ಚಿತ್ರದುರ್ಗ : ಮುರುಘಾ ಶ್ರೀಗಳ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿದೆ.
ಚಿತ್ರದುರ್ಗದ 2 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಆದೇಶ ಹೊರಡಿಸಿದ್ದು, ವಿಚಾರಣೆ ಮತ್ತೆ ಮುಂದೂಡಿದೆ. ನಾಳೆ ಸರ್ಕಾರಿ ಪರ ವಕೀಲ ಜಗದೀಶ್ ವಾದ ಮಂಡಿಸಲಿದ್ದಾರೆ.
ಇತ್ತೀಚೆಗೆ ಶ್ರೀಗಳಿಗೆ ಜಾಮೀನು ನೀಡುವ ಸಂಬಂಧ ಈಗಾಗಲೇ ಹೈಕೋರ್ಟ್ ನೀಡಿರುವ ಪ್ರತಿಯನ್ನು ಶ್ರೀಗಳ ಪರ ವಕೀಲರು ಕೋರ್ಟ್ ಗೆ ಸಲ್ಲಿಕೆ ಮಾಡಿದರು. ನಂತರ ಕೋರ್ಟ್ ನವೆಂಬರ್ 15 ಕ್ಕೆ ವಿಚಾರಣೆ ಮುಂದೂಡಿತ್ತು.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಮುರುಘಾ ಶ್ರೀ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಜೈಲು ಸೇರಿದ್ದ ಮುರುಘಾ ಶ್ರೀಗೆ ನ.8 ರಂದು ಹೈಕೋರ್ಟ್ ಒಂದು ಪ್ರಕರಣದಲ್ಲಿ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ ಶ್ರೀಗಳ ವಿರುದ್ಧ ಇನ್ನೊಂದು ಪ್ರಕರಣದ ವಿಚಾರಣೆ ಬಾಕಿ ಹಿನ್ನೆಲೆಯಲ್ಲಿ ಜಾಮೀನು ಸಿಕ್ಕರೂ ಬಿಡುಗಡೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮುರುಘಾ ಶ್ರೀ ಪರ ವಕೀಲರು ಶ್ರೀಗಳ ಬಿಡುಗಡೆಗೆ ಕೋರಿ ಚಿತ್ರದುರ್ಗ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.