ಬೆಂಗಳೂರು: ಲೈಂಗಿಕ ದೌರ್ಜನ್ಯದಿಂದ ಗರ್ಭ ಧರಿಸಿದ ಅಪ್ರಾಪ್ತೆಯರಿಗೆ ನೆರವು ನೀಡಲು ಎಸ್ಒಪಿ ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಲೈಂಗಿಕ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆಯರು ಧರಿಸಿದ ಗರ್ಭವನ್ನು ಆರಂಭದಲ್ಲೇ ಗುರುತಿಸಿ ಅವರಿಗೆ ಸಕಾಲದಲ್ಲಿ ವೈದ್ಯಕೀಯ ನೆರವು, ಕೌನ್ಸೆಲಿಂಗ್ ಮತ್ತು ಕಾನೂನು ಸೇವೆ ಒದಗಿಸುವ ಉದ್ದೇಶದಿಂದ ಪ್ರಮಾಣಿತ ಕಾರ್ಯವಿಧಾನ(ಎಸ್ಒಪಿ) ಪ್ರಕಟಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೈಕೋರ್ಟ್ ಗೆ ಸರ್ಕಾರದಿಂದ ಮಾಹಿತಿ ನೀಡಲಾಗಿದೆ.
ಲೈಂಗಿಕ ದೌರ್ಜನ್ಯದಿಂದ ತನ್ನ ಅಪ್ರಾಪ್ತ ಮಗಳು ಧರಿಸಿರುವ ಅನಪೇಕ್ಷಿತ ಗರ್ಭ ತೆಗೆಸಲು ಅನುಮತಿ ನೀಡುವಂತೆ ಕೋರಿ ಸಂತ್ರಸ್ತ ಬಾಲಕಿಯ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿದೆ. ಈ ವೇಳೆ ಸರ್ಕಾರಿ ವಕೀಲರು ಹಾಜರಾಗಿ ನ್ಯಾಯಾಲಯದ ನಿರ್ದೇಶನದಂತೆ ಎಸ್ಒಪಿ ಪ್ರಕಟಿಸಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮಾರ್ಗಸೂಚಿಗಳಲ್ಲಿ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರಗಳ ಜವಾಬ್ದಾರಿ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದು, ಎಸ್ಒಪಿ ಸೂಚನೆಯ ಪ್ರತಿ ಸಲ್ಲಿಸಿದ್ದಾರೆ.
ಸರ್ಕಾರಿ ವಕೀಲರ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ಇಂತಹ ಪ್ರಕರಣಗಳಲ್ಲಿ ಬಾಲಕಿಯರ ಆರೋಗ್ಯ ಮತ್ತು ಹಕ್ಕುಗಳನ್ನು ರಕ್ಷಣೆ ಮಾಡುವ ಜೊತೆಗೆ ಸಕಾಲದಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ವ್ಯವಸ್ಥೆ ಅಗತ್ಯವೆಂದು ಅಭಿಪ್ರಾಯಪಟ್ಟು ಅರ್ಜಿಯನ್ನು ಇತ್ಯರ್ಥಪಡಿಸಿದೆ.
`ಸುಸ್ಥಿರ ಅಭಿವೃದ್ಧಿಗಾಗಿ ವಿರಳ ಖನಿಜಗಳು’: ನ. 4ರಿಂದ ಬೆಂಗಳೂರಿನಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವ್ಯಾಪ್ತಿಯಲ್ಲಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ (ಕೆ.ಎಸ್.ಟಿ.ಎ) ವತಿಯಿಂದ “ಸುಸ್ಥಿರ ಅಭಿವೃದ್ಧಿಗಾಗಿ ವಿರಳ ಖನಿಜ ಮೌಲ್ಯ ಸರಪಳಿಯ ಭದ್ರತೆ” (Securing the Critical Mineral Value Chain for Sustainable Development) ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಈ ಸಮ್ಮೇಳನವು ನವೆಂಬರ್ 04 ಮತ್ತು 05 ರಂದು ಬೆಂಗಳೂರಿನ ವಿದ್ಯಾರಣ್ಯಪುರ ಬಳಿಯ ಪ್ರೊ. ಯು.ಆರ್. ರಾವ್ ವಿಜ್ಞಾನ ಭವನದಲ್ಲಿರುವ ಅಕಾಡೆಮಿಯ ಕಚೇರಿಯಲ್ಲಿ ನಡೆಯಲಿದ್ದು, ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಖ್ಯಾತ ವಿಜ್ಞಾನಿಗಳು ಈ ಸಮ್ಮೇಳನದಲ್ಲಿ ತಾಂತ್ರಿಕ ಉಪನ್ಯಾಸಗಳನ್ನು ನೀಡಲಿದ್ದಾರೆ. ವಿಜ್ಞಾನಿಗಳು, ಖನಿಜಾನ್ವೇಷಣೆ, ಗಣಿಗಾರಿಕೆ ಹಾಗೂ ಲೋಹಶಾಸ್ತ್ರ ಸಂಸ್ಥೆಗಳ ಪ್ರತಿನಿಧಿಗಳು, ಸಂಶೋಧನಾ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಕೈಗಾರಿಕೋದ್ಯಮಿಗಳು, ನವೋದ್ಯಮಗಳ (ಸ್ಟಾರ್ಟಪ್ಸ್) ಪ್ರತಿನಿಧಿಗಳು, ಖರೀದಿದಾರರು ಮತ್ತು ರಫ್ತುದಾರರು ಭಾಗವಹಿಸಬಹುದಾಗಿದೆ.
ಸಂಶೋಧನಾ ಪ್ರಬಂಧ ಮಂಡನೆಗೆ ಅವಕಾಶ: ಯುವ ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ತಮ್ಮ ಸಂಶೋಧನಾ ಪ್ರಬಂಧಗಳನ್ನು (ಪೋಸ್ಟರ್ ರಿಸರ್ಚ್ ಪೆಪರ್) ಮಂಡಿಸಲು ಅವಕಾಶ ಕಲ್ಪಿಸಲಾಗಿದ್ದು, ಆಯ್ಕೆಯಾಗುವ ಅತ್ಯುತ್ತಮ ಪ್ರಬಂಧಕ್ಕೆ ನಗದು ಬಹುಮಾನ ನೀಡಲಾಗುವುದು.
ನೋಂದಣಿಗಾಗಿ ಅಕ್ಟೋಬರ್ 30 ಕೊನೆಯ ದಿನಾಂಕವಾಗಿದ್ದು, ಆಸಕ್ತರು https://forms.gle/wgyoGKPOZVK8RJhCA ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9620767819, 9743084194 ಗೆ ಸಂಪರ್ಕಿಸಬಹುದು ಅಥವಾ ವೆಬ್ಸೈಟ್ https://kstacademy.in ನ್ನು ವೀಕ್ಷಿಸಬಹುದಾಗಿದೆ.
ಆಸಕ್ತ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ಸಂಶೋಧಕರು ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯುವಂತೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

