ಸಾಲು ಸಾಲು ಹಬ್ಬಗಳ ನಡುವೆ ಪ್ರಪಂಚದಾದ್ಯಂತ ನೆಲೆಸಿರುವ ಭಾರತೀಯರು ದೀಪಾವಳಿ ಸಂಭ್ರಮದಲ್ಲಿದ್ದಾರೆ. ವಿದೇಶದಲ್ಲಿದ್ದರೂ ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಆಚರಣೆಯನ್ನು ಎಂದಿಗೂ ಮರೆಯದ ಬಾಲಿವುಡ್ನ ‘ದೇಸಿ ಗರ್ಲ್’ ಪ್ರಿಯಾಂಕಾ ಚೋಪ್ರಾ, ಈ ಬಾರಿಯೂ ಅದ್ಧೂರಿಯಾಗಿ ದೀಪಾವಳಿ ಆಚರಿಸಿದ್ದಾರೆ. ಅಮೆರಿಕದ ಲಾಸ್ ಏಂಜಲೀಸ್ನಲ್ಲಿರುವ ತಮ್ಮ ನಿವಾಸದಲ್ಲಿ ಪ್ರಿಯಾಂಕಾ ಹಾಗೂ ಅವರ ಪತಿ ನಿಕ್ ಜೋನಾಸ್ ಆಯೋಜಿಸಿದ್ದ ದೀಪಾವಳಿ ಪಾರ್ಟಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ.
ಅಕ್ಟೋಬರ್ 30 ರಂದು ನಡೆದ ಈ ಆಪ್ತ ಕೂಟದಲ್ಲಿ ಡೊಳ್ಳು-ಕುಣಿತ, ಸಾಂಪ್ರದಾಯಿಕ ಆಹಾರ ಮತ್ತು ಭಾರತೀಯ ಶೈಲಿಯ ಸಂಭ್ರಮ ಮುಗಿಲು ಮುಟ್ಟಿತ್ತು. ವಿದೇಶಿ ಹಾಗೂ ಭಾರತೀಯ ಮೂಲದ ಪ್ರಸಿದ್ಧ ಗಣ್ಯರು ಈ ಪಾರ್ಟಿಯಲ್ಲಿ ಭಾಗವಹಿಸಿ ಹಬ್ಬದ ಮೆರುಗನ್ನು ಹೆಚ್ಚಿಸಿದರು.
ನಟಿ ಪ್ರಿಯಾಂಕಾ ರಾಯಲ್ ಲುಕ್: ಈ ಹಬ್ಬದ ಸಂಭ್ರಮದಲ್ಲಿ ಪ್ರಿಯಾಂಕಾ ಚೋಪ್ರಾ ತೊಟ್ಟಿದ್ದ ರಾಯಲ್ ಬರ್ಗಂಡಿ ಬಣ್ಣದ ವಿಶೇಷ ಗೌನ್ ಎಲ್ಲರ ಕಣ್ಣು ಕೋರೈಸುವಂತಿತ್ತು. ಸಾಂಪ್ರದಾಯಿಕ ಭಾರತೀಯ ಕಸೂತಿ ಕೆಲಸ ಮತ್ತು ಆಧುನಿಕ ರೆಡ್ ಕಾರ್ಪೆಟ್ ವಿನ್ಯಾಸದ ಸಮ್ಮಿಶ್ರಣದಂತಿದ್ದ ಈ ಗೌನ್ನಲ್ಲಿ ಪ್ರಿಯಾಂಕಾ ದೇವತೆಯಂತೆ ಕಂಗೊಳಿಸುತ್ತಿದ್ದರು. ಹೆಗಲ ಭಾಗ ಮುಕ್ತವಾಗಿದ್ದ ಈ ಉಡುಪಿನಲ್ಲಿ ಚಿನ್ನದ ದಾರ, ಝರ್ದೋಜಿ ಹಾಗೂ ಮಣಿಗಳ ಸೂಕ್ಷ್ಮ ಕೆಲಸಗಳಿದ್ದು, ಕುತ್ತಿಗೆಯ ಭಾಗದಲ್ಲಿದ್ದ ದುಪಟ್ಟಾ ಶೈಲಿಯ ವಿನ್ಯಾಸ ನಟಿಗೆ ಸಂಪೂರ್ಣ ದೇಸಿ ಲುಕ್ ನೀಡಿತ್ತು.
ಈ ಭವ್ಯ ಉಡುಪಿಗೆ ತಕ್ಕಂತೆ ಪ್ರಿಯಾಂಕಾ ಸರಳ ಹಾಗೂ ಆಕರ್ಷಕ ಆಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಕೆಂಪು ಹರಳಿನ ಓಲೆಗಳು, ಸಣ್ಣ ಕುಂದನ್ ನತ್ತು ಮತ್ತು ಕೈಯಲ್ಲಿ ಚಿನ್ನದ ಬಳೆಗಳನ್ನು ಧರಿಸಿದ್ದರು. ಬರ್ಗಂಡಿ ಬಣ್ಣದ ಲಿಪ್ಸ್ಟಿಕ್, ಸ್ಮೋಕಿ ಕಣ್ಣುಗಳ ಮೇಕಪ್ ಮತ್ತು ತಲೆಗೆ ಮಲ್ಲಿಗೆ ಹೂವಿನ ಮುಡಿದುಕೊಂಡಿದ್ದ ನಟಿಯ ನೋಟ ಪ್ರತಿಯೊಬ್ಬರ ಮನ ಗೆದ್ದಿದೆ.
ಸರಳ ಗೌರವಾನ್ವಿತ ಲುಕ್ನಲ್ಲಿ ನಿಕ್ ಜೋನಾಸ್: ಪ್ರಿಯಾಂಕಾ ಅವರ ಅದ್ದೂರಿ ಲುಕ್ಗೆ ತಕ್ಕಂತೆ ಪತಿ ನಿಕ್ ಜೋನಾಸ್ ಸರಳ ಹಾಗೂ ಶಿಸ್ತಿನ ಉಡುಪಿನಲ್ಲಿ ಮಿಂಚಿದರು. ತಿಳಿ ಹಳದಿ ಮತ್ತು ಬಿಳಿ ಬಣ್ಣದ ಸೂಕ್ಷ್ಮ ಕಸೂತಿಯುಳ್ಳ ಕುರ್ತಾ ಧರಿಸಿದ್ದ ನಿಕ್, ಭಾರತೀಯ ಸಂಪ್ರದಾಯಕ್ಕೆ ಸಂಪೂರ್ಣ ಗೌರವ ಸೂಚಿಸುವಂತೆ ಕಂಗೊಳಿಸಿದರು.
ತಾರೆಯರ ದಂಡು: ಈ ಸಂಭ್ರಮದ ಕೂಟದಲ್ಲಿ ಅಂತಾರಾಷ್ಟ್ರೀಯ ಮಾಡೆಲ್ ವಿನಿ ಹಾರ್ಲೋ ಕೆಂಪು ಬಣ್ಣದ ಲಹಂಗಾದಲ್ಲಿ ಮಿಂಚಿದರೆ, ಗಾಯಕಿ ರಿಯಾ ರಾಜ್ ಹಾಗೂ ಖ್ಯಾತ ಯೂಟ್ಯೂಬರ್ ಲಿಲ್ಲಿ ಸಿಂಗ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಪ್ರಸಿದ್ಧ ವ್ಯಕ್ತಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ದೀಪಾವಳಿಯನ್ನು ಸಂಭ್ರಮಿಸಿದರು.
ಪ್ರಿಯಾಂಕಾ ಮತ್ತು ನಿಕ್ ಜೋನಾಸ್ ಜೋಡಿಯ ಈ ದೀಪಾವಳಿ ಆಚರಣೆಯ ಫೋಟೋಗಳು ಮತ್ತು ವೀಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.

