HomeBusinessರೇಷನ್ ಕಾರ್ಡ್ e-KYC ಮಾಡಲು ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ರಾಜ್ಯಾದ್ಯಂತ ಇಂದಿನಿಂದ ‘ಅನ್ನಸೇವೆ’ ಆ್ಯಪ್ ಲಭ್ಯ

ರೇಷನ್ ಕಾರ್ಡ್ e-KYC ಮಾಡಲು ಇನ್ಮುಂದೆ ಕಚೇರಿಗೆ ಅಲೆಯಬೇಕಿಲ್ಲ; ರಾಜ್ಯಾದ್ಯಂತ ಇಂದಿನಿಂದ ‘ಅನ್ನಸೇವೆ’ ಆ್ಯಪ್ ಲಭ್ಯ

ಬೆಂಗಳೂರು: ಅನ್ನಭಾಗ್ಯ ಸೇರಿದಂತೆ ಸಾರ್ವಜನಿಕ ವಿತರಣಾ ವ್ಯವಸ್ಥೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಮಹತ್ವದ ಸುದ್ದಿ. ರೇಷನ್ ಕಾರ್ಡ್‌ನ e-KYC ಪ್ರಕ್ರಿಯೆಯನ್ನು ಸುಲಭಗೊಳಿಸಲು ರೂಪಿಸಿರುವ ಅನ್ನಸೇವೆ ಮೊಬೈಲ್ ಆ್ಯಪ್ ಇಂದಿನಿಂದ (ಅಕ್ಟೋಬರ್ 14) ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಲಭ್ಯವಾಗಲಿದೆ. ಈ ಮೂಲಕ ಫಲಾನುಭವಿಗಳು ಮನೆಯಲ್ಲೇ ಕುಳಿತು ತಮ್ಮ e-KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ಮತ್ತು ಇ-ಆಡಳಿತ ಇಲಾಖೆಯ ಸಹಯೋಗದಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ರಿಜ್ವಾನ್ ಅರ್ಷದ್ ಅವರು ಅಕ್ಟೋಬರ್ 1ರಂದು ಆ್ಯಪ್ ಬಿಡುಗಡೆ ಮಾಡಿದ್ದರು. ಮೊದಲ ಹಂತದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಉತ್ತರ ಕನ್ನಡ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಅವಕಾಶ ನೀಡಲಾಗಿತ್ತು. ಇದೀಗ ಉಳಿದ ಜಿಲ್ಲೆಗಳ ಫಲಾನುಭವಿಗಳಿಗೂ ಆ್ಯಪ್ ಸೌಲಭ್ಯ ದೊರೆಯಲಿದೆ ಎಂದು ಇಲಾಖೆ ತಿಳಿಸಿದೆ.

ಮನೆಯಲ್ಲೇ ಕುಳಿತು e-KYC ಮಾಡುವುದು ಹೇಗೆ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಲಾನುಭವಿಗಳು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಅನ್ನಸೇವೆ’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, UIDAIಯ ಫೇಸ್ ಅಥೆಂಟಿಕೇಶನ್ (Face Authentication) ಸೌಲಭ್ಯ ಬಳಸುವ ಮೂಲಕ ಸ್ವತಃ e-KYC ಪೂರ್ಣಗೊಳಿಸಬಹುದು.

ಈ ಮೊದಲು e-KYC ಮಾಡಿಸಲು ಹಲವರು ಕೆಲಸದ ಸ್ಥಳದಿಂದ ಸ್ವಗ್ರಾಮಗಳಿಗೆ ತೆರಳಬೇಕಾಗಿತ್ತು. ಮತ್ತೊಂದೆಡೆ, ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯೂ ಇತ್ತು. ವಿಶೇಷವಾಗಿ ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ವಲಸೆ ಹೋಗಿರುವ ಕಾರ್ಮಿಕರಿಗೆ ಇದರಿಂದ ತೊಂದರೆಯಾಗುತ್ತಿತ್ತು. ಹೊಸ ಆ್ಯಪ್ ಈ ಸಮಸ್ಯೆಗಳನ್ನು ಕಡಿಮೆ ಮಾಡಿ, ಪ್ರಕ್ರಿಯೆಯನ್ನು ಸರಳಗೊಳಿಸುವ ನಿರೀಕ್ಷೆಯಿದೆ.

1.60 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಂದ ಆ್ಯಪ್ ಬಳಕೆ

ಅನ್ನಸೇವೆ ಆ್ಯಪ್‌ಗೆ ಆರಂಭಿಕ ಹಂತದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಕ್ಟೋಬರ್ 1ರಿಂದ 12ರವರೆಗೆ ಎಂಟು ಜಿಲ್ಲೆಗಳಲ್ಲಿ ಒಟ್ಟು 1,60,267 ಫಲಾನುಭವಿಗಳು ಆ್ಯಪ್ ಬಳಸಿ e-KYC ಪೂರ್ಣಗೊಳಿಸಿದ್ದಾರೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಒಟ್ಟು 2,67,64,276 ಫಲಾನುಭವಿಗಳು e-KYC ಮಾಡಿಸಬೇಕಿದ್ದು, ಅಕ್ಟೋಬರ್ 12ರ ವೇಳೆಗೆ 2,06,76,278 ಮಂದಿ ಈ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಉಳಿದ ಫಲಾನುಭವಿಗಳು ನಿಗದಿತ ಅವಧಿಯೊಳಗೆ e-KYC ಮಾಡಿಸಬೇಕಿದೆ.

e-KYCಗೆ ಅಕ್ಟೋಬರ್ 20 ಕೊನೆಯ ದಿನ

ಆಹಾರ ಇಲಾಖೆಯ ಮಾಹಿತಿ ಪ್ರಕಾರ, ಒಂದು ವರ್ಷದ ಹಿಂದೆ e-KYC ಮಾಡಿಸಿಕೊಂಡ ಫಲಾನುಭವಿಗಳೂ ಮತ್ತೊಮ್ಮೆ ಕಡ್ಡಾಯವಾಗಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. e-KYC ಮಾಡಿಸಲು ಅಕ್ಟೋಬರ್ 20 ಕೊನೆಯ ದಿನವಾಗಿದೆ.

ಹೀಗಾಗಿ, ಇನ್ನೂ e-KYC ಮಾಡಿಸದಿರುವ ಫಲಾನುಭವಿಗಳು ‘ಅನ್ನಸೇವೆ’ ಆ್ಯಪ್‌ನ ಸೌಲಭ್ಯ ಬಳಸಿಕೊಂಡು ಸಾಧ್ಯವಾದಷ್ಟು ಬೇಗ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸಚಿವ ರಿಜ್ವಾನ್ ಅರ್ಷದ್ ಮನವಿ ಮಾಡಿದ್ದಾರೆ.

📄 Official Documents / Supporting Documents

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular