ಬೆಳಗಾವಿ: ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯಲ್ಲೇ ಅವಧಿ ಮೀರಿದ ಔಷಧ ಮತ್ತು ಲಸಿಕೆಗಳು ಪತ್ತೆಯಾಗಿರುವ ಆತಂಕಕಾರಿ ಘಟನೆ ಬೆಳಗಾವಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಆಸ್ಪತ್ರೆಯ ಔಷಧಾಲಯದಲ್ಲಿ ರೋಗಿಗಳಿಗೆ ವಿತರಿಸಲು ಇರಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅವಧಿ ಮೀರಿದ ಔಷಧಗಳು ಹಾಗೂ ನಾಯಿ ಕಡಿತಕ್ಕೆ ನೀಡುವ ಆಂಟಿ-ರೇಬೀಸ್ ಲಸಿಕೆಗಳು ಪತ್ತೆಯಾಗಿವೆ.
ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕರ್ನಾಟಕ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ ಬಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಆಸ್ಪತ್ರೆಯ ಫಾರ್ಮಸಿಯಲ್ಲಿನ ಔಷಧಗಳ ದಾಸ್ತಾನು ಹಾಗೂ ಸ್ಟಾಕ್ ರಿಜಿಸ್ಟರ್ಗಳನ್ನು ಪರಿಶೀಲಿಸಿದಾಗ ಅವಧಿ ಮುಗಿದಿರುವ ಔಷಧ ಮತ್ತು ಲಸಿಕೆಗಳು ಪತ್ತೆಯಾಗಿವೆ.
ವಿಶೇಷವಾಗಿ ರೇಬೀಸ್ನಂತಹ ಗಂಭೀರ ಕಾಯಿಲೆ ತಡೆಗಟ್ಟಲು ಬಳಸುವ ಆಂಟಿ-ರೇಬೀಸ್ ಲಸಿಕೆಗಳೇ ಅವಧಿ ಮೀರಿರುವುದು ಉಪ ಲೋಕಾಯುಕ್ತರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು. ಔಷಧಗಳ ಅವಧಿ ಪರಿಶೀಲಿಸದೆ ಅವುಗಳನ್ನು ದಾಸ್ತಾನಿನಲ್ಲಿ ಇಟ್ಟಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅವಧಿ ಮೀರಿದ ಲಸಿಕೆಗಳು ಇಷ್ಟೊಂದು ಪ್ರಮಾಣದಲ್ಲಿ ದಾಸ್ತಾನಿನಲ್ಲಿ ಉಳಿಯಲು ಕಾರಣವೇನು ಎಂಬುದರ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿ ಬಿ. ವೀರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಿರ್ಲಕ್ಷ್ಯಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ನಿರ್ದೇಶನ ನೀಡಿದ್ದಾರೆ.
ಔಷಧ ಮತ್ತು ಲಸಿಕೆಗಳ ಅವಧಿಯನ್ನು ನಿಯಮಿತವಾಗಿ ಪರಿಶೀಲಿಸುವ ವ್ಯವಸ್ಥೆ ಇರಬೇಕು. ಅವಧಿ ಮುಗಿದ ಔಷಧಗಳನ್ನು ರೋಗಿಗಳಿಗೆ ವಿತರಿಸದಂತೆ ಹಾಗೂ ಬಳಕೆಯಾಗದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗೆ ಬಡವರು ಮತ್ತು ಮಧ್ಯಮ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿಯೇ ಅವಧಿ ಮೀರಿದ ಔಷಧ ಹಾಗೂ ಲಸಿಕೆಗಳು ಪತ್ತೆಯಾಗಿರುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಗಂಭೀರ ಕಳವಳ ಮೂಡಿಸಿದೆ. ಔಷಧಗಳ ದಾಸ್ತಾನು ಮತ್ತು ವಿತರಣಾ ವ್ಯವಸ್ಥೆಯಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಗತ್ಯವಿದೆ ಎಂಬುದನ್ನು ಈ ಘಟನೆ ಮತ್ತೆ ಮುನ್ನೆಲೆಗೆ ತಂದಿದೆ.
ಅವಧಿ ಮೀರಿದ ಲಸಿಕೆಗಳನ್ನು ರೋಗಿಗಳಿಗೆ ನೀಡಲಾಗಿದೆ ಎಂಬುದರ ಕುರಿತು ವರದಿಯಲ್ಲಿ ಉಲ್ಲೇಖವಿದ್ದರೂ, ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ ಅಥವಾ ಎಷ್ಟು ರೋಗಿಗಳಿಗೆ ನೀಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಅಧಿಕಾರಿಗಳ ಸಮಗ್ರ ವರದಿಯಿಂದ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
*ಮಕ್ಕಳ ಮೇಲಿನ ದೌರ್ಜನ್ಯ ತಡೆ ಎಲ್ಲರ ಕರ್ತವ್ಯ: ಜಿಲ್ಲಾ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಕರೆ
ಬಳ್ಳಾರಿ : ಮಕ್ಕಳ ಮೇಲಾಗುವ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟುವುದು ಪ್ರತಿಯೊಬ್ಬರ ಕರ್ತವ್ಯ. ಇಂತಹ ದೌರ್ಜನ್ಯಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮಕ್ಕಳಿಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿವಳಿಕೆ ನೀಡುವುದು ಅತ್ಯಗತ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಸಿದ್ದಲಿಂಗ ಪ್ರಭು ಅವರು ಹೇಳಿದರು.
ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಳ್ಳಾರಿ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಸುರಕ್ಷಿತ ಬಾಲ್ಯ ಅಭಿಯಾನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ರೋಗ ಬಂದು ಗುಣಪಡಿಸುವುದಕ್ಕಿಂತ ಮುನ್ನೆಚ್ಚರಿಕೆ ವಹಿಸುವುದೇ ಲೇಸು’ ಎಂಬAತೆ, ಮಕ್ಕಳು ಸ್ವತಃ ಜಾಗೃತರಾಗಿರಬೇಕು. ವಿಶೇಷವಾಗಿ ಹೆಣ್ಣುಮಕ್ಕಳು ತಮ್ಮ ಸುರಕ್ಷತೆಯ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಯಾವುದೇ ತೊಂದರೆ ಅಥವಾ ಸಮಸ್ಯೆಗಳು ಎದುರಾದಾಗ ಸಂಬAಧಪಟ್ಟ ಇಲಾಖೆಗಳನ್ನು ಮತ್ತು ಅಧಿಕಾರಿಗಳನ್ನು ಸಂಪರ್ಕಿಸಿ ಹೇಗೆ ಕಾನೂನು ನೆರವು ಹಾಗೂ ಪರಿಹಾರ ಪಡೆಯಬೇಕು ಎಂಬುದರ ಕುರಿತು ಅರಿವು ಹೊಂದಬೇಕು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಮಾತನಾಡಿ, ಸರಿಯಾದ ವಯಸ್ಸಿನಲ್ಲಿ ಶಿಕ್ಷಣ ಮತ್ತು ವೃತ್ತಿಜೀವನವನ್ನು ರೂಪಿಸಿಕೊಳ್ಳದೆ, ಸಣ್ಣ ವಯಸ್ಸಿನಲ್ಲಿಯೇ ಮದುವೆ ಅಥವಾ “ಸಂಸಾರದ ಜವಾಬ್ದಾರಿಗಳಿಗೆ ಸಿಲುಕಿದರೆ ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತವೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ಚೆನ್ನಾಗಿ ಊಟ ಮಾಡಿ ಆರೋಗ್ಯವಂತರಾಗಬೇಕು, ಆಹಾರವನ್ನು ಯಾವುದೇ ಕಾರಣಕ್ಕೂ ಪೋಲು ಮಾಡಬಾರದು. ಶರೀರ ಮತ್ತು ಮನಸ್ಸಿಗೆ ಶಕ್ತಿ ಇದ್ದಾಗ ಮಾತ್ರ ಶ್ರದ್ಧೆಯಿಂದ ಓದಲು ಮತ್ತು ಕಲಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ ದೊಡ್ಡ ದೊಡ್ಡ ಹುದ್ದೆಗಳನ್ನುಅಲಂಕರಿಸಬೇಕೆಂಬ ಕನಸು ಕಂಡರೆ ಸಾಲದು, ಅದಕ್ಕಾಗಿ ನಿರಂತರ ಪರಿಶ್ರಮ, ಏಕಾಗ್ರತೆ ಹಾಗೂ ವಿದ್ಯಾಭ್ಯಾಸ ಅತ್ಯಗತ್ಯ ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ವಿದ್ಯಾರ್ಥಿಗಳು ತಮ್ಮ ವಯಸ್ಸಿಗೆ ತಕ್ಕಂತೆ ಶಿಕ್ಷಣ ಮತ್ತು ಭವಿಷ್ಯದ ವೃತ್ತಿಜೀವನದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ವಿದ್ಯಾರ್ಥಿ ಜೀವನದಲ್ಲಿ ಓದು-ಬರಹಕ್ಕೆ ಪ್ರಮುಖ ಆದ್ಯತೆ ಇರಬೇಕು. ಶಿಕ್ಷಣ ಮುಗಿದ ನಂತರ ಸೂಕ್ತ ಕೆಲಸ, ಉದ್ಯೋಗ ಹಾಗೂ ಸ್ವಾವಲಂಬಿ ಜೀವನ ರೂಪಿಸಿಕೊಳ್ಳುವ ಬಗ್ಗೆ ಆಲೋಚಿಸಬೇಕು ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಹಾಗೂ ವಕೀಲರಾದ ತ್ರಿವೇಣಿ ಪತ್ತಾರ್ ಅವರು ಮಾತನಾಡಿ, ವರ್ಷದೊಳಗಿನ ಪ್ರತಿಯೊಬ್ಬರೂ ಮಕ್ಕಳೇ ಆಗಿದ್ದು, ಅವರಿಗೆ ಸಂವಿಧಾನಬದ್ಧವಾಗಿ ಪ್ರಮುಖ ಹಕ್ಕುಗಳನ್ನು ನೀಡಲಾಗಿದೆ. ಪ್ರತಿಯೊಂದು ಮಗುವಿಗೂ ಗೌರವಯುತವಾಗಿ ಬದುಕುವ ಹಕ್ಕು, ಗುಣಮಟ್ಟದ ಶಿಕ್ಷಣ ಪಡೆಯುವ ಹಕ್ಕು, ರಕ್ಷಣೆ ಹಾಗೂ ಸುರಕ್ಷತೆಯ ಹಕ್ಕುಗಳಿವೆ. ಮಕ್ಕಳು ಯಾವುದೇ ಶೋಷಣೆ, ತೊಂದರೆ ಅಥವಾ ಹಿಂಸೆಗೆ ಒಳಗಾಗದೆ ಸುರಕ್ಷಿತ ವಾತಾವರಣದಲ್ಲಿ ಬೆಳೆಯುವುದು ಅವರ ಮೂಲಭೂತ ಹಕ್ಕಾಗಿದೆ ಎಂದು ತಿಳಿಸಿದರು.
ಮಕ್ಕಳು ತಮ್ಮ ಸಮಸ್ಯೆಗಳು ಅಥವಾ ಬೇಡಿಕೆಗಳನ್ನು ಪೋಷಕರು ಹಾಗೂ ಶಿಕ್ಷಕರ ಬಳಿ ನಿರ್ಭಯವಾಗಿ ಹೇಳಿಕೊಳ್ಳಬೇಕು. ಒಂದು ವೇಳೆ ಮನೆಯಲ್ಲಾಗಲಿ ಅಥವಾ ಶಾಲೆಯಲ್ಲಾಗಲಿ ಯಾರಿಂದಾದರೂ ತೊಂದರೆ ಎದುರಾದರೆ ಅಥವಾ ಕಿರುಕುಳ ಅನುಭವಿಸುವಂತಾದರೆ ಹಿಂಜರಿಯದೆ ತಕ್ಷಣವೇ ಉಚಿತ ಮಕ್ಕಳ ಸಹಾಯವಾಣಿ ಸಂಖ್ಯೆ ‘1098’ ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿ, ಅವರ ಹಕ್ಕುಗಳು, ಕಾನೂನು ರಕ್ಷಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾದ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಬೋಧಕ ವರ್ಗ ಸೇರಿದಂತೆ ಶಾಲಾ-ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮತ್ತು ಮಕ್ಕಳು ಭಾಗವಹಿಸಿದ್ದರು.

