ಬೆಂಗಳೂರು : ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ತೆರಿಗೆ ನಿರ್ಧರಣೆ ಪಟ್ಟಿ ನಮೂನೆ-11ಎ ಅಥವಾ ನಮೂನೆ-11ಬಿ ದಾಖಲೆಗಳನ್ನು ಅಭಿಯಾನದ ಮಾದರಿಯಲ್ಲಿ ವಿತರಣೆ ಮಾಡುವ ಬಗ್ಗೆ ಸರ್ಕಾರದ ಮಹತ್ವದ ಆದೇಶ ಹೊರಡಿಸಿದೆ.
ಇ-ಸ್ವತ್ತು ಅಭಿಯಾನದಡಿ ಆಸ್ತಿಗಳಿಗೆ ನಮೂನೆ-11ಎ ಮತ್ತು 11ಬಿ ದಾಖಲೆಗಳನ್ನು ವಿತರಿಸಲು ಕ್ರಮ ಕೈಗೊಳ್ಳುವಂತೆ ಪಂಚಾಯತ್ ರಾಜ್ ಆಯುಕ್ತಾಲಯವು ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ನಿರ್ದೇಶನ ನೀಡಿದೆ.
ಏನಿದೆ ಆದೇಶದಲ್ಲಿ..?
ಗ್ರಾಮವಾರು ಆಸ್ತಿಗಳ ಪಟ್ಟಿ ಸಿದ್ಧಪಡಿಸಿ, ಅಭಿಯಾನದ ದಿನಾಂಕ ಮತ್ತು ವೇಳಾಪಟ್ಟಿ ಪ್ರಕಟಿಸಿ, ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಸಾರ್ವಜನಿಕರಿಗೆ ನೆರವು ನೀಡುವಂತೆ ಸೂಚಿಸಲಾಗಿದೆ.ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ (1)ರ ಸುತ್ತೋಲೆಯಲ್ಲಿ ಅಗತ್ಯ ದಾಖಲೆಗಳನ್ನು ಹೊಂದಿರುವ ಆಸ್ತಿಗಳಿಗೆ ದಾಖಲೆ ಪತ್ರಗಳನ್ನು ವಿತರಿಸಲು ಇ-ಸ್ವತ್ತು ಅಭಿಯಾನವನ್ನು ಆರಂಭಿಸಲು ತೀರ್ಮಾನಿಸಿ ಆದೇಶ ಹೊರಡಿಸಲಾಗಿರುತ್ತದೆ.
ಉಲ್ಲೇಖ-2ರಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2026ರ ನಿಯಮಗಳನ್ನು ಅಧಿಸೂಚಿಸಲಾಗಿರುತ್ತದೆ.
ಆದುದರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿಲ್ಲದ ಮೇಲ್ಕಂಡ ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಇ-ಸ್ವತ್ತು ಅಭಿಯಾನಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದೆ.
1. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ವಾರು / ಕಂದಾಯ ಗ್ರಾಮವಾರು / ಗ್ರಾಮವಾರು ಆಸ್ತಿಗಳ ಪಟ್ಟಿಯನ್ನು ಈ ಕೆಳಕಂಡಂತೆ ಸಿದ್ಧಪಡಿಸುವುದು.
· ಇ-ಸ್ವತ್ತು ವಿತರಣೆಯಾಗಿರುವ ಆಸ್ತಿ.
· ಪಂಚತಂತ್ರದಲ್ಲಿದ್ದು ಇ-ಸ್ವತ್ತು ವಿತರಣೆಯಾಗದೆ ಇರುವ ಆಸ್ತಿ.
· ಈ ಪೈಕಿ ಗ್ರಾಮಠಾಣ ವ್ಯಾಪ್ತಿಯಲ್ಲಿ ನೋಂದಾಯಿತ ದಾಖಲೆಯಿರುವ ಆಸ್ತಿ, ನೋಂದಾಯಿತ ದಾಖಲೆಯಿಲ್ಲದ ಆಸ್ತಿ, ಸಕ್ಷಮ ಪ್ರಾಧಿಕಾರಗಳಿಂದ ನಿಯಮಾನುಸಾರ ವಿತರಣೆ ಮಾಡಲಾಗಿರುವ ಹಕ್ಕುಪತ್ರಗಳ ಆಸ್ತಿ, ಆಶ್ರಯ ನಿವೇಶನ ಹಕ್ಕುಪತ್ರ, ಕೃಷಿಭೂಮಿಯಲ್ಲಿ ಆಶ್ರಯ ನಿವೇಶನ ಯೋಜನೆಯಡಿ ನಿರ್ಮಿಸಿರುವ ಕಟ್ಟಡಗಳು, ಬಡಾವಣೆ/ಅಪಾರ್ಟ್ಮೆಂಟ್ ಆಸ್ತಿಗಳಿಗೆ ಸಂಬಂಧಿಸಿದ ನಮೂನೆ-11ಎಗೆ ಸಂಬಂಧಿಸಿದ ಇತರೆ ವರ್ಗೀಕರಣದ ಆಸ್ತಿಗಳ ಪಟ್ಟಿಗಳನ್ನು ಹಾಗೂ ನಮೂನೆ-11ಬಿಗೆ ಸಂಬಂಧಿಸಿದ ಆಸ್ತಿಗಳ ಪಟ್ಟಿಗಳನ್ನು ಸಿದ್ಧಪಡಿಸುವುದು.
2. ಗ್ರಾಮವಾರು ಆಸ್ತಿಗಳ ಸಂಖ್ಯೆಗೆ ಅನುಸಾರವಾಗಿ ಹಾಗೂ ಸಿಬ್ಬಂದಿಗಳ ಲಭ್ಯತೆ ಆಧಾರದ ಮೇಲೆ ಅಭಿಯಾನ ನಡೆಸಬೇಕಾದ ಸ್ಥಳ, ದಿನಾಂಕ ಹಾಗೂ ಸಮಯದೊಂದಿಗೆ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಪ್ರಚುರಪಡಿಸುವುದು.
3. ಕರಪತ್ರಗಳನ್ನು ಸಿದ್ಧಪಡಿಸುವುದು. ಕಡ್ಡಾಯವಾಗಿ ಅಭಿಯಾನದ ವೇಳಾಪಟ್ಟಿಯನ್ನು ಮತ್ತು ನಮೂನೆಗಳನ್ನು ಪಡೆಯುವ ವಿಧಾನ ಹಾಗೂ ಸಲ್ಲಿಸಬೇಕಾಗಿರುವ ಅವಶ್ಯಕ ದಾಖಲೆಗಳ ಪಟ್ಟಿಯನ್ನು ಪ್ರಕಟಿಸುವುದು.
4. ಕರಪತ್ರಗಳನ್ನು ಮನೆ-ಮನೆಗೆ ಹಂಚುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಗ್ರಂಥಾಲಯ/ಮಾಹಿತಿ ಕೇಂದ್ರಗಳಲ್ಲಿ ಪ್ರದರ್ಶಿಸುವುದು.
5. ಎಲ್ಲಾ ಕಂದಾಯ ಗ್ರಾಮಗಳು, ಉಪಗ್ರಾಮಗಳು ಮತ್ತು ಜನವಸತಿ ಪ್ರದೇಶಗಳಲ್ಲಿ ಅಭಿಯಾನದ ಬಗ್ಗೆ ಹಾಗೂ ನಮೂನೆಗಳನ್ನು ಪಡೆಯುವ ವಿಧಾನ ಮತ್ತು ಸಲ್ಲಿಸಬೇಕಾಗಿರುವ ಅವಶ್ಯಕ ದಾಖಲೆಗಳ ಬಗ್ಗೆ ಟಾಂಟಾಂ ಮೂಲಕ ಮತ್ತು ಆಡಿಯೋ ಜಿಂಗಲ್ಸ್ ಮೂಲಕ ಪ್ರಚಾರ ಮಾಡುವುದು.
6. ಅಭಿಯಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಂಚತಂತ್ರ 2.0 ತಂತ್ರಾಂಶದಲ್ಲಿ ಅಪ್ಲೋಡ್ ಮಾಡುವುದು ಹಾಗೂ IEC ಚಟುವಟಿಕೆಗಳನ್ನು ಮಾಡತಕ್ಕದ್ದು.
7. ಅಭಿಯಾನಕ್ಕಾಗಿ ನಿಗದಿಪಡಿಸಿದ ಸ್ಥಳಗಳಲ್ಲಿ ಅಗತ್ಯವಿರುವ ಗಣಕಯಂತ್ರ/ಲ್ಯಾಪ್ಟಾಪ್, ಪ್ರಿಂಟರ್, ಅಂತರ್ಜಾಲ ವ್ಯವಸ್ಥೆ ಇರುವುದನ್ನು ಖಾತರಿಪಡಿಸಿಕೊಳ್ಳತಕ್ಕದ್ದು.
8. ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ಸೇರಿದಂತೆ ಎಲ್ಲಾ ಸರ್ಕಾರಿ ನೌಕರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ನಿಗದಿಪಡಿಸಿರುವ ವೇಳಾಪಟ್ಟಿಯಂತೆ ಹಾಜರಿದ್ದು, ಸಮರ್ಪಕವಾಗಿ ಕಾರ್ಯನಿರ್ವಹಿಸತಕ್ಕದ್ದು.
9. ಅಭಿಯಾನದ ವೇಳೆಯಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಎರಡನೇ ತಿದ್ದುಪಡಿ) ಅಧಿನಿಯಮ, 2026ರ ಪ್ರಕರಣ 63ಎರನ್ವಯ ಸಾರ್ವಜನಿಕ ಹಾಗೂ ಖಾಸಗಿ ರಸ್ತೆಗಳನ್ನು ಗುರುತಿಸಿ ಪಟ್ಟಿ ಮಾಡುವುದು.
10. ನಿಗದಿಪಡಿಸಿದ ದಿನಾಂಕಗಳಂದು ಅರ್ಜಿಗಳೊಂದಿಗೆ ನಿಯಮಗಳಲ್ಲಿ ನಿಗದಿಪಡಿಸಿರುವ ದಾಖಲೆಗಳನ್ನು ಪಡೆದು, ಸಿಟಿಜನ್ ಲಾಗಿನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಈಗಾಗಲೇ ಪಂಚತಂತ್ರ 2.0 ತಂತ್ರಾಂಶದಲ್ಲಿರುವ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದಲ್ಲಿ ಸೃಜಿಸಲಾಗಿರುವ ಕರಡು ನಮೂನೆಗಳನ್ನು ಆಯ್ಕೆ ಮಾಡಿ ಮಾಹಿತಿ ಹಾಗೂ ದಾಖಲೆಗಳನ್ನು ಇಂಧೀಕರಿಸಲು ಸಾರ್ವಜನಿಕರಿಗೆ ಸಹಕಾರ ನೀಡುವುದು.
· ಪಂಚತಂತ್ರ ತಂತ್ರಾಂಶದಲ್ಲಿ ದಾಖಲಾಗದ ನಮೂನೆ-11ಎ ಆಸ್ತಿಗಳಿಗೆ ಸಂಬಂಧಿಸಿದಂತೆ ನಿಯಮಗಳ ವರ್ಗೀಕರಣಗಳನ್ನು ಹೊಸ ಆಸ್ತಿ ಎಂದು ಆಯ್ಕೆ ಮಾಡಿ ಅರ್ಜಿ ಸಲ್ಲಿಸುವುದು.
· ಪಂಚತಂತ್ರ 2.0 ತಂತ್ರಾಂಶದಲ್ಲಿ ದಾಖಲಾಗದ ನಮೂನೆ-11ಬಿ ಆಸ್ತಿಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಅಧಿನಿಯಮ, 2025ರ ದಿನಾಂಕ 07.04.2025ಕ್ಕೂ ಮುಂಚಿತವಾಗಿ ಸೃಜನೆಯಾಗಿರುವ ಕಟ್ಟಡ ಮತ್ತು ನಿವೇಶನಗಳನ್ನು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಕೈಬಿಡಲಾಗಿದೆ ಎಂದು ಬಾಧಿತರಾದ ವ್ಯಕ್ತಿಗಳು/ಸಂಸ್ಥೆಗಳು ಇ-ಸ್ವತ್ತು ತಂತ್ರಾಂಶದ ಮೂಲಕ ಹೊಸ ಆಸ್ತಿ ಆಯ್ಕೆ ಮಾಡಿ ಅರ್ಜಿ ಸಲ್ಲಿಸುವುದು ಎಂದು ಸರ್ಕಾರ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

