ಪ್ರತಿ ತಿಂಗಳು ಬರುವ ಪಿಂಚಣಿ ಹಣವೇ ಅನೇಕ ಹಿರಿಯ ನಾಗರಿಕರ ಜೀವನಕ್ಕೆ ಆಸರೆ. ಔಷಧಿ ಖರ್ಚು, ದಿನನಿತ್ಯದ ಅಗತ್ಯಗಳು, ಮನೆ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳಿಗೆ ಪಿಂಚಣಿ ಹಣವನ್ನೇ ಅವಲಂಬಿಸಿರುವವರು ಸಾಕಷ್ಟು ಮಂದಿ ಇದ್ದಾರೆ. ಇಂತಹ ಪಿಂಚಣಿದಾರರು ಒಂದು ಸಣ್ಣ ಕೆಲಸ ಮರೆತರೂ ಪಿಂಚಣಿ ಪಾವತಿಯಲ್ಲಿ ತೊಂದರೆ ಎದುರಾಗಬಹುದು. ಹೌದು, ಅದುವೇ ವಾರ್ಷಿಕ ಜೀವಿತ ಪ್ರಮಾಣಪತ್ರ (Life Certificate) ಸಲ್ಲಿಕೆ.
2026ನೇ ಸಾಲಿನ ಜೀವಿತ ಪ್ರಮಾಣಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ನವೆಂಬರ್ 1ರಿಂದ 30ರವರೆಗೆ ಪಿಂಚಣಿದಾರರು ತಮ್ಮ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಈ ಪ್ರಮಾಣಪತ್ರ ಸಲ್ಲಿಸುವುದು ಪಿಂಚಣಿ ನಿರಂತರವಾಗಿ ದೊರೆಯಲು ಅತ್ಯಂತ ಮುಖ್ಯವಾಗಿದೆ.
80 ವರ್ಷ ಮೇಲ್ಪಟ್ಟವರಿಗೆ ಮೊದಲೇ ಅವಕಾಶ!
ಹಿರಿಯ ನಾಗರಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು 80 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪಿಂಚಣಿದಾರರಿಗೆ ವಿಶೇಷ ಅವಕಾಶ ನೀಡಲಾಗಿದೆ. ಇವರು ಅಕ್ಟೋಬರ್ 1ರಿಂದಲೇ ತಮ್ಮ ಜೀವಿತ ಪ್ರಮಾಣಪತ್ರ ಸಲ್ಲಿಸಬಹುದು. ಇನ್ನುಳಿದ ಪಿಂಚಣಿದಾರರು ನವೆಂಬರ್ ತಿಂಗಳಿನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಬ್ಯಾಂಕ್ಗೆ ಅಲೆಯುವ ಅಗತ್ಯವಿಲ್ಲ; ಮನೆಯಲ್ಲೇ ಸಲ್ಲಿಸಿ!
ವಯಸ್ಸಾದ ಕಾರಣಕ್ಕೆ ಬ್ಯಾಂಕ್ಗೆ ಹೋಗಲು ಸಾಧ್ಯವಾಗದವರು ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ. ತಂತ್ರಜ್ಞಾನದ ನೆರವಿನಿಂದ ಮನೆಯಲ್ಲಿಯೇ ಕುಳಿತು ಲೈಫ್ ಸರ್ಟಿಫಿಕೇಟ್ ಸಲ್ಲಿಸಬಹುದು.
ಕೇಂದ್ರ ಸರ್ಕಾರದ ‘ಜೀವನ್ ಪ್ರಮಾಣ್’ (Jeevan Pramaan) ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸುವ ವ್ಯವಸ್ಥೆಯಿದೆ. ಫೇಸ್ ಅಥೆಂಟಿಕೇಶನ್ ತಂತ್ರಜ್ಞಾನ ಬಳಸಿ ಮುಖದ ಗುರುತನ್ನು ದೃಢೀಕರಿಸುವ ಮೂಲಕ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಒಂದು ವೇಳೆ ಡಿಜಿಟಲ್ ವಿಧಾನ ಬಳಸಲು ತಿಳಿದಿಲ್ಲದಿದ್ದರೆ, ಪಿಂಚಣಿ ಪಡೆಯುವ ಸಂಬಂಧಪಟ್ಟ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪ್ರಮಾಣಪತ್ರ ಸಲ್ಲಿಸಬಹುದು.
ಹಿರಿಯರ ಮನೆ ಬಾಗಿಲಿಗೇ ಬರಲಿದೆ ಸಿಬ್ಬಂದಿ!
ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದಿಲ್ಲದ ಹಿರಿಯ ನಾಗರಿಕರಿಗೂ ಸರ್ಕಾರ ಅನುಕೂಲ ಕಲ್ಪಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ಮತ್ತು ಕಾಮನ್ ಸರ್ವೀಸ್ ಸೆಂಟರ್ಗಳ (CSC) ಮೂಲಕ ಮನೆ ಬಾಗಿಲಿನಲ್ಲೇ ಸೇವೆ ಪಡೆಯಬಹುದು.
ಈ ವ್ಯವಸ್ಥೆಯಲ್ಲಿ ಅಂಚೆ ಸಿಬ್ಬಂದಿ ಅಥವಾ ಸಂಬಂಧಪಟ್ಟ ಸೇವಾ ಪ್ರತಿನಿಧಿಗಳು ಪಿಂಚಣಿದಾರರ ಮನೆಗೆ ಭೇಟಿ ನೀಡುತ್ತಾರೆ. ಬಳಿಕ ಬಯೋಮೆಟ್ರಿಕ್ ಅಥವಾ ಫೇಸ್ ಸ್ಕ್ಯಾನ್ ಮೂಲಕ ಗುರುತನ್ನು ದೃಢೀಕರಿಸಿ ಜೀವಿತ ಪ್ರಮಾಣಪತ್ರ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತಾರೆ.
ನವೆಂಬರ್ 30 ಮೀರಿದರೆ ಪಿಂಚಣಿಗೆ ತೊಂದರೆಯಾಗಬಹುದು!
ಪಿಂಚಣಿದಾರರು ನವೆಂಬರ್ 30ರೊಳಗೆ ಜೀವಿತ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಪಾವತಿಯಲ್ಲಿ ವಿಳಂಬ ಅಥವಾ ತಾತ್ಕಾಲಿಕ ಸ್ಥಗಿತ ಉಂಟಾಗುವ ಸಾಧ್ಯತೆಯಿದೆ. ಇದರಿಂದ ಈಗಾಗಲೇ ಪಿಂಚಣಿ ಹಣವನ್ನೇ ನಂಬಿಕೊಂಡಿರುವ ಹಿರಿಯ ನಾಗರಿಕರಿಗೆ ಅನಗತ್ಯ ಆತಂಕ ಎದುರಾಗಬಹುದು.
ಹೀಗಾಗಿ ಕೊನೆಯ ದಿನದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಲೈಫ್ ಸರ್ಟಿಫಿಕೇಟ್ ಸಲ್ಲಿಸುವುದು ಉತ್ತಮ. ಅಗತ್ಯವಿದ್ದರೆ ಮಕ್ಕಳು ಅಥವಾ ಕುಟುಂಬದ ಸದಸ್ಯರು ಹಿರಿಯರಿಗೆ ಸಹಾಯ ಮಾಡಬಹುದು.

