ಮುಂಬೈ: ಮಹಾರಾಷ್ಟ್ರದ ಹಿರಿಯ ರಾಜಕೀಯ ನಾಯಕ ಹಾಗೂ ಎನ್‌ಸಿಪಿ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಪುಣೆಯ ರೂಬಿ ಹಾಲ್ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
85 ವರ್ಷದ ಶರದ್ ಪವಾರ್ ಅವರಿಗೆ ಕೆಮ್ಮು ಹಾಗೂ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದ್ದು, ವೈದ್ಯರು ವಿವಿಧ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ ಎಂದು ಪುತ್ರಿ ಹಾಗೂ ಸಂಸದೆ ಸುಪ್ರಿಯಾ ಸುಳೆ ತಿಳಿಸಿದ್ದಾರೆ.
ಪುತ್ರಿ ಸುಪ್ರಿಯಾ ಸುಳೆ ಹೇಳಿದ್ದೇನು?
ತಂದೆಯ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸುಪ್ರಿಯಾ ಸುಳೆ, ತಂದೆ ಶರದ್ ಪವಾರ್ ಅವರಿಗೆ ಕೆಮ್ಮು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪುಣೆಯ ರೂಬಿ ಹಾಲ್ ಕ್ಲಿನಿಕ್‌ಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಎಲ್ಲಾ ಆರೋಗ್ಯ ಮಾನದಂಡಗಳು ಸ್ಥಿರವಾಗಿವೆ. ನಮ್ಮ ಬಗ್ಗೆ ಕಾಳಜಿ ತೋರಿಸಿ, ಹಾರೈಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಎದೆನೋವಿನ ಹಿನ್ನೆಲೆಯಲ್ಲಿ ವೈದ್ಯರ ನಿಗಾದಲ್ಲಿ ಚಿಕಿತ್ಸೆ
ರೂಬಿ ಹಾಲ್ ಕ್ಲಿನಿಕ್‌ನ ಮುಖ್ಯ ಹೃದ್ರೋಗ ತಜ್ಞ ಹಾಗೂ ಆಸ್ಪತ್ರೆಯ ಅಧ್ಯಕ್ಷ ಡಾ. ಪರ್ವೇಜ್ ಕೆ. ಗ್ರಾಂಟ್ ಅವರು ನೀಡಿರುವ ಮಾಹಿತಿಯ ಪ್ರಕಾರ, ಶರದ್ ಪವಾರ್ ಅವರಿಗೆ ಎದೆನೋವಿನ(Pleuritic Pain) ದೂರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ನಿಗಾಕ್ಕಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಸಿರಾಡುವಾಗ, ಕೆಮ್ಮುವಾಗ ಅಥವಾ ಸೀನುವಾಗ ಹೆಚ್ಚಾಗಬಹುದಾದ ಎದೆನೋವನ್ನು ವೈದ್ಯಕೀಯ ಭಾಷೆಯಲ್ಲಿ ಪ್ಲೂರಿಟಿಕ್ ಪೇನ್ ಎಂದು ಕರೆಯಲಾಗುತ್ತದೆ.
ಸದ್ಯ ಅವರ ಆರೋಗ್ಯದಲ್ಲಿ ಸುಧಾರಣೆಯಾಗುವ ನಿರೀಕ್ಷೆಯಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ವರ್ಷ ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲು
ಶರದ್ ಪವಾರ್ ಅವರು 2026ರಲ್ಲೇ ಮೂರನೇ ಬಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೂ ಮೊದಲು ಫೆಬ್ರವರಿ 9ರಂದು ನಿರಂತರ ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ರೂಬಿ ಹಾಲ್ ಕ್ಲಿನಿಕ್‌ಗೆ ದಾಖಲಾಗಿದ್ದರು. ಪರೀಕ್ಷೆ ವೇಳೆ ಎದೆ ಸೋಂಕು ಕಾಣಿಸಿಕೊಂಡಿತ್ತು. ಫೆಬ್ರವರಿ 14ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ನಂತರ ಫೆಬ್ರವರಿ 22ರಂದು ಸೌಮ್ಯ ನಿರ್ಜಲೀಕರಣದ ಸಮಸ್ಯೆಯಿಂದ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ಬಳಿಕ ಫೆಬ್ರವರಿ 26ರಂದು ಬಿಡುಗಡೆಯಾಗಿದ್ದರು.
ಆಸ್ಪತ್ರೆಗೆ ದಾಖಲಾಗುವ ಮುನ್ನ ಬರ ಪರಿಸ್ಥಿತಿ ಪರಿಶೀಲನೆ
ನವೆಂಬರ್ 1ರಂದು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಢಾ ತಾಲ್ಲೂಕಿನ ತುಳ್ಶಿ ಗ್ರಾಮಕ್ಕೆ ಶರದ್ ಪವಾರ್ ಭೇಟಿ ನೀಡಿದ್ದರು. ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ಹಾಗೂ ಗ್ರಾಮಸ್ಥರನ್ನು ಭೇಟಿಯಾಗಿ ಸಮಸ್ಯೆಗಳನ್ನು ಆಲಿಸಿದ್ದರು.
ಗ್ರಾಮದಲ್ಲಿ ನೀರಿನ ಸಮಸ್ಯೆ ಮತ್ತು ಕೃಷಿ ಸಂಕಷ್ಟದ ಕುರಿತು ಪರಿಶೀಲನೆ ನಡೆಸಿದ್ದ ಅವರು, ನೀರು ಸಂರಕ್ಷಣಾ ಕಾರ್ಯಗಳಿಗೆ 50 ಲಕ್ಷ ರೂಪಾಯಿ ಆರ್ಥಿಕ ನೆರವು ಘೋಷಿಸಿದ್ದರು ಎಂದು ವರದಿಯಾಗಿದೆ.
ಸದ್ಯ ಶರದ್ ಪವಾರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪುತ್ರಿ ಸುಪ್ರಿಯಾ ಸುಳೆ ಸ್ಪಷ್ಟಪಡಿಸಿದ್ದು, ವೈದ್ಯಕೀಯ ಪರೀಕ್ಷೆಗಳು ಮುಂದುವರಿದಿವೆ. ಅವರ ಆರೋಗ್ಯದ ಕುರಿತು ಮುಂದಿನ ವೈದ್ಯಕೀಯ ವರದಿಗಳಿಗಾಗಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಕಾಯುತ್ತಿದ್ದಾರೆ.

