ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಾಗರಿಕರಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ದೀಪಗಳ ಹಬ್ಬವಾದ ದೀಪಾವಳಿಯು ದೇಶವನ್ನು ಬೆಳಗಿಸುತ್ತದೆ ಮತ್ತು ಕತ್ತಲೆಯನ್ನು ಹೋಗಲಾಡಿಸುವ ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.
ಈ ಹಬ್ಬ ಮತ್ತು ಮುಂದಿನ ದಿನಗಳು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ ಎಂದು ಅವರು ಆಶಿಸಿದ್ದಾರೆ.
ತಾನು ದೀಪಾವಳಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸುವುದಾಗಿ ತಿಳಿಸಿದ ಪ್ರಧಾನಿ, ಹಿಂದಿನ ವರ್ಷಗಳಂತೆಯೇ ಈ ಬಾರಿಯೂ ದೇಶದ ವೀರ ಸೈನಿಕರೊಂದಿಗೆ ಈ ಹಬ್ಬವನ್ನು ಕಳೆಯುವ ಸಂಪ್ರದಾಯವನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
‘ಎಕ್ಸ್’ (X) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಪ್ರಧಾನಿ ಮೋದಿ, “ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು!” ಎಂದು ಬರೆದಿದ್ದಾರೆ.
ಪ್ರಧಾನಿಯವರ ದೀಪಾವಳಿ ಶುಭಾಶಯದ ವಿಡಿಯೋವನ್ನು ಇಲ್ಲಿ ವೀಕ್ಷಿಸಿ:
ಉಪ ರಾಷ್ಟ್ರಪತಿ ಭೇಟಿಯಾದ ಪ್ರಧಾನಿ: ದೀಪಾವಳಿ ಶುಭಾಶಯ
ನವದೆಹಲಿ: ಪ್ರಧಾನಮಂತ್ರಿ ಮೋದಿ ಅವರು ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ, ದೀಪಾವಳಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಉಪರಾಷ್ಟ್ರಪತಿ ಭವನದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಭೇಟಿ ಮಾಡಿ ದೀಪಾವಳಿ ಶುಭಾಶಯ ವಿನಿಮಯ ಮಾಡಿಕೊಂಡರು.
ಮೋದಿ ಅವರು ಎಕ್ಸ್ ತಾಣದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿ ದೀಪಾವಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡೆವು ಎಂದು ಬರೆದಿದ್ದಾರೆ.
ನ.13ರಂದು ಪ್ರಧಾನಿ ಮೋದಿ ಕರ್ನಾಟಕ ಭೇಟಿ; ಬೆಂಗಳೂರು, ಮೈಸೂರಿನಲ್ಲಿ ಹಲವು ಮಹತ್ವದ ಕಾರ್ಯಕ್ರಮ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 13ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ನಮ್ಮ ಮೆಟ್ರೋದ ಬಹುನಿರೀಕ್ಷಿತ ಪಿಂಕ್ ಲೈನ್ ನ ಎತ್ತರಿಸಿದ ಮಾರ್ಗಕ್ಕೆ ಚಾಲನೆ ನೀಡಲಿರುವ ಪ್ರಧಾನಿ, ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಬಳಿಕ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಎರಡೂ ನಗರಗಳಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಭದ್ರತೆ, ಸಂಚಾರ ವ್ಯವಸ್ಥೆ, ಕಾರ್ಯಕ್ರಮಗಳ ಸ್ಥಳ ಹಾಗೂ ಗಣ್ಯರ ಪ್ರಯಾಣದ ಮಾರ್ಗಗಳ ಕುರಿತು ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಪಿಂಕ್ ಲೈನ್ ಗೆ ಹಸಿರು ನಿಶಾನೆ
ಪ್ರಧಾನಿ ಭೇಟಿಯ ಪ್ರಮುಖ ಕಾರ್ಯಕ್ರಮಗಳಲ್ಲಿ ನಮ್ಮ ಮೆಟ್ರೋದ ಪಿಂಕ್ ಲೈನ್ ಉದ್ಘಾಟನೆ ಪ್ರಮುಖವಾಗಿದೆ. ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಸುಮಾರು 7.5 ಕಿ.ಮೀ. ಉದ್ದದ ಎತ್ತರಿಸಿದ ಮಾರ್ಗಕ್ಕೆ ಮೋದಿ ಚಾಲನೆ ನೀಡಲಿದ್ದಾರೆ.
ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ.ನಗರ ನಾಲ್ಕನೇ ಹಂತ, ಜಯದೇವ ಆಸ್ಪತ್ರೆ, ರಾಗಿಗುಡ್ಡ ಮತ್ತು ತಾವರೆಕೆರೆ ಸೇರಿದಂತೆ ಏಳು ನಿಲ್ದಾಣಗಳಿವೆ.
ಉದ್ಘಾಟನೆಯ ಬಳಿಕ ಪ್ರಧಾನಿ ತಾವರೆಕೆರೆ ನಿಲ್ದಾಣದಿಂದ ಐಐಎಂಬಿ ನಿಲ್ದಾಣದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ಕಾರ್ಯಕ್ರಮವೂ ನಿಗದಿಯಾಗಿದೆ. ಈ ಮಾರ್ಗ ಕಾರ್ಯಾರಂಭ ಮಾಡಿದರೆ ನಮ್ಮ ಮೆಟ್ರೋದ ಒಟ್ಟು ಕಾರ್ಯಾಚರಣೆಯ ಜಾಲ 100 ಕಿ.ಮೀ. ಗಡಿ ದಾಟಿ ಸುಮಾರು 103.6 ಕಿ.ಮೀ.ಗೆ ವಿಸ್ತರಣೆಯಾಗಲಿದೆ.
ದಕ್ಷಿಣ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ಜಯದೇವ ಆಸ್ಪತ್ರೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಪಿಂಕ್ಲೈನ್ನ ಈ ಭಾಗ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾದರೆ ರಸ್ತೆ ಮೇಲಿನ ವಾಹನಗಳ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ. ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಯೆಲ್ಲೋಲೈನ್ಗೆ ಸಂಪರ್ಕ ಸಿಗುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಪ್ರಶಾಂತಿ ಕುಟೀರಂ ಸುವರ್ಣ ಮಹೋತ್ಸವ
ಬೆಂಗಳೂರಿನ ಮತ್ತೊಂದು ಪ್ರಮುಖ ಕಾರ್ಯಕ್ರಮವಾಗಿ ಪ್ರಶಾಂತಿ ಕುಟೀರಂನಲ್ಲಿ ನಡೆಯಲಿರುವ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗಣ್ಯರು, ಸಂಸ್ಥೆಯ ಪ್ರತಿನಿಧಿಗಳು ಹಾಗೂ ಆಹ್ವಾನಿತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ
ಮೆಟ್ರೋ ಉದ್ಘಾಟನೆಯ ಬಳಿಕ ಐಐಎಂಬಿ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಪೂರ್ಣಗೊಂಡಿರುವ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮವೂ ನಡೆಯಲಿದೆ. ಈ ಯೋಜನೆಗಳ ಸಂಪೂರ್ಣ ವಿವರಗಳನ್ನು ಅಧಿಕೃತ ಕಾರ್ಯಕ್ರಮದ ವೇಳಾಪಟ್ಟಿಯಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.
ಮೈಸೂರಿನಲ್ಲಿ ಪ್ಲಾನೆಟೋರಿಯಂ ಉದ್ಘಾಟನೆ
ಬೆಂಗಳೂರಿನ ಕಾರ್ಯಕ್ರಮಗಳ ಬಳಿಕ ಪ್ರಧಾನಿ ಮೋದಿ ಮೈಸೂರಿಗೆ ತೆರಳಲಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿಶ್ವವಿದ್ಯಾಲಯದ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ಟಿಲ್ಟೆಡ್ ಎಲ್ಇಡಿ ಡೋಮ್ ಪ್ಲಾನೆಟೋರಿಯಂ ಉದ್ಘಾಟನೆ ಈ ಭೇಟಿಯ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.
. ಸುಮಾರು 91 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಕೇಂದ್ರವು ಖಗೋಳ ವಿಜ್ಞಾನ, ಬಾಹ್ಯಾಕಾಶ ಮತ್ತು ವಿಶ್ವದ ರಚನೆ ಕುರಿತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಿದೆ.
ಮೈಸೂರಿನಲ್ಲಿ ‘ಭಾರತ್ ವನ್’ ಮತ್ತು ಕಾಸ್ಮೋಸ್ ಕಾರ್ಯಕ್ರಮ
ಮೈಸೂರಿನ ಕೆ.ಸಿ. ಲೇಔಟ್ ಪಾರ್ಕ್ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ‘ಭಾರತ್ ವನ್’ ಯೋಜನೆಯ ಕಾರ್ಯಕ್ರಮದಲ್ಲಿಯೂ ಪ್ರಧಾನಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಇಲ್ಲಿ ಸ್ವಚ್ಛ ಭಾರತ ಅಭಿಯಾನದ ಲಾಂಛನದ ಆಕಾರದಲ್ಲಿ ಮಿಯಾವಾಕಿ ಮಾದರಿಯ ಕಿರು ಅರಣ್ಯ ಬೆಳೆಸಲಾಗುತ್ತಿದೆ. ಸುಮಾರು 40 ಸಾವಿರ ಸಸಿಗಳನ್ನು ನೆಡುವ ಯೋಜನೆ ಇದಾಗಿದ್ದು, ಸ್ಥಳೀಯ ಜಾತಿಯ ಸಸ್ಯಗಳ ಬೆಳೆವಣಿಗೆಗೆ ಆದ್ಯತೆ ನೀಡಲಾಗಿದೆ.
ಇದರೊಂದಿಗೆ ಮೈಸೂರಿನಲ್ಲಿ ನಡೆಯಲಿರುವ COSMOS ಕಾರ್ಯಕ್ರಮದಲ್ಲಿಯೂ ಪ್ರಧಾನಿ ಭಾಗವಹಿಸಲಿದ್ದಾರೆ. ವಿಜ್ಞಾನ, ಖಗೋಳಶಾಸ್ತ್ರ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದ ಈ ಕೇಂದ್ರದ ಉದ್ಘಾಟನೆ ಮೈಸೂರು ನಗರಕ್ಕೆ ಮತ್ತೊಂದು ಶೈಕ್ಷಣಿಕ ಆಕರ್ಷಣೆಯಾಗಲಿದೆ.

