HomeKarnatakaಕೊಂಕಣ ರೈಲ್ವೇ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ 9000 ಕೋಟಿ ರೂ. ಮಂಜೂರು: ವಿ.ಸೋಮಣ್ಣ

ಕೊಂಕಣ ರೈಲ್ವೇ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ 9000 ಕೋಟಿ ರೂ. ಮಂಜೂರು: ವಿ.ಸೋಮಣ್ಣ

ಶಿವಮೊಗ್ಗ: ಕೊಂಕಣ ರೈಲ್ವೆಯ ಮುಂದುವರೆದ ಅಭಿವೃದ್ಧಿ ಕಾಮಗಾರಿಗಳಿಗೆ 9000 ಕೋಟಿ ರೂ.ಗಳನ್ನು ಮಂಜೂರು ಮಾಡುವುದರ ಜೊತೆಗೆ ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ರಾಜ್ಯದ ರೈಲ್ವೇ ಕ್ಷೇತ್ರದ ವಿಕಾಸಕ್ಕಾಗಿ ಕೇಂದ್ರ ಸರ್ಕಾರವು ಐತಿಹಾಸಿಕ ನಿರ್ಣಯ ಕೈಗೊಂಡಿದೆ ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಹೇಳಿದರು.

ಅವರು ಇಂದು ನಗರದ ಪ್ರವಾಸಿ ಮಂದಿರದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿ ಮಾತನಾಡುತ್ತಿದ್ದರು.

ಈ ಭಾಗದ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಮೂಲಸೌಕರ್ಯ ಯೋಜನೆಗಳು ಹಾಗೂ ಪ್ರಯಾಣಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳ ಪ್ರಗತಿಯನ್ನು ಪರಿಶೀಲಿಸಿರುವುದಾಗಿ ತಿಳಿಸಿದ ಅವರು, ರಾಜ್ಯದಲ್ಲಿ 52000ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದವರು ನುಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂದಿನ 25-30ವರ್ಷಗಳ ಅವಧಿಯ ದೂರದೃಷ್ಟಿಯನ್ನಿಟ್ಟುಕೊಂಡು ರೈಲ್ವೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದ ಅವರು, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲ್ವೇ ಯೋಜನೆಯ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ, ಅಂದಿನ ಟೆಂಡರ್‌ ರದ್ದುಗೊಳಿಸಿ, ಮುಂದಿನ ಎರಡು ತಿಂಗಳೊಳಗಾಗಿ ಹೊಸ ಟೆಂಡರ್‌ ಆಹ್ವಾನಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಹೆಚ್ಚಿಸುವುದಾಗಿ ತಿಳಿಸಿದ ಅವರು, ಶಿವಮೊಗ್ಗ–ಬೀರೂರು ರೈಲ್ವೆ ಮಾರ್ಗದ ಡಬ್ಲಿಂಗ್‌ಗೆ ಈಗಾಗಲೇ ಸರ್ವೆ ಕಾರ್ಯ ನಡೆಯುತ್ತಿದೆ. ಶೃಂಗೇರಿ–ಶಿವಮೊಗ್ಗ ಹೊಸ ರೈಲು ಮಾರ್ಗದ ಪ್ರಸ್ತಾವನೆಯೂ ಪ್ರಗತಿಯಲ್ಲಿದೆ ಎಂದರು.

ಕೇಂದ್ರ ಸರ್ಕಾರವು ಹೊಸ ರೈಲ್ವೆ ಯೋಜನೆಗಳಿಗೆ, ವಿಸ್ತೃತ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದೆ. ವಿಶೇಷವಾಗಿ ಮಂಗಳೂರು, ಉಡುಪಿ, ಶಿವಮೊಗ್ಗ ಭಾಗಗಳ ರೈಲ್ವೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳನ್ನು ಪರಿಶೀಲಿಸಲಾಗಿದೆ. 2018ರಲ್ಲಿ ಅನುಮೋದಿತಗೊಂಡಿದ್ದ ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೇ ಮಾರ್ಗಕ್ಕೆ 2025ರಲ್ಲಿಯೇ ಅಂತಿಮ ಹಂತದ ಸರ್ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದರು.

178ಕಿ.ಮೀ. ದೂರದ ತಾಳಗುಪ್ಪ-ಸಿದ್ಧಾಪುರ-ಸಿರ್ಸಿ-ಮುಂಡಗೋಡ-ಹುಬ್ಬಳ್ಳಿ ಮಾರ್ಗದ ಸರ್ವೇ ಕಾರ್ಯವನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು. 1511 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುದ ತಾಳಗುಪ್ಪ-ಹೊನ್ನಾವರ ಹೊಸ ಮಾರ್ಗಕ್ಕೆ 2025ರಲ್ಲಿಯೇ ಅನುಮೋದನೆ ನೀಡಲಾಗಿದೆ. ಭದ್ರಾವತಿ-ಚಿಕ್ಕಬಾಸೂರು-ಚನ್ನಗಿರಿಯ 173ಕಿ.ಮೀ. ವ್ಯಾಪ್ತಿಯ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿ ಸರ್ವೇ ಕಾರ್ಯ ಆರಂಭಗೊಳ್ಳಲಿದೆ. ಇದರೊಂದಿಗೆ ಚಿಕ್ಕಮಗಳೂರು-ಶೃಂಗೇರಿ, ಹುಬ್ಬಳ್ಳಿ-ಅಂಕೋಲ, ಶಿವಮೊಗ್ಗ-ತೀರ್ಥಹಳ್ಳಿ-ಶೃಂಗೇರಿ ಮಾರ್ಗದ ಸಮೀಕ್ಷೆಗೂ ಸೂಚಿಸಲಾಗಿದೆ ಎಂದರು.

100 ಕೋ. ರೂ.ಗಳ ಅಂದಾಜು ವೆಚ್ಚದಲ್ಲಿ ತುಮಕೂರು ಮತ್ತು 50 ಕೋ. ರೂ.ಗಳ ಅಂದಾಜು ವೆಚ್ಚದಲ್ಲಿ ಶಿವಮೊಗ್ಗ ನಗರಗಳ ರೈಲ್ವೇ ನಿಲ್ದಾಣಗಳನ್ನು ಅತ್ಯಾಧುನಿಕ ನಿಲ್ದಾಣಗಳನ್ನಾಗಿ ಮಾರ್ಪಡಿಸಲು ಉದ್ದೇಶಿಸಲಾಗಿದೆ ಎಂದ ಅವರು, ಈಗಾಗಲೇ ಕಾಮಗಾರಿ ಪೂರ್ಣಗೊಂಡಿರುವ ಸಾಗರ ಮತ್ತು ತಾಳಗುಪ್ಪ ರೈಲ್ವೇ ನಿಲ್ದಾಣಗಳನ್ನು ಉದ್ಘಾಟಿಸಲಾಗುವುದು. ಭದ್ರಾವತಿ ರೈಲ್ವೇ ನಿಲ್ದಾಣವನ್ನೂ ಶಿವಮೊಗ್ಗ ರೈಲ್ವೇ ನಿಲ್ದಾಣದ ರೀತಿಯಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದರು.

ಕೋಟೆಗಂಗೂರು ಕೋಚಿಂಗ್‌ ಡಿಪೋವನ್ನು ಮುಂದಿನ ವರ್ಷಾರಂಭದಲ್ಲಿ ಲೋಕಾರ್ಪಣೆಗೊಳಿಸಲು ಕ್ರಮಕೈಗೊಳ್ಳಲಾಗಿದೆ. ಶಿವಮೊಗ್ಗ ಟರ್ಮಿನಲ್‌ ನಿರ್ಮಾಣಕ್ಕೆ 97ಕೋ ರೂ.ಗಳನ್ನು ಮಂಜೂರು ಮಾಡಲಾಗಿದೆ. ಅಲ್ಲದೇ ನಿರೀಕ್ಷೆಯಂತೆ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಸಾಕಷ್ಟು ಸಂಖ್ಯೆಯ ರೈಲ್ವೇ ಮೇಲ್ಸೇತುವೆಗಳು, ಕೆಳಸೇತುವೆಗಳನ್ನು ನಿರ್ಮಿಸಿ, ಅತ್ಯಲ್ಪ ಅವಧಿಯಲ್ಲಿ ಲೋಕಾರ್ಪಣೆಗೊಳಿಸಿ, ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗಿದೆ. ರೈಲ್ವೇ ಕ್ಷೇತ್ರದಲ್ಲಿ ಕೈಗೊಂಡ ಕ್ರಾಂತಿಕಾರಿ ಯೋಜನೆಗಳ ವ್ಯವಸ್ಥಿತ ಅನುಷ್ಟಾನದಿಂದಾಗಿ ರೈಲ್ವೇ ಅಫಘಾತದ ಪ್ರಮಾಣ ಶೇ0.01ಕ್ಕೆ ಬಂದು ನಿಂತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ, ರೈಲ್ವೇ ಪ್ರಾದೇಶಿಕ ವ್ಯವಸ್ಥಾಪಕ ಉದಿತ್‌ ಮಿತ್ತಲ್‌, ಎಸ್.ದತ್ತಾತ್ರಿ, ಎ.ಎಸ್.ನವೀನ್‌ ಮತ್ತಿತರರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular