆರೋಪಿಗಳು ಬಳಿಕ ಉದ್ಯಮಿಗೆ ಕಲರ್ ಜರಾಕ್ಸ್ ಪೇಪರ್ ನೀಡಿ ವಂಚಿಸಿ ಎಸ್ಕೇಪ್ ಆಗಿದ್ದರು.
ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.