ಯಾದಗಿರಿ: ದಟ್ಟಾರಣ್ಯ ಪ್ರದೇಶದಲ್ಲಿ ಜೋಗತಿಯೊಬ್ಬರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ.
ಮಹಿಳೆಯ ಶವದ ಕರಾಳ ರಹಸ್ಯವನ್ನು ಯಾದಗಿರಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಭಿಕ್ಷಾಟನೆ ನಡೆಸಿ ಜೀವನ ಸಾಗಿಸುತ್ತಿದ್ದ ಜೋಗತಿ ಮಹಿಳೆಯನ್ನು ಹತ್ಯೆಗೈದು, ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಕೊಲೆಗಾರ ಪ್ರಿಯಕರನನ್ನು ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾರ್ ಗ್ರಾಮದ ನಿವಾಸಿ ಶಾಂತಮ್ಮ (48) ಕೊಲೆಯಾದ ಜೋಗತಿ. ಹಲ್ಕಟ್ಟಾ ಗ್ರಾಮದ ನಿವಾಸಿ ಸುರೇಶ್ ಕೊಲೆ ಮಾಡಿದ ಆರೋಪಿ.
ಸೆಪ್ಟೆಂಬರ್ 24 ರಂದು ಯಾದಗಿರಿ ತಾಲೂಕಿನ ಬಾಚವಾರ್ ಗ್ರಾಮದ ಸುಮಾರು ಹತ್ತು ಸಾವಿರ ಎಕರೆ ವಿಸ್ತೀರ್ಣದ ದಟ್ಟ ಅರಣ್ಯ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಕಾವಲುಗಾರನಿಗೆ ಸುಟ್ಟ ಸ್ಥಿತಿಯಲ್ಲಿದ್ದ ಶವವೊಂದು ಕಣ್ಣಿಗೆ ಬಿದ್ದಿದೆ. ಆತ ತಕ್ಷಣವೇ ಗ್ರಾಮಸ್ಥರು ಹಾಗೂ ಯಾದಗಿರಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಯಾದಗಿರಿ ಎಸ್ಪಿ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ 45 ರಿಂದ 50 ವರ್ಷ ವಯಸ್ಸಿನ ಮಹಿಳೆಯ ಶವ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಶವದ ಗುರುತು ಪತ್ತೆ ಹಚ್ಚುವುದು ಅಸಾಧ್ಯವಾಗಿದ್ದರಿಂದ, ಪೊಲೀಸರು ಸ್ಥಳದಲ್ಲಿ ದೊರೆತ ಕೆಲವು ವಸ್ತುಗಳನ್ನು ವಶಕ್ಕೆ ಪಡೆದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು, ಪೋಸ್ಟ್ಮಾರ್ಟಮ್ ನಂತರ ಅರಣ್ಯದಲ್ಲೇ ಅಂತ್ಯಕ್ರಿಯೆ ನೆರವೇರಿಸಿದ್ದರು.
ಶವ ಯಾರದ್ದು ಎಂದು ಪತ್ತೆ ಹಚ್ಚಲು ಯಾದಗಿರಿ ಎಸ್ಪಿ ಪೃಥ್ವಿಕ್ ಶಂಕರ್ ಅವರು ಯಾದಗಿರಿ ಸರ್ಕಲ್ ಇನ್ಸ್ಪೆಕ್ಟರ್ ನಾನಾಗೌಡ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದರು. ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಪರಿಶೀಲಿಸಿದರೂ ಮಿಸ್ಸಿಂಗ್ ದೂರು ಸಿಗಲಿಲ್ಲ. ಆದರೆ ಗಡಿ ಭಾಗದ ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯಲ್ಲಿ ನಾಲ್ವಾರ್ ಗ್ರಾಮದ ಶಾಂತಮ್ಮ ಎಂಬಾಕೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಕೊಲೆಯಾದ ಸ್ಥಳದಲ್ಲಿ ಸಿಕ್ಕಿದ್ದ ಬಳೆಯನ್ನು ಪೊಲೀಸರು ಶಾಂತಮ್ಮಳ ಕುಟುಂಬಸ್ಥರಿಗೆ ತೋರಿಸಿದಾಗ, ಆಕೆಯ ಪುತ್ರ ದೇವಪ್ಪ ಇದು ನಮ್ಮ ತಾಯಿಯ ಬಳೆ ಎಂದು ಗುರುತಿಸಿದ್ದಾನೆ.
ಶಾಂತಮ್ಮಳ ಕಾಲ್ ಡಿಟೇಲ್ಸ್ ತನಿಖೆ ನಡೆಸಿದಾಗ, ಕೊನೆಯದಾಗಿ ಹಲ್ಕಟ್ಟಾ ಗ್ರಾಮದ ಸುರೇಶ್ ಎಂಬಾತ ಆಕೆಗೆ ಕರೆ ಮಾಡಿರುವುದು ಗೊತ್ತಾಗಿದೆ. ಘಟನೆ ನಡೆದ ದಿನದಿಂದ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ಬೆಂಗಳೂರಿನಲ್ಲಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದಾನೆ.
ಗಂಡನಿಂದ ದೂರವಾಗಿದ್ದ ಜೋಗತಿ ಶಾಂತಮ್ಮ ಭಿಕ್ಷಾಟನೆ ಮಾಡುತ್ತಾ ಜೀವನ ನಡೆಸುತ್ತಿದ್ದಳು. 5 ತಿಂಗಳ ಹಿಂದೆ ಆಕೆಗೆ ಸುರೇಶನ ಪರಿಚಯವಾಗಿ, ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಸುರೇಶನಿಗೆ ಶಾಂತಮ್ಮ ಬೇರೆಯವರಿಂದ 1 ಲಕ್ಷ ರೂಪಾಯಿ ಸಾಲ ಕೊಡಿಸಿದ್ದಳು. ನಾಲ್ಕು ತಿಂಗಳ ನಂತರ ಶಾಂತಮ್ಮ ಸಾಲದ ಹಣ ವಾಪಸ್ ನೀಡುವಂತೆ ಹಾಗೂ ತನ್ನನ್ನು ಮದುವೆಯಾಗುವಂತೆ ಸುರೇಶನಿಗೆ ಪೀಡಿಸಲಾರಂಭಿಸಿದ್ದಳು.
ಇದರಿಂದ ಕೆರಳಿದ ಸುರೇಶ್, ಸೆಪ್ಟೆಂಬರ್ 20 ರಂದು ಶಾಂತಮ್ಮಳನ್ನು ಬೈಕ್ನಲ್ಲಿ ಕರ್ನಾಟಕ-ತೆಲಂಗಾಣ ಗಡಿಯ ಜಲಾಲಪುರಕ್ಕೆ ಕರೆದೊಯ್ದು ಸರಾಯಿ ಕುಡಿಸಿದ್ದಾನೆ. ಬಳಿಕ ಆಕೆಯನ್ನು ಬಾಚವಾರ್ ಅರಣ್ಯಕ್ಕೆ ಕರೆತಂದು, ಪ್ರಜ್ಞೆ ತಪ್ಪಿ ಬಿದ್ದಾಗ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಬೈಕ್ನಿಂದ ಪೆಟ್ರೋಲ್ ಮತ್ತು ತಂದಿದ್ದ ಸರಾಯಿಯನ್ನು ಶವದ ಮೇಲೆ ಸುರಿದು ಬೆಂಕಿ ಹಚ್ಚಿ, ದೇಹ ಕರಕಲಾಗುವವರೆಗೂ ಅಲ್ಲೇ ನಿಂತು ವೀಕ್ಷಿಸಿದ್ದಾನೆ. ಕೃತ್ಯ ಎಸಗಿದ ಬಳಿಕ ಆತ ನೇರವಾಗಿ ಬೆಂಗಳೂರಿಗೆ ಪರಾರಿಯಾಗಿದ್ದ. ಸದ್ಯ ಆರೋಪಿ ಪ್ರಿಯಕರ ಸುರೇಶನನ್ನು ಯಾದಗಿರಿ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

