ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪುತ್ರಿ ಗೀತಾ ಶಿವರಾಜಕುಮಾರ್ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಅವರಿಗೆ ಪತಿ, ನಟ ಶಿವರಾಜ್ ಕುಮಾರ್ ಬೆಂಬಲ ನೀಡಿದ್ದು, ಅವರು ಕೂಡ ಪ್ರಚಾರಕ್ಕೆ ತೆರಳಲಿದ್ದಾರೆ.
ಪತ್ನಿ ಗೀತಾ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಹೊಸ ಬದಲಾವಣೆ ಬಯಸಿ ಗೀತಾ ಈ ನಿರ್ಧಾರ ಕೈಗೊಂಡಿದ್ದು, ನನ್ನ ಬೆಂಬಲ ಸದಾ ಇರುತ್ತದೆ. ನಾಳೆಯಿಂದಲೇ ಗೀತಾ ಪ್ರಚಾರ ನಡೆಸಲಿದ್ದು, ನಾನು ಕೂಡ ಪ್ರಚಾರದಲ್ಲಿ ಭಾಗವಹಿಸಲಿದ್ದೇನೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಸೊರಬ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರವಾಗಿ ನಾನು ಮತ್ತು ಗೀತಾ ಪ್ರಚಾರ ಮಾಡುತ್ತೇವೆ. ಶಿರಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯಕ ಅವರ ಪರವಾಗಿ ಪ್ರಚಾರ ನಡೆಸಲಿದ್ದೇವೆ ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 12 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜಕುಮಾರ್ ಸ್ಪರ್ಧಿಸಿದ್ದರು. ನಂತರ ರಾಜಕೀಯದಿಂದ ದೂರ ಉಳಿದಿದ್ದ ಅವರು ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ.