ನವದೆಹಲಿ: ಸಿಬಿಐ ನೂತನ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಇಂದು ಅಧಿಕಾರ ಸ್ವೀಕರಿಸಿದ್ದು, ಎರಡು ವರ್ಷಗಳ ಕಾಲ ಅವರು ಹುದ್ದೆಯಲ್ಲಿರುತ್ತಾರೆ.
ನಿರ್ಗಮಿತ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಅವರು ನವದೆಹಲಿಯ ಸಿಬಿಐ ಪ್ರಧಾನ ಕಚೇರಿಯಲ್ಲಿ ಏಜೆನ್ಸಿಯ ಉಸ್ತುವಾರಿಯನ್ನು ಪ್ರವೀಣ್ ಸೂದ್ ಅವರಿಗೆ ಹಸ್ತಾಂತರಿಸಿದರು.
ಪ್ರವೀಣ್ ಸೂದ್ ಕರ್ನಾಟಕ ಕೇಡರ್ನ 1986 ಬ್ಯಾಚ್ನ ಭಾರತೀಯ ಪೊಲೀಸ್ ಸೇವೆ(ಐಪಿಎಸ್) ಅಧಿಕಾರಿಯಾಗಿದ್ದು, ರಾಜ್ಯದ ಪೊಲೀಸ್ ಮಹಾನಿರ್ದೇಶಕರಾಗಿದ್ದರು. ಅವರು ಜೈಸ್ವಾಲ್ ನಂತರ ದೇಶದ ಅತ್ಯಂತ ಹಿರಿಯ ಐಪಿಎಸ್ ಅಧಿಕಾರಿ.
ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನೊಳಗೊಂಡ ಉನ್ನತಾಧಿಕಾರ ಸಮಿತಿಯ ಸಭೆಯಲ್ಲಿ ಸೂದ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.