ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲೇ ರಾಜ್ಯದ ಜನತೆಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಹಬ್ಬದ ಹೊತ್ತಲ್ಲಿ ಜನರಿಗೆ ಉಡುಗೊರೆ ನೀಡುವ ಬದಲಾಗಿ ಬೆಲೆ ಏರಿಕೆಯ ಬರೆ ಎಳೆದಿದೆ. ರಾಜ್ಯದಲ್ಲಿ ನಂದಿನಿ ಹಾಲಿನ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ.
ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರತಿ ಲೀಟರ್ ನಂದಿನಿ ಹಾಲಿಗೆ ಬರೋಬ್ಬರಿ 8 ರೂ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಆ ಮೂಲಕ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ಜನರಿಗೆ ಸರ್ಕಾರ ದೊಡ್ಡ ಶಾಕ್ ನೀಡಿದೆ.
ಪ್ರತಿ ಲೀಟರ್ ಹಾಲಿನ ದರ 8 ರೂ. ಹೆಚ್ಚಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಪರಿಷ್ಕೃತ ದರ ನವೆಂಬರ್ 1 ರಿಂದಲೇ ಜಾರಿಯಾಗಲಿದೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಸಚಿವರು, ಹಾಲು ಒಕ್ಕೂಟಗಳು ಪ್ರತಿ ಲೀಟರ್ ಹಾಲಿಗೆ 10 ರೂ. ಏರಿಕೆ ಮಾಡುವಂತೆ ಒತ್ತಾಯ ಮಾಡಿದ್ದವು. ಸರ್ಕಾರ 8 ರೂ. ಏರಿಕೆ ಮಾಡಿದ್ದು, ಹೊಸ ದರ ನಂ.1 ರಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ತೀವ್ರ ಬರ ಇದೆ, 228 ತಾಲ್ಲೂಕುಗಳಲ್ಲಿ ಬರ ಘೋಷಣೆ ಆಗಿದೆ. ಕಬ್ಬಿನ ದರ ಸಾಲೋದಿಲ್ಲ ಅಂತನೂ ಹೋರಾಟ ನಡೀತಿದೆ. ಇದರ ಮಧ್ಯೆ ಹೈನುಗಾರಿಕೆ ಮಾಡ್ಕೊಂಡು ಹಲವು ರೈತರು ಬದುಕುತ್ತಿದ್ದಾರೆ. ಹಾಲು ಉತ್ಪಾದನೆ ಮಾಡಿ ಅದರ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ಕೃಷಿ ವಲಯದಲ್ಲಿ ನಿಶ್ಚಿತತೆ ಇಲ್ಲ, ಹಾಲು ಉತ್ಪಾದನೆಯ ಆದಾಯ ಸದ್ಯಕ್ಕೆ ಅವರಿಗೆ ಖಾತ್ರಿ ಎಂದು ಹೇಳಿದರು.
ಏರಿಕೆಯಾದ 8 ರೂಪಾಯಿಯಲ್ಲಿ 1 ರೂ. ಹಾಲು ಒಕ್ಕೂಟ ಅಥವಾ ಕೆ ಎಂ ಎಫ್ ಗೆ , 7 ರೂಪಾಯಿ ರೈತರಿಗೆ ಹೋಗಲಿದೆ. ಇದು ಸರ್ವಾನುಮತದಿಂದ ಕೈಗೊಂಡ ತೀರ್ಮಾನ ಆಗಿದೆ. ಇನ್ಮುಂದೆ ರೈತರಿಗೆ 35 ರೂ. ಬದಲು 42 ರೂ. ಲೀಟರ್ಗೆ ಸಿಗಲಿದೆ. ಇದರ ಜೊತೆಗೆ ಪ್ರೋತ್ಸಾಹ ಧನ 5 ರೂ. ಸಿಗ್ತಿದೆ. ಒಟ್ಟು 47 ರೂ. ಲೀಟರ್ ಹಾಲಿಗೆ ಇನ್ಮುಂದೆ ರೈತರಿಗೆ ಸಿಗಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಹಾಲಿನ ದರಕ್ಕೆ ಪೂರಕವಾಗಿ ಮೊಸರು, ಬೆಣ್ಣೆ, ತುಪ್ಪ ಸೇರಿ ವಿವಿಧ ಹಾಲಿನ ಉತ್ಪನ್ನಗಳ ದರಗಳು ಹೆಚ್ಚಾಗಲಿವೆ. ದೆಹಲಿಗಿಂತ 6 ರೂ., ಗುಜರಾತ್ ಗಿಂತ 3 ರೂ., ಮಹಾರಾಷ್ಟ್ರ ಕ್ಕಿಂತ 5 ರೂ., ರಾಜಸ್ಥಾನಕ್ಕಿಂತ 2 ರೂ, ತೆಲಂಗಾಣಕ್ಕಿಂತ 10 ರೂ. ಕಡಿಮೆ ಇದೆ. ಕೇರಳಕ್ಕಿಂತ 2 ರೂ. ಕಡಿಮೆ ದರ ನಮ್ಮಲ್ಲಿ ಇರಲಿದೆ. ದರ ಪರಿಷ್ಕರಣೆ ನಂತರವೂ ಅಕ್ಕಪಕ್ಕದ ರಾಜ್ಯಗಳಿಗಿಂತಲೂ ನಮ್ಮಲ್ಲಿ ಹಾಲಿನ ದರ ಕಡಿಮೆ ಇರಲಿದೆ ಎಂದು ಕೃಷ್ಣಬೈರೇಗೌಡ ಅವರು ತಿಳಿಸಿದರು.
ಇನ್ನು ಹಾಲಿನದರ ಹೆಚ್ಚಳ ಬೆನ್ನಲ್ಲೇ ಹೋಟೆಲ್ ಗಳಲ್ಲಿ ಟೀ, ಕಾಫಿ ದರ ಹೆಚ್ಚಿಸುವುದು ಅನಿವಾರ್ಯವಗಾಲಿದೆ. ಒಟ್ಟಾರೆ ಹಾಲಿನ ದರ ಏರಿಕೆ ಬೆನ್ನಲ್ಲೇ ಹೋಟೆಲ್ ನಲ್ಲಿ ಟೀ , ಕಾಫಿ ದರಗಳು ಗ್ರಾಹಕರ ಬಾಯಿ ಸುಡಲಿರುವುದಂತೂ ಸುಳ್ಳಲ್ಲ.

