HomeKarnatakaಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದ: ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನೇ ರದ್ದುಗೊಳಿಸಿದ ಸುಪ್ರೀಂ...

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದ: ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನೇ ರದ್ದುಗೊಳಿಸಿದ ಸುಪ್ರೀಂ ಕೋರ್ಟ್: 362 KAS ಅಧಿಕಾರಿಗಳ ಸ್ಥಿತಿ ಅತಂತ್ರ

ನವದೆಹಲಿ: 2011ನೇ ಸಾಲಿನ 362 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾಯ್ದೆಯನ್ನೇ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಈ ನೇಮಕಾತಿ ಪಟ್ಟಿಯನ್ನು ಊರ್ಜಿತಗೊಳಿಸಲು ರಾಜ್ಯ ಸರ್ಕಾರ 2022ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯನ್ನೇ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಇದರಿಂದಾಗಿ ಕರ್ತವ್ಯದಲ್ಲಿರುವ 362 ಕೆಎಎಸ್ ಅಧಿಕಾರಿಗಳ ನೌಕರಿಗೆ ಕುತ್ತು ಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ವಿನೋದ್ ಚಂದ್ರನ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಗುರುವಾರ ಈ ಮಹತ್ವದ ಆದೇಶವನ್ನು ಪ್ರಕಟಿಸಿದೆ. 2011ರ ಸಾಲಿನ ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕಾರಣದಿಂದ ಈ ಹಿಂದೆ ಹೈಕೋರ್ಟ್ ಆಯ್ಕೆ ಪಟ್ಟಿಯನ್ನು ರದ್ದುಪಡಿಸಿತ್ತು. ಆದರೆ ಈ ಆಯ್ಕೆ ಪಟ್ಟಿಯನ್ನು ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರವು 2022ರಲ್ಲಿ ವಿಶೇಷ ಕಾಯ್ದೆಯನ್ನು ಜಾರಿಗೆ ತಂದಿತ್ತು. ಸರ್ಕಾರದ ಈ ಕಾಯ್ದೆಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು.

ಹೈಕೋರ್ಟ್‌ನ ಈ ನಿರ್ಧಾರವನ್ನು ಪ್ರಶ್ನಿಸಿ ಮೂಲ ಅರ್ಜಿದಾರರಾದ ಶ್ರೀನಿವಾಸ ಟಿ. ಮತ್ತು ಇತರರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ಪೀಠವು, ಇಂದು ಸರ್ಕಾರದ ಕಾಯ್ದೆಯನ್ನು ಸಂಪೂರ್ಣವಾಗಿ ಅಸಿಂಧುಗೊಳಿಸಿ ರದ್ದುಪಡಿಸಿದೆ.

2011ರಲ್ಲಿ ಕೆಪಿಎಸ್‌ಸಿ ಮೂಲಕ ನಡೆದ ಈ ನೇಮಕಾತಿಯಲ್ಲಿ ಸಂದರ್ಶನ ಮತ್ತು ಅಂಕ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ಹಾಗೂ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು.

ಈ ವಿವಾದದ ನಡುವೆಯೂ ನೇಮಕಗೊಂಡು, ಪ್ರಸ್ತುತ ವಿವಿಧ ಇಲಾಖೆಗಳಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ 362 ಅಧಿಕಾರಿಗಳಿಗೆ ಈಗ ಅತಂತ್ರ ಸ್ಥಿತಿ ಎದುರಾಗಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದಾಗಿ ರಾಜ್ಯ ಸರ್ಕಾರಕ್ಕೆ ಭಾರಿ ಮುಖಭಂಗವಾಗಿದ್ದು, ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಲಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular