ಬೆಂಗಳೂರು: ಅಂಧಕಾರವನ್ನು ಹೋಗಲಾಡಿಸಿ ದೀಪವನ್ನು ಬೆಳಗಿಸಿ ಬೆಳಕಿನ ದಾರಿ ತೋರಿಸಬೇಕಾದ ದೀಪಾವಳಿ ಹಬ್ಬದ ಸಂಭ್ರಮದ ಪಟಾಕಿ ಹಲವರ ಬಾಳಲ್ಲಿ ಕತ್ತಲನ್ನು ತಂದಿದೆ. ದೀಪಾವಳಿ ಹಬ್ಬದ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿಸುವಾಗ ಹಲವು ಅವಘಡಗಳು ಸಂಭವಿಸಿದ್ದು, ಮಕ್ಕಳಿಂದ ಹಿಡಿದು, ದೊಡ್ಡವರವರೆಗೆ ಅನೇಕರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಗಳೂರಿನಲ್ಲಿ ಪಟಾಕಿ ಸಿಡಿಸುವ ವೇಳೆ ಸಂಭವಿಸಿದ ಅವಘಡಗಳಿಂದಾಗಿ ಹಲವರು ಕಣ್ಣುಗಳಿಗೆ ಗಂಭೀರವಾಗಿ ಬೆಂಗಳೂರಿನಲ್ಲಿ ಆತಂಕ ಮೂಡಿಸಿವೆ. ಪಟಾಕಿಗಳಿಂದ ಕಣ್ಣಿಗೆ ಗಾಯ ಮಾಡಿಕೊಂಡ 100ಕ್ಕೂ ಹೆಚ್ಚು ಮಂದಿ ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಗಾಯಾಳುಗಳಲ್ಲಿ ಮಕ್ಕಳು ಮತ್ತು ಪುಟ್ಟ ಕಂದಮ್ಮಗಳೂ ಇರುವುದು ಆತಂಕಕಾರಿ ಸಂಗತಿಯಾಗಿದೆ. ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಿದೆ. ಪಟಾಕಿ ಸಿಡಿಸುವವರಷ್ಟೇ ಅಲ್ಲದೆ, ಅಕ್ಕಪಕ್ಕದಲ್ಲಿ ನಿಂತು ನೋಡುತ್ತಿದ್ದವರೂ ಗಾಯಗೊಂಡಿರುವುದು ಸಾರ್ವಜನಿಕರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ನಗರದ ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದ ಕೇಂದ್ರವೊಂದರಲ್ಲೇ 41 ಕಣ್ಣಿನ ಗಾಯದ ಪ್ರಕರಣಗಳು ವರದಿಯಾಗಿವೆ. ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಮತ್ತು ವೈಟ್ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ರಾಜಾಜಿನಗರ ಕೇಂದ್ರದಲ್ಲಿ ಗಾಯಗೊಂಡ 41 ಮಂದಿಯಲ್ಲಿ 24 ಮಂದಿ 18 ವರ್ಷದೊಳಗಿನ ಮಕ್ಕಳು. 29 ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, 12 ಮಂದಿ ಪಕ್ಕದಲ್ಲಿ ನಿಂತಿದ್ದಾಗ ಗಾಯಗೊಂಡಿದ್ದಾರೆ. 40 ಮಂದಿಗೆ ಔಷಧೋಪಚಾರ ನೀಡಲಾಗಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಮಿಂಟೋ ನೇತ್ರ ಆಸ್ಪತ್ರೆಯಲ್ಲಿ 14 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 10 ಮಂದಿಗೆ ಗಂಭೀರ ಗಾಯಗಳಾಗಿವೆ. ನಾಲ್ಕು ಮಂದಿಗೆ ಸಾಮಾನ್ಯ ಗಾಯಗಳಾಗಿವೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದೆ. ಇನ್ನು ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 26 ಪ್ರಕರಣಗಳು ದಾಖಲಾಗಿವೆ. ಗಾಯಾಳುಗಳಲ್ಲಿ ಕೇವಲ ಮೂರು ತಿಂಗಳ ಹಸುಗೂಸಿನಿಂದ 46 ವರ್ಷದ ವಯಸ್ಕರವರೆಗೂ ಇದ್ದಾರೆ. ಐದು ತಿಂಗಳ ಮಗುವಿಗೆ ಪಟಾಕಿಯಿಂದ ಸ್ವಯಂ ಗಾಯವಾಗಿರುವ ಪ್ರಕರಣವೂ ವರದಿಯಾಗಿದೆ. ಬೆಳಕಿನ ಹಬ್ಬ ದೀಪಾವಳಿ ಪಟಾಕಿ ಹಲವರ ಬದುಕಲ್ಲಿ ಅಂಧಕಾರವನ್ನು ಮೂಡಿಸಿದೆ.
ಪಟಾಕಿ ಎಂದು ಭಾವಿಸಿ ಸಿಡಿಮದ್ದಿಗೆ ಬೆಂಕಿ ಹಚ್ಚಿದ ಬಾಲಕ: ಭೀಕರ ಸ್ಫೋಟದಲ್ಲಿ ಸಾವು
ಕಲಬುರಗಿ: ದೀಪಾವಳಿ ಸಡಗರ-ಸಂಭ್ರಮಾಚರಣೆ ನಡುವೆ ಪಟಾಕಿ ಸಿಡಿಸುವಾಗ ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಮಧ್ಯೆ ಪಟಾಕಿ ಎಂದು ಭಾವಿಸಿ ಸಿಡಿಮದ್ದಿಗೆ ಬೆಂಕಿ ಹಚ್ಚಿದ ಬಾಲಕನೊಬ್ಬ ಭೀಕರ ಸ್ಥೋಟದಲ್ಲಿ ಸಾಅವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.
ದೀಪಾವಳಿ ಹಬ್ಬದ ದಿನವೇ ಘೋರ ದುರಂತ ಸಂಭವಿಸಿದೆ. ದೀಪಾವಳಿ ಪಟಾಕಿ ಎಂದು ಕಾಡುಹಂದಿಗಳಿಗಾಗಿ ತಂದಿಟ್ಟಿದ್ದ ಸ್ಫೋಟಕ ಸಿಡಿಮದ್ದಿಗೆ ಬೆಂಕಿ ಹಚ್ಚಿದ 15 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭೀಮರಾಯ ಮೃತ ಬಾಲಕ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಹಂದರಕಿ ಗ್ರಾಮದ ಬಾಲಕ ಭೀಮರಾಯ, ದೀಪಾವಳಿ ಪಟಾಕಿ ಅಂತ ಮನೆಯಲ್ಲಿ ಇಟ್ಟಿದ್ದ ಮದ್ದಿಗೆ ಬೆಂಕಿ ಹಚ್ಚಿದ್ದಾನೆ. ಆದರೆ ಅದು ಸಾಮಾನ್ಯ ಪಟಾಕಿಯಾಗಿರಲಿಲ್ಲ. ಕಾಡುಹಂದಿಗಳನ್ನ ಓಡಿಸಲು ತಂದಿಟ್ಟಿದ್ದ ಸ್ಫೋಟಕವಾಗಿತ್ತು. ಆ ಮದ್ದಿನ ಅಪಾಯ ಅರಿಯದ ಭೀಮರಾಯ, ಬೆಂಕಿ ಹಚ್ಚಿದ ಕ್ಷಣವೇ ದೊಡ್ಡ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಬಾಲಕನ ತಲೆ ಛಿದ್ರಛಿದ್ರವಾಗಿದೆ. ಸ್ಥಳದಲ್ಲೇ ಭೀಮರಾಯ ಸಾವನ್ನಪ್ಪಿದ್ದಾನೆ. ಕೆಲವೇ ಕ್ಷಣಗಳ ಹಿಂದೆ ಆಟವಾಡುತ್ತಿದ್ದ ಮಗ ಕಣ್ಣೆದುರೇ ಸಾವನ್ನಪ್ಪಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಭೀಮರಾಯನ ತಂದೆ ಕಾಡುಹಂದಿಗಳನ್ನ ಓಡಿಸಲು ಸ್ಫೋಟಕ ಮದ್ದನ್ನ ಮನೆಯಲ್ಲಿ ತಂದಿಟ್ಟಿದ್ದರಂತೆ. ಅದನ್ನೇ ದೀಪಾವಳಿ ಪಟಾಕಿ ಅಂತ ಬಾಲಕ ಭಾವಿಸಿದ್ದಾನೆ. ಅಪಾಯಕಾರಿ ಮದ್ದು ಮನೆಯಲ್ಲಿ ಇಟ್ಟಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಮಕ್ಕಳ ಕೈಗೆ ಇಂಥ ಸ್ಫೋಟಕ ವಸ್ತುಗಳು ಸಿಕ್ಕರೆ ಎಂಥ ಅನಾಹುತ ಸಂಭವಿಸುತ್ತೆ ಅನ್ನೋದಕ್ಕೆ ಹಂದರಕಿ ಗ್ರಾಮದಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ.
ಇನ್ನು ಮಗನನ್ನ ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಮಗನ ಭವಿಷ್ಯದ ಬಗ್ಗೆ ಕನಸು ಕಂಡಿದ್ದ ಹೆತ್ತವರಿಗೆ ಈಗ ಉಳಿದಿರುವುದು ದುಃಖ ಮಾತ್ರ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

