ಬೆಂಗಳೂರು: ರಾಜ್ಯಕ್ಕೆ ಬಂಡವಾಳ ಆಹ್ವಾನಿಸುವ ಮತ್ತು ಉದ್ಯೋಗ ಸೃಷ್ಟಿಯ ಉದ್ದೇಶದಿಂದ ಇನ್ವೆಸ್ಟ್ ಕರ್ನಾಟಕ 2027 ಜಾಗತಿಕ ಹೂಡಿಕೆದಾರರ ಸಮಾವೇಶವನ್ನು 2027ರ ಏಪ್ರಿಲ್ 20 ರಿಂದ 22 ರವರೆಗೆ ಬೆಂಗಳೂರು ನಲ್ಲಿ ಆಯೋಜಿಸಿದ್ದು, ಪೂರ್ವಸಿದ್ಧತೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ ಚಾಲನೆ ನೀಡಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಭವಿಷ್ಯದ ಸಾಧ್ಯತೆಗಳಿಗೆ ಬಲಸಂವರ್ಧನೆ ಘೋಷವಾಕ್ಯದಡಿ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ ಜಾಗತಿಕ ಹೂಡಿಕೆದಾರರ ಶೃಂಗಸಭೆ ಪೂರ್ವ ಸಿದ್ಧತೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಕರ್ನಾಟಕದ ಭವಿಷ್ಯ ರೂಪಿಸಲು ಇನ್ವೆಸ್ಟ್ ಕರ್ನಾಟಕ ಬಹುದೊಡ್ಡ ಮಾರ್ಗವಾಗಿದೆ. ಕರ್ನಾಟಕಕ್ಕೆ ಉತ್ಕೃಷ್ಟ ಇತಿಹಾಸವಿದ್ದು, ಇಲ್ಲಿ ಹೂಡಿಕೆ ಮಾಡುವವರು ಎಂದಿಗೂ ವಾಪಸ್ ಹೋಗಲು ಮನಸ್ಸು ಮಾಡುವುದಿಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ರಾಜ್ಯದ ಮಹತ್ವಾಕಾಂಕ್ಷಿಗೆ ಪೂರಕವಾಗಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಾಗತಿಕ ಹೂಡಿಕೆಗಳಿಗೆ ಕರ್ನಾಟಕದ ಆಹ್ವಾನ; ಕೈಗಾರಿಕಾ ಕ್ರಾಂತಿಗೆ ಹೊಸ ವೇಗ: GIM–2027ಕ್ಕೆ ಸರ್ವಸನ್ನದ್ಧ
‘Powering What’s Next…’ (ಮುಂದಿನ ಭವಿಷ್ಯಕ್ಕೆ ಶಕ್ತಿ ತುಂಬೋಣ…) ಎಂಬ ಆಶಯದೊಂದಿಗೆ 2027ರ ಏಪ್ರಿಲ್ 20ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ‘ಇನ್ವೆಸ್ಟ್ ಕರ್ನಾಟಕ-ಜಾಗತಿಕ ಹೂಡಿಕೆದಾರರ ಸಮಾವೇಶ-2027’ಕ್ಕೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ನಡೆಸುತ್ತಿದೆ.
ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವುದರ ಜೊತೆಗೆ, ಕರ್ನಾಟಕವನ್ನು ಭವಿಷ್ಯದ ಕೈಗಾರಿಕಾ ಬೆಳವಣಿಗೆಯ ಪ್ರಮುಖ ಕೇಂದ್ರವನ್ನಾಗಿ ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಸಮಾವೇಶವನ್ನು ಆಯೋಜಿಸಲಾಗುತ್ತಿದೆ.
2025ರಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕವು ಸುಮಾರು ₹10.27 ಲಕ್ಷ ಕೋಟಿ ಮೊತ್ತದ ಹೂಡಿಕೆ ಒಪ್ಪಂದಗಳನ್ನು ಆಕರ್ಷಿಸುವ ಮೂಲಕ ನಿಗದಿತ ಗುರಿಯನ್ನು ಮೀರಿದ ಸಾಧನೆ ಮಾಡಿತ್ತು.
ನಮ್ಮ ಪಾಲಿಗೆ ಹೂಡಿಕೆದಾರರ ಸಮಾವೇಶದ ಯಶಸ್ಸು ಕೇವಲ ಒಪ್ಪಂದಗಳಿಗೆ ಸಹಿ ಹಾಕುವುದರಲ್ಲಿ ಇಲ್ಲ; ಆ ಹೂಡಿಕೆಗಳು ವಾಸ್ತವಿಕ ಯೋಜನೆಗಳಾಗಿ ಅನುಷ್ಠಾನಗೊಂಡು, ಕೈಗಾರಿಕೆಗಳು ಆರಂಭವಾಗಿ, ಉದ್ಯೋಗಗಳು ಸೃಷ್ಟಿಯಾಗುವುದರಲ್ಲಿದೆ. ಈಗಾಗಲೇ ಉತ್ಪಾದನಾ ವಲಯದ ಹೂಡಿಕೆಗಳಲ್ಲಿ ಸುಮಾರು ಶೇ.65ರಷ್ಟು ಅನುಷ್ಠಾನದ ಹಂತಕ್ಕೆ ತಲುಪಿರುವುದು ನಮ್ಮ ಬದ್ಧತೆ ಮತ್ತು ಕಾರ್ಯಕ್ಷಮತೆಗೆ ಸಾಕ್ಷಿಯಾಗಿದೆ.
ಕಲಬುರಗಿ, ಕೊಪ್ಪಳ, ಬೆಳಗಾವಿ, ಕೋಲಾರ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಗೆ ಹೂಡಿಕೆಗಳು ಹರಿದುಬರುತ್ತಿವೆ. ಎಲೆಕ್ಟ್ರಾನಿಕ್ಸ್, ಏರೋಸ್ಪೇಸ್, ವಿದ್ಯುತ್ ವಾಹನಗಳು, ಉಕ್ಕು, ಸಿಮೆಂಟ್, ನವೀಕರಿಸಬಹುದಾದ ಇಂಧನ ಹಾಗೂ ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕವು ಪ್ರಗತಿಯ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಿದೆ.
ಹೂಡಿಕೆದಾರರ ಸಲಹೆಗಳನ್ನು ಆಲಿಸಿ, ಅವುಗಳನ್ನು ನೀತಿಗಳಾಗಿ ಮತ್ತು ಸುಧಾರಣೆಗಳಾಗಿ ಜಾರಿಗೊಳಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆ. ಉದ್ಯಮ ವಲಯದ ಪ್ರತಿನಿಧಿಗಳೊಂದಿಗೆ ನಡೆದ ‘ಉತ್ಪಾದನಾ ಮಂಥನ’ದಲ್ಲಿ ಸ್ವೀಕರಿಸಿದ 55 ಸಲಹೆಗಳಲ್ಲಿ 35ಕ್ಕೂ ಹೆಚ್ಚು ಸಲಹೆಗಳನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ.
ಕೈಗಾರಿಕಾ ನೀತಿ 2025–30ರ ಮೂಲಕ ಅರ್ಹ ಹೂಡಿಕೆದಾರರಿಗೆ ಬಂಡವಾಳ ಸಬ್ಸಿಡಿ ಅಥವಾ ಉತ್ಪಾದನೆ ಆಧಾರಿತ ಪ್ರೋತ್ಸಾಹಧನದ ಆಯ್ಕೆಯನ್ನು ಕಲ್ಪಿಸಲಾಗಿದೆ. ಏರೋಸ್ಪೇಸ್ ಮತ್ತು ರಕ್ಷಣಾ ವಲಯ, ಹಿಂದುಳಿದ ಪ್ರದೇಶಗಳ ಕೈಗಾರಿಕಾ ಅಭಿವೃದ್ಧಿ ಹಾಗೂ ಕೈಗಾರಿಕಾ ಕಾರ್ಮಿಕರ ಕಲ್ಯಾಣಕ್ಕೆ ಪೂರಕವಾದ ಹೊಸ ನೀತಿಗಳು ಮತ್ತು ವಲಯವಾರು ಕೈಗಾರಿಕಾ ಪಾರ್ಕ್ ಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುತ್ತಿದೆ.
ಈ ಬಾರಿಯ ಸಮಾವೇಶವನ್ನು ಕೇವಲ ಬೆಂಗಳೂರಿಗೆ ಸೀಮಿತಗೊಳಿಸದೆ, ಜಾಗತಿಕ ಮಟ್ಟದಲ್ಲಿ ವಿಸ್ತರಿಸುವ ಗುರಿ ಹೊಂದಿದ್ದೇವೆ. ವಿವಿಧ ದೇಶಗಳಲ್ಲಿ ರೋಡ್ ಶೋಗಳು, ದೇಶವಾರು ಹೂಡಿಕೆದಾರರ ದುಂಡುಮೇಜಿನ ಸಭೆಗಳು ಹಾಗೂ ಮೊದಲ ಬಾರಿಗೆ ಪೂರೈಕೆದಾರರ ಸಮಾವೇಶವನ್ನು ಆಯೋಜಿಸುವ ಮೂಲಕ ಕರ್ನಾಟಕದ ಕೈಗಾರಿಕಾ ಸಾಮರ್ಥ್ಯ ಮತ್ತು ಹೂಡಿಕೆಯ ಅವಕಾಶಗಳನ್ನು ವಿಶ್ವದ ಮುಂದೆ ಅನಾವರಣಗೊಳಿಸಲಿದ್ದೇವೆ.
ವಿಶೇಷವಾಗಿ ಉತ್ತರ ಕರ್ನಾಟಕದ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಮುಂಬರುವ ತಿಂಗಳುಗಳಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸಲಿದ್ದೇವೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗಗಳಲ್ಲಿರುವ ಕೈಗಾರಿಕಾ ಸಾಮರ್ಥ್ಯವನ್ನು ಜಾಗತಿಕ ಹೂಡಿಕೆದಾರರಿಗೆ ಪರಿಚಯಿಸಿ, ಈ ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮತ್ತು ಉದ್ಯೋಗಾವಕಾಶಗಳನ್ನು ಆಕರ್ಷಿಸುವುದು ನಮ್ಮ ಸಂಕಲ್ಪವಾಗಿದೆ.
ನಮ್ಮ ಗುರಿ ಸ್ಪಷ್ಟವಾಗಿದೆ: ಹೆಚ್ಚು ಹೂಡಿಕೆ, ಹೆಚ್ಚು ಉದ್ಯೋಗ, ಬೆಂಗಳೂರಿನಾಚೆಗೂ ಸಮಾನ ಕೈಗಾರಿಕಾ ಬೆಳವಣಿಗೆ ಹಾಗೂ ಹೂಡಿಕೆದಾರರಿಗೆ ಸರಳ, ವೇಗವಾದ ಮತ್ತು ಪಾರದರ್ಶಕ ವ್ಯವಸ್ಥೆ.
ಕರ್ನಾಟಕದ ಅಭಿವೃದ್ಧಿಯ ಪಯಣವು ಕೇವಲ ಹೂಡಿಕೆಗಳ ಮೊತ್ತದಿಂದ ಅಳೆಯಲ್ಪಡುವುದಿಲ್ಲ; ಆ ಹೂಡಿಕೆಗಳಿಂದ ಸೃಷ್ಟಿಯಾಗುವ ಉದ್ಯೋಗಗಳು, ಬೆಳವಣಿಗೆ ಕಾಣುವ ಕೈಗಾರಿಕೆಗಳು, ಸಬಲಗೊಳ್ಳುವ ಸ್ಥಳೀಯ ಆರ್ಥಿಕತೆ ಹಾಗೂ ಅಭಿವೃದ್ಧಿಯ ಫಲವನ್ನು ಪಡೆಯುವ ಜನಸಾಮಾನ್ಯರ ಬದುಕಿನಲ್ಲಿ ಅದರ ನಿಜವಾದ ಯಶಸ್ಸು ಅಡಗಿದೆ.
ಬೆಂಗಳೂರಿನಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಕೈಗಾರಿಕಾ ಬೆಳವಣಿಗೆಯ ಅವಕಾಶಗಳನ್ನು ವಿಸ್ತರಿಸುವ ಮೂಲಕ ಸಮೃದ್ಧ, ಸ್ವಾವಲಂಬಿ ಹಾಗೂ ಉದ್ಯೋಗಸಮೃದ್ಧ ಕರ್ನಾಟಕವನ್ನು ನಿರ್ಮಿಸುವುದು ನಮ್ಮ ಸಂಕಲ್ಪ ಎಂದು ವಾಣಿಜ್ಯ ಮತ್ತು ಕೈಗಾರಿಕೆ, ಮೂಲಸೌಕರ್ಯ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಕಾರ್ಯಕ್ರಮ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮತ್ತು ಸಚಿವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಜರುಗಿತು. ಉದ್ಯಮ ವಲಯದ ಗಣ್ಯರು, ಜಾಗತಿಕ ಹೂಡಿಕೆದಾರರು, ನವೋದ್ಯಮಿಗಳು, ಉದ್ಯಮಿಗಳು, ರಾಜತಾಂತ್ರಿಕರು ಹಾಗೂ ಹಿರಿಯ ಅಧಿಕಾರಿಗಳು ಈ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

