HomeKarnatakaದೆಹಲಿಯ ಸಿಜೆಪಿಗಳಿಗೆ ಕನ್ನಡಿಗರ ತೆರಿಗೆ ಹಣ ಹೋಗುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ದೆಹಲಿಯ ಸಿಜೆಪಿಗಳಿಗೆ ಕನ್ನಡಿಗರ ತೆರಿಗೆ ಹಣ ಹೋಗುತ್ತಿದೆ: ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ

ಬೆಂಗಳೂರು: ರಾಷ್ಟ್ರವನ್ನು ಅಭದ್ರಗೊಳಿಸಲು ನಡೆಯುತ್ತಿರುವ ಸಂಚುಗಳಿಗೆ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರವು ಫಂಡಿಂಗ್ ಮಾಡುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ವಿಜಯನಗರದಲ್ಲಿರುವ ಬಂಟರ ಸಂಘದಲ್ಲಿ ಕೆಪಿಎಸ್ಸಿ ಅಭ್ಯರ್ಥಿಗಳು, ಉದ್ಯೋಗ ವಂಚಿತರು, ಕೆಪಿಎಸ್ಸಿಯಿಂದ ಅನ್ಯಾಯಕ್ಕೆ ತುತ್ತಾದವರು ಹಾಗೂ ವಿದ್ಯಾರ್ಥಿ ಯುವ ಜನರೊಂದಿಗೆ ಮುಕ್ತ ಸಂವಾದ ನಡೆಸುವ ಮುನ್ನ ಕೇಂದ್ರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಹೋರಾಟಗಳಿಗೆ ಕಾಂಗ್ರೆಸ್ ನಿಂದ ನೆರವು ಸಿಗುತ್ತಿದೆ ಎಂಬುದನ್ನು ಸ್ವತಃ ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರೇ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಗುರುವಾರ ಖರ್ಗೆ ನೀಡಿರುವ ಹೇಳಿಕೆಯೇ ಇದಕ್ಕೆ ಸಾಕ್ಷಿ. ಅವರು ಹೇಳಿರುವಂತೆ ಕಾಂಗ್ರೆಸ್ ಮತ್ತು ಸಿಜೆಪಿ ಎರಡೂ ಒಂದೇ ಎಂದು ಹೇಳಿದ್ದಾರೆ. ಸಿಜೆಪಿ ಅವರು ಏನು ಬೇಕಾದರೂ ಗಲಾಟೆ ಮಾಡಿದರೂ ನಾವು ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎನ್ನುವ ಮೂಲಕ ನೆರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಅವರಿಗೊಂದು ಕಾನೂನು, ಬೇರೆಯವರಿಗೊಂದು ಕಾನೂನು ಇದೆಯೇ? ಎಂದು ಕುಮಾರಸ್ವಾಮಿ ಅವರು ದೂರಿದರು.

ಜವಾಬ್ದಾರಿ ಸ್ಥಾನದಲ್ಲಿರುವ ಗೃಹ ಸಚಿವರು ಇಂತಹ ಹೇಳಿಕೆ ನೀಡಿರುವುದು ಅಘಾತಕಾರಿ. ರಾಷ್ಟ್ರದಲ್ಲಿ ಎಂತಹ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬುದು ಗೊತ್ತಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಪ್ರಿಯಾಂಕ್ ಖರ್ಗೆ ಕೊಟ್ಟಿರುವ ಹೇಳಿಕೆ ಗಂಭೀರವಾದುದು. ಇವರು ಸರಕಾರದ ಹಣವನ್ನು ಅದರಲ್ಲಿಯೂ ಕನ್ನಡಿಗರ ತೆರಿಗೆ ಹಣವನ್ನು ದೆಹಲಿಯ ಗಲಭೆಕೋರರಿಗೆ ರವಾನೆ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಕರ್ನಾಟಕದಲ್ಲಿ ಪ್ರತಿಪಕ್ಷಗಳ ಕಾರ್ಯಕರ್ತರ ಮೇಲೆ ಈ ಕಾಂಗ್ರೆಸ್ ಸರಕಾರ ದಬ್ಬಾಳಿಕೆ ನಡೆಸುತ್ತಿದೆ. ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದರೆ ಅವರ ಮೇಲೆ ಕೇಸು ದಾಖಲು ಮಾಡಲಾಗುತ್ತಿದೆ. ಇಂತಹ ಸರಕಾರ ರಾಷ್ಟ್ರದಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಶಕ್ತಿಗಳಿಗೆ ಫಂಡಿಂಗ್ ಮಾಡುತ್ತಿದೆ ಹಾಗೂ ಅವರ ವಿರುದ್ಧ ಯಾವ ಕ್ರಮವನ್ನು ಕೈಗೊಳ್ಳುವುದಿಲ್ಲ. ಅವರು ಹಾಗೂ ಕಾಂಗ್ರೆಸ್ಸಿನವರು ಇಬ್ಬರೂ ಒಂದೇ ಎನ್ನುವ ಮೂಲಕ ರಾಷ್ಟ್ರ ವಿರೋಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಅಪ್ಪಾ.. ಪ್ರಿಯಾಂಕ್ ಖರ್ಗೆ ಇಲ್ಲಿದೆ ನೋಡಿ ನಿಮ್ಮ ಹೇಳಿಕೆ. ಇಂಥ ಹೇಳಿಕೆಯನ್ನು ಯಾವ ಆಧಾರದ ಮೇಲೆ ಕೊಟ್ಟಿದ್ದೀರಿ. ಕರ್ನಾಟಕದಲ್ಲಿ ಹಣ ಬಿಟ್ಟಿ ಬಿದ್ದಿದೆಯೇ? ಎಂದ ಕೇಂದ್ರ ಸಚಿವರು, ಗೃಹ ಸಚಿವರ ಹೇಳಿಕೆಯನ್ನು ಸುದ್ದಿಗಾರರಿಗೆ ಕೇಳಿಸಿದರು.

ಸಿಜೆಪಿ ಚಟುವಟಿಕೆಗಳಿಗೆ ಹಣ ಎಲ್ಲಿಂದ ಬರುತ್ತಿದೆ? ರಾಹುಲ್ ಗಾಂಧಿ ನೇತೃತ್ವ ವಹಿಸಿರುವ ಹೋರಾಟಗಳಿಗೆ ದುಡ್ಡು ಯಾರು ಕೊಡುತ್ತಿದ್ದಾರೆ? ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಅಧ್ಯಕ್ಷರ ಪುತ್ರ ಹಾಗೂ ಕರ್ನಾಟಕದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಇದಕ್ಕೆ ಸ್ಪಷ್ಟನೆ ಕೊಡಬೇಕು. ರಾಜ್ಯದ ಜನರ ಹಣವನ್ನು ರಾಷ್ಟ್ರ ವಿರೋಧಿ ಕೃತ್ಯಗಳನ್ನು ನಡೆಸುವವರಿಗೆ ಕೊಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಇಲ್ಲಿ ನೋಡಿದರೆ ನಮ್ಮ ಮುಖ್ಯಮಂತ್ರಿಗಳು ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ ಎಂದು ಪದೇಪದೇ ಕೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಮತ್ತೊಂದು ಕಡೆ ರಾಜ್ಯದ ಹಣ ದುರುದ್ದೇಶಗಳಿಗೆ ಪೋಲಾಗುತ್ತಿದೆ. ಮುಖ್ಯಮಂತ್ರಿ ಹೇಳುವಂತೆ ಎಲ್ಲವನ್ನು ಕಾಲವೇ ನಿರ್ಣಯ ಮಾಡುತ್ತದೆ. ಖಂಡಿತವಾಗಿಯೂ ಕಾಲವೇ ಎಲ್ಲವನ್ನೂ ನಿರ್ಣಯ ಮಾಡಿ ಇವರ ಎಲ್ಲಾ ಒಳಸಂಚುಗಳು ಹಾಗೂ ರಾಷ್ಟ್ರ ವಿರೋಧಿ ಕೃತ್ಯಗಳು ಬಯಲಾಗಲಿವೆ ಎಂದು ಸಚಿವ ಕುಮಾರಸ್ವಾಮಿ ಅವರು ಕಟುವಾದ ಎಚ್ಚರಿಕೆ ನೀಡಿದರು.

ಅಗತ್ಯಬಿದ್ರೆ ಕುಮಾರಸ್ವಾಮಿಯನ್ನು ವಿಚಾರಣೆಗೆ ಕಲಿಸುತ್ತೇವೆ ಎಂಬ ಪ್ರಿಯಾಂಕ ಖರ್ಗೆ ಹೇಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಚಿವ ಕುಮಾರಸ್ವಾಮಿ; ಅವರ ಬಗ್ಗೆಯೂ ಕಾಲವೇ ನಿರ್ಣಯ ಮಾಡುತ್ತದೆ. ಅವರ ದುರಹಂಕಾರಕ್ಕೆ ತಕ್ಕ ಪಾಠ ಕಲಿಸುವ ದಿನ ದೂರವಿಲ್ಲ ಎಂದು ಹೇಳಿದರು.

ಸಿದ್ದಾರ್ಥ ಟ್ರಸ್ಟ್ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಗೆ ಪ್ರಿಯಾಂಕ್ ಖರ್ಗೆ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಯಾಕೆ ಹೋಗಿದ್ದರು? ಇದಕ್ಕೆ ಪ್ರಿಯಾಂಕ್ ಖರ್ಗೆ ಉತ್ತರ ನೀಡುತ್ತಾರಾ ಎಂದು ಸಚಿವರು ಪ್ರಶ್ನಿಸಿದರು.

ರಾಜ್ಯದ ಗೃಹ ಸಚಿವರ ನಡವಳಿಕೆಗಳು ಒಳ್ಳೆಯದಲ್ಲ. ಅವರು ಆಕ್ರಮಣಶೀಲ ನಡವಳಿಕೆ ಬಿಡಬೇಕು. ಯಾರ ಮೇಲೆ ಬೇಕಾದರೂ ತನಿಖೆಗೆ ಆದೇಶ ಮಾಡುತ್ತೇನೆ ಎಂದರೆ ಬೀದಿಯಲ್ಲಿ ಹೋಗುವವರ ಮೇಲೆಲ್ಲಾ ತನಿಖೆಗೆ ಆದೇಶ ಮಾಡಲು ಆಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.

ಕೇಂದ್ರದಲ್ಲಿ ತಮಗೆ ಯಾವುದೇ ಕಿಮ್ಮತ್ತು ಇಲ್ಲ ಎಂಬ ಅವರ ಟೀಕೆಗೆ ತಿರುಗೇಟು ನೀಡಿದ ಅವರು; ಕನಸಿನಲ್ಲಿ ಯಾರಾದರೂ ಬಂದು ಇವರಿಗೆ ಹೇಳಿದ್ದರಾ ಎಂದು ಲೇವಡಿ ಮಾಡಿದರು. ಕೇಂದ್ರ ಸಚಿವನಾಗಿ ದೆಹಲಿಯಲ್ಲಿ ತಾನು ಯಾವ ರೀತಿ ಕೆಲಸ ಮಾಡಿದ್ದೇನೆ ಎಂದು ಇವರಿಗೆ ಹೇಳಬೇಕಾಗಿಲ್ಲ ಎಂದ ಕುಮಾರಸ್ವಾಮಿ ಅವರು; ಕೇವಲ ₹200 ಕೋಟಿ ಲಾಭದಲ್ಲಿದ್ದ ಬಿಎಚ್ಇಎಲ್ (BHEL) ಕಾರ್ಖಾನೆಯನ್ನು ₹1500 ಕೋಟಿಗೂ ಹೆಚ್ಚಿನ ಲಾಭ ಗಳಿಸುವಂತೆ ಮಾಡಲಾಗಿದೆ ಎಂದು ವಿವರಿಸಿದರು.

ಅದೇ ರೀತಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (SAIL) ಇವತ್ತು ₹3,500 ಕೋಟಿ ಲಾಭ ಗಳಿಸುವಲ್ಲಿ ಯಶಸ್ವಿಯಾಗಿದೆ ಹಾಗೂ ಮುಂದಿನ ವರ್ಷಕ್ಕೆ ಕನಿಷ್ಠ ₹10,000 ಕೋಟಿ ಲಾಭದ ಗುರಿ ಮುಟ್ಟುವಂತೆ ಟಾಸ್ಕ್ ನೀಡಲಾಗಿದೆ ಎಂದು ತಮ್ಮ ಇಲಾಖೆಯ ಸಾಧನೆಯನ್ನು ಬಿಚ್ಚಿಟ್ಟರು ಕೇಂದ್ರ ಸಚಿವರು.

ನಲವತ್ತು ಪರ್ಸೆಂಟ್, ಪೇಸಿಎಂ (PayCM) ಎಂದು ಪೋಸ್ಟರ್ ಅಂಟಿಸಿಕೊಂಡು ಬಂದವರು ಕಳೆದ ಮೂರು ವರ್ಷಗಳಲ್ಲಿ ಅಥವಾ ಈ ಮೂರು ತಿಂಗಳಲ್ಲಿ ಹೊಸ ಮುಖ್ಯಮಂತ್ರಿ ಬಂದು ಏನು ಮಾಡಿದ್ದಾರೆ? ಬಿಡದಿ ರೈತರನ್ನು ಒಕ್ಕಲೆಬ್ಬಿಸುವುದು ಮತ್ತು ನೈಸ್ (NICE) ಕಂಪನಿ ಲೂಟಿ ಮಾಡುವುದೇ ನಿಮ್ಮ ಟಾಸ್ಕ್ ಆಗಿದೆಯೇ? ನನ್ನ ಕೆಲಸದ ಬಗ್ಗೆ ನನ್ನ ದಾಖಲೆಗಳು ಮಾತನಾಡುತ್ತವೆ, ಈ ಎರಡು ಇಲಾಖೆಯನ್ನು ಯಾವ ರೀತಿ ನಡೆಸಿದ್ದೇನೆ ಎಂಬುದಕ್ಕೆ ನಿಮ್ಮಿಂದ ನಾನು ಸರ್ಟಿಫಿಕೇಟ್ ಪಡೆಯಬೇಕಾಗಿಲ್ಲ ಎಂದು ಅವರು ಹರಿಹಾಯ್ದರು.

ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಮಂತ್ರಿಗಳಿದ್ದಾಗ ಕೆಪಿಎಸ್ಸಿಯಿಂದ 24 ಎಂಜಿನಿಯರುಗಳ ಆಯ್ಕೆ ಪ್ರಕ್ರಿಯೆಯಲ್ಲಿ 10 ಅಭ್ಯರ್ಥಿಗಳು ಅಕ್ರಮದ ಮುಖಾಂತರ ಆಯ್ಕೆಯಾಗಿದ್ದರು. ಈ ನೇಮಕಾತಿಯನ್ನು ರದ್ದುಗೊಳಿಸುವಂತೆ ಕೆಪಿಎಸ್ಸಿಯಲ್ಲಿ ತನಿಖೆಯಾಗಿ ವರದಿ ನೀಡಿದರೂ ಅದನ್ನು ಏಕಾಏಕಿ ತಿರಸ್ಕಾರ ಮಾಡಿ ಅಕ್ರಮ ಎಸಗಿದ್ದ 24 ಜನರಿಗೆ ನೇಮಕಾತಿ ಆದೇಶ ಯಾಕೆ ನೀಡಿದಿರಿ? ಎಂದು ಕುಮಾರಸ್ವಾಮಿ ಅವರು ಕೇಳಿದರು.

ಪಶುವೈದ್ಯಕೀಯ ಅಭ್ಯರ್ಥಿಗಳ ಆಯ್ಕೆಯಲ್ಲಿಯೂ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಹೈಕೋರ್ಟ್ ತನಿಖೆಗೆ ಆದೇಶಿಸಿದರೆ ಅಲ್ಲಿ ಹೋಗಿ ಯಾಕಾಗಿ ತಡೆಯಾಜ್ಞೆ ತರುತ್ತೀರಿ? ಎಂದು ಪ್ರಶ್ನಿಸಿದ ಅವರು; ನೀವು ಪಾರದರ್ಶಕವಾಗಿದ್ದರೆ ನ್ಯಾಯಯುತ ತನಿಖೆಗೆ ಅವಕಾಶ ನೀಡಬೇಕಿತ್ತು, ‘ಕಳ್ಳನ ಮನಸ್ಸು ಹುಳ್ಳುಳ್ಳಿಗೆ’ ಎನ್ನುವಂತೆ ಖರ್ಗೆಯವರೇ ನಿಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ ಎಂದು ಅವರು ವ್ಯಕ್ತಪಡಿಸಿದರು.

ಯಾರೋ ಪಾಪದ ಹುಡುಗರನ್ನು, ಪೋಸ್ಟ್ ಮಾಡುತ್ತಾರೆ ಎಂದು ಕರೆತಂದು ಅವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದೀರಿ. ತನಿಖಾ ಅಧಿಕಾರಿಗಳು ಅನಗತ್ಯವಾಗಿ ಸಮಸ್ಯೆ ತಂದಿಟ್ಟುಕೊಂಡರೆ ಮುಂದೆ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇನೆಯೇ ಹೊರತು, ತಾನು ಯಾರಿಗೂ ಧಮ್ಕಿ ಹಾಕಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು. ಇಂತಹ ಮನಃಸ್ಥಿತಿ, ಧಮ್ಕಿ ಹಾಕುವ ಶೈಲಿ ನಿಮ್ಮದು ಎಂದು ಸಚಿವರು ಕಿಡಿಕಾರಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular