ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಮನಕಲಕುವ ಘಟನೆಯೊಂದರಲ್ಲಿ ಯುವಕನೊಬ್ಬನಿಗೆ ದುಷ್ಕರ್ಮಿಗಳ ಗುಂಪು ಕಿರುಕುಳ ನೀಡಿ ಹಲ್ಲೆ ನಡೆಸಿದೆ. ನಾಯಿಗೆ ಹಾಕುವಂತೆ ಯುವಕನ ಕತ್ತಿಗೆ ಬೆಲ್ಟ್ ಹಾಕಿ ಬೊಗಳುವಂತೆ ಒತ್ತಾಯಿಸಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಶ ವ್ಯಕ್ತವಾಗಿದೆ.
ವೀಡಿಯೊದಲ್ಲಿರುವ ಐದು ಹುಡುಗರು ಫೈಜಾನ್, ಬಿಲಾಲ್, ಸಮೀರ್, ಮುಫಿದ್ ಮತ್ತು ಸಾಹಿಲ್ ಎಂಬವರು ವಿಜಯ್ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ ವ್ಯಕ್ತಿಗಳು ಎಂದು ವಿಡಿಯೋ ಹಂಚಿಕೊಂಡಿರುವವರು ತಿಳಿಸಿದ್ದಾರೆ.
ಮೂವರು ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಜಾರಿ ಮಾಡಲಾಗಿದ್ದು, ಅವರ ಮನೆಗಳ ಮೇಲೂ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಾಗಿದೆ.
ಐವರು, ಯುವಕನ ಸಹೋದರಿಯ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೆ ಆತನ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬುದನ್ನ ವಿಡಿಯೋದ ಶೀರ್ಷಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಕೂಡಲೇ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ.
ನಾನು ಆ ವಿಡಿಯೋ ನೋಡಿದೆ. ಅದೊಂದು ಘೋರ ಘಟನೆ ಅಂತ ಅನಿಸಿತು. ಮನುಷ್ಯನ ಬಗೆಗಿನ ಇಂತಹ ವರ್ತನೆ ಅತ್ಯಂತ ಖಂಡನೀಯ. ಈ ಘಟನೆಯ ಬಗ್ಗೆ ತನಿಖೆ ನಡೆಸಿ 24 ಗಂಟೆಗಳ ಒಳಗೆ ಕ್ರಮ ಕೈಗೊಳ್ಳುವಂತೆ ನಾನು ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಮಿಶ್ರಾ ಹೇಳಿದ್ದಾರೆ.