ನವದೆಹಲಿ: ಡಿಜಿಟಲ್ ಬಂಧನ(digital arrest) ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಾರ್ವಜನಿಕ ಜಾಗೃತಿ ಅಭಿಯಾನಗಳು, ಸುದ್ದಿ ವರದಿಗಳು ಮತ್ತು ನ್ಯಾಯಾಲಯದ ಆದೇಶಗಳಿದ್ದರೂ, ಸುಶಿಕ್ಷಿತ ಜನರು ಹೇಗೆ “ಮೊಬೈಲ್ ಫೋನ್ ಮೂಲಕ ಬಂಧನಕ್ಕೆ” ಒಳಗಾಗುತ್ತಿದ್ದಾರೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಡಿಜಿಟಲ್ ಬಂಧನಗಳಿಗೆ ಸಂಬಂಧಿಸಿದ ಸ್ವಯಂ ಪ್ರೇರಿತ(suo motu) ಪ್ರಕರಣದ ವಿಚಾರಣೆ ವೇಳೆ, ಸಿಜೆಐ ಸೂರ್ಯ ಕಾಂತ್ ಅವರು “ಈ ಬಲಿಪಶುಗಳಿಗೆ ಏನಾಗಿದೆ? ಅವರು ಹೇಗೆ ಇಂತಹ ಬಲೆಗೆ ಬೀಳುತ್ತಿದ್ದಾರೆ? ಅವರಿಗೆ ಈ ಸಾಮಾನ್ಯ ವಿಷಯವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೇ? ಮೊಬೈಲ್ ಮೂಲಕ ಬಂಧನವಾಗುತ್ತದೆ ಎಂಬ ಭಯವೇಕೆ ಎಂದು ಮೌಖಿಕವಾಗಿ ಪ್ರಶ್ನಿಸಿದ್ದಾರೆ.
“ಮೊಬೈಲ್ ಅನ್ನು ಗೋಡೆಗೆ ಬಡಿದರೆ ಬಂಧನ ಮುಗಿಯುತ್ತದೆ! ಜನರಲ್ಲಿ ಏನೋ ದೋಷವಿದೆ. ಏನಿದು ಎಂದು ದೇವರಿಗೇ ಗೊತ್ತು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವ ನೀವು, ಮೊಬೈಲ್ ಮೂಲಕ ಬಂಧನವಾಗುತ್ತಿದ್ದೀರಿ ಎಂದು ನಂಬುತ್ತೀರಿ ಎಂದರೆ, ನೀವೆಂತಹ ವ್ಯಕ್ತಿ?” ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಹೇಳಿದ್ದಾರೆನ್ನಲಾಗಿದೆ.
ಈ ಪ್ರಕರಣದ ‘ಅಮಿಕಸ್ ಕ್ಯೂರಿ’ (ನ್ಯಾಯಾಲಯಕ್ಕೆ ನೆರವು ನೀಡುವ ವಕೀಲರು) ಎನ್.ಎಸ್. ನಾಪ್ಪಿನೈ ಅವರು, ಡಿಜಿಟಲ್ ಬಂಧನಗಳನ್ನು ತಡೆಯಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದರೂ, ಈ ಸಮಸ್ಯೆ ಇನ್ನೂ ನಿರಂತರವಾಗಿ ಮುಂದುವರಿಯುತ್ತಿದೆ ಎಂಬ ಮಾಹಿತಿ ತಮಗೆ ಪದೇ ಪದೇ ಬರುತ್ತಿದೆ ಎಂದು ತಿಳಿಸಿದ ನಂತರ ಈ ಪ್ರತಿಕ್ರಿಯೆಗಳು ಬಂದಿವೆ.
ಕಳೆದ ವಾರ ಇಂತಹ ಘಟನೆಯೊಂದರಲ್ಲಿ ಮಹಿಳೆಯೊಬ್ಬರು 2.5 ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
“ಜನರಲ್ಲಿ ಏನೋ ದೋಷವಿದೆ. ಏನಿದು ಎಂದು ದೇವರಿಗೇ ಗೊತ್ತು. ನೀವೇ ನಿಮ್ಮನ್ನು ಬಲಿಪಶು ಮಾಡಿಕೊಳ್ಳುತ್ತಿದ್ದೀರಿ,” ಎಂದು ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿದರು.
“ಸುಶಿಕ್ಷಿತ ಜನರು ಹೀಗೆ ಮೋಸ ಹೋಗುತ್ತಿರುವುದು ನಮಗೆ ಹತಾಶೆ ಉಂಟುಮಾಡಿದೆ.” “ಈ ವಯಸ್ಸಿನಲ್ಲಿ ನೀವು ಡಿಜಿಟಲ್ ಬಂಧನಕ್ಕೆ ಒಳಗಾದರೆ, ಮುಂದಿನ ಪೀಳಿಗೆಗೆ ನೀವು ಏನು ಕಲಿಸುತ್ತೀರಿ? ನ್ಯಾಯಾಲಯದ ಆದೇಶವಿದೆಯೇ ಎಂದು ಪರಿಶೀಲಿಸಲು ಜನರು ನ್ಯಾಯಾಲಯದ ವೆಬ್ಸೈಟ್ಗೆ ಹೋಗಿ ನೋಡಬಹುದಲ್ಲವೇ?” ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು.
‘ಬ್ಯಾಂಕುಗಳು ರಕ್ಷಣಾ ಕವಚವಾಗಿ ಕಾರ್ಯನಿರ್ವಹಿಸಬೇಕು’
ವಿಚಾರಣೆಯ ಸಂದರ್ಭದಲ್ಲಿ, ಡಿಜಿಟಲ್ ಬಂಧನ ವಂಚನೆಗೆ ಒಳಗಾದವರಿಗೆ ಪರಿಹಾರ ನೀಡುವ ವಿಷಯದಲ್ಲಿ ಬ್ಯಾಂಕುಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇಂತಹ ವಂಚನೆಗಳಿಗೆ ತುತ್ತಾಗುವ ಗ್ರಾಹಕರಿಗೆ ಬ್ಯಾಂಕುಗಳು “ರಕ್ಷಣಾ ಕವಚ”ದಂತೆ (protective umbrella) ಕಾರ್ಯನಿರ್ವಹಿಸಬೇಕು ಎಂದು ನ್ಯಾಯಾಲಯ ಒತ್ತಿಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನ ಅವರನ್ನೊಳಗೊಂಡ ಪೀಠವು, ನಿವೃತ್ತ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಅಸಾಮಾನ್ಯವಾಗಿ ದೊಡ್ಡ ಮೊತ್ತದ ಹಣವನ್ನು ಹಿಂಪಡೆದಾಗ, ಆ ನಷ್ಟವನ್ನು ತಡೆಯಲು ಏಕೆ ಸಮಯೋಚಿತ ಮಧ್ಯಪ್ರವೇಶ ನಡೆಯಲಿಲ್ಲ ಎಂದು ಪ್ರಶ್ನಿಸಿತು. ಡಿಜಿಟಲ್ ಬಂಧನ ವಂಚನೆ ಸಂಭವಿಸಿದಲ್ಲಿ, ಬ್ಯಾಂಕ್ಗಳು ಬಲಿಪಶುಗಳಿಗೆ ಪರಿಹಾರ ನೀಡಬೇಕು ಮತ್ತು ಸೂಕ್ತ ಎಚ್ಚರಿಕೆ ವಹಿಸಲು ವಿಫಲವಾದ ಕಾರಣ ಕಾನೂನು ಕ್ರಮ ಜರುಗಿಸಬೇಕು ಎಂಬ ನಿರ್ದೇಶನಗಳನ್ನು ಪರಿಗಣಿಸುತ್ತಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

