ಭಾರತದಲ್ಲಿ ರೈಲು ಪ್ರಯಾಣ ಎಂದರೆ ಮೊದಲು ಟಿಕೆಟ್ ಖರೀದಿಸುವುದು ಸಾಮಾನ್ಯ. ಆದರೆ ದೇಶದಲ್ಲೊಂದು ಅಪರೂಪದ ರೈಲು ಟಿಕೆಟ್ ಇಲ್ಲದೆ, ಯಾವುದೇ ಶುಲ್ಕ ಪಾವತಿಸದೆ ಪ್ರಯಾಣಿಸುವ ಅವಕಾಶ ನೀಡುತ್ತಿದೆ. ಪಂಜಾಬ್‌ನ ನಂಗಲ್‌ನಿಂದ ಹಿಮಾಚಲ ಪ್ರದೇಶದ ಭಕ್ರಾವರೆಗೆ ಸುಮಾರು 13 ಕಿ.ಮೀ. ಸಂಚರಿಸುವ ಈ ಐತಿಹಾಸಿಕ ರೈಲು 1948ರಿಂದಲೂ ಸೇವೆ ನೀಡುತ್ತಿದ್ದು, ಇಂದಿಗೂ ಸ್ಥಳೀಯರು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುತ್ತಿದೆ.
ಭಾರತದಲ್ಲಿ ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಸಲು ಟಿಕೆಟ್ ಖರೀದಿಸುವುದು ಕಡ್ಡಾಯ. ಆದರೆ ದೇಶದಲ್ಲಿ ಒಂದು ಐತಿಹಾಸಿಕ ರೈಲು ಸೇವೆ ಇದ್ದು, ಇಲ್ಲಿ ಪ್ರಯಾಣಿಕರು ಒಂದು ರೂಪಾಯಿಯನ್ನೂ ಪಾವತಿಸದೆ ಪ್ರಯಾಣಿಸಬಹುದು.
ಈ ವಿಶಿಷ್ಟ ರೈಲು ಪಂಜಾಬ್‌ನ ನಂಗಲ್‌ನಿಂದ ಹಿಮಾಚಲ ಪ್ರದೇಶದ ಭಕ್ರಾ ನಡುವೆ ಸಂಚರಿಸುತ್ತದೆ. ಸುಮಾರು 13 ಕಿ.ಮೀ. ದೂರವನ್ನು ಕ್ರಮಿಸುವ ಈ ರೈಲು ಪ್ರಯಾಣಕ್ಕೆ ಸುಮಾರು 40 ನಿಮಿಷಗಳು ಬೇಕಾಗುತ್ತದೆ. ಶೀವಾಲಿಕ್ ಬೆಟ್ಟಗಳು ಹಾಗೂ ಸಟ್ಲೆಜ್ ನದಿಯ ತಟದ ಸುಂದರ ದೃಶ್ಯಗಳ ನಡುವೆ ರೈಲು ಸಾಗುತ್ತದೆ. ಈ ಚಿಕ್ಕ ಮಾರ್ಗದಲ್ಲಿ 3 ಸುರಂಗಗಳು ಮತ್ತು 6 ಸಣ್ಣ ರೈಲು ನಿಲ್ದಾಣಗಳಿವೆ. ರೈಲು ಬೆಳಗ್ಗೆ ಮತ್ತು ಸಂಜೆ ಸಂಚರಿಸುತ್ತದೆ.
ಈ ರೈಲು ಸೇವೆಯ ಇತಿಹಾಸ ಸುಮಾರು 1948ರಷ್ಟು ಹಳೆಯದು. ಭಕ್ರಾ-ನಂಗಲ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಇದನ್ನು ಆರಂಭಿಸಲಾಗಿತ್ತು. ಆರಂಭದಲ್ಲಿ ಕಾರ್ಮಿಕರು, ಎಂಜಿನಿಯರ್‌ಗಳು, ಭಾರೀ ಯಂತ್ರೋಪಕರಣಗಳು ಮತ್ತು ನಿರ್ಮಾಣ ಸಾಮಗ್ರಿಗಳನ್ನು ಯೋಜನಾ ಸ್ಥಳಕ್ಕೆ ಸಾಗಿಸಲು ರೈಲನ್ನು ಬಳಸಲಾಗುತ್ತಿತ್ತು.
ಅಣೆಕಟ್ಟು ನಿರ್ಮಾಣ ಪೂರ್ಣಗೊಂಡ ನಂತರವೂ ರೈಲು ಸೇವೆ ಮುಂದುವರಿಯಿತು. ಕ್ರಮೇಣ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಇದು ಪ್ರಮುಖ ಸಾರಿಗೆ ವ್ಯವಸ್ಥೆಯಾಯಿತು. ಮತ್ತೊಂದು ವಿಶೇಷವೆಂದರೆ, ಈ ರೈಲನ್ನು ಭಾರತೀಯ ರೈಲ್ವೆ ನಿರ್ವಹಿಸುವುದಿಲ್ಲ. ಬದಲಾಗಿ ಭಕ್ರಾ ಬಿಯಾಸ್ ಮ್ಯಾನೇಜ್‌ಮೆಂಟ್ ಬೋರ್ಡ್ (BBMB) ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತದೆ.
ಪ್ರಯಾಣಿಕರಿಂದ ಯಾವುದೇ ಶುಲ್ಕ ಪಡೆಯದ ಕಾರಣ, ರೈಲು ಓಡಿಸುವ ವೆಚ್ಚವನ್ನು BBMBಯೇ ಭರಿಸುತ್ತದೆ. ಇದರಲ್ಲಿ ಡೀಸೆಲ್ ವೆಚ್ಚವೂ ಸೇರಿದೆ. ಹೀಗಾಗಿ ಈ ರೈಲು ವಾಣಿಜ್ಯ ಪ್ರಯಾಣಿಕರ ಸೇವೆಯಾಗಿ ಅಲ್ಲದೆ, ಈ ಪ್ರದೇಶದ ಐತಿಹಾಸಿಕ ಪರಂಪರೆಯ ಭಾಗವಾಗಿ ಮುಂದುವರಿದಿದೆ.
ಈ ರೈಲಿನ ಬೋಗಿಗಳಿಗೂ ಕುತೂಹಲಕಾರಿ ಇತಿಹಾಸವಿದೆ. ಮರದಿಂದ ನಿರ್ಮಿಸಲಾದ ಬೋಗಿಗಳನ್ನು 1923ರಲ್ಲಿ ಕರಾಚಿಯಲ್ಲಿ ತಯಾರಿಸಲಾಗಿತ್ತು ಎನ್ನಲಾಗಿದೆ. ಆಗ ಕರಾಚಿ ಅವಿಭಜಿತ ಭಾರತದ ಭಾಗವಾಗಿತ್ತು. ಆರಂಭದಲ್ಲಿ ಈ ರೈಲು ಕಲ್ಲಿದ್ದಲು ಆಧಾರಿತ ಆವಿಯ ಎಂಜಿನ್‌ನಿಂದ ಸಂಚರಿಸುತ್ತಿತ್ತು. ನಂತರ ಅದನ್ನು ಡೀಸೆಲ್ ಎಂಜಿನ್‌ನಿಂದ ಬದಲಾಯಿಸಲಾಯಿತು.
ಇಂದಿಗೂ ಈ ರೈಲು ತನ್ನ ಹಳೆಯ ಕಾಲದ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಮೂರು ಹಳೆಯ ಮಾದರಿಯ ಮರದ ಬೋಗಿಗಳು ಈ ಸೇವೆಯ ಭಾಗವಾಗಿವೆ. ರೈಲಿನ ವಿಶಿಷ್ಟ ನೋಟ ಮತ್ತು ಟಿಕೆಟ್ ಇಲ್ಲದೆ ಪ್ರಯಾಣಿಸುವ ಅವಕಾಶ ಪ್ರವಾಸಿಗರಲ್ಲೂ ವಿಶೇಷ ಕುತೂಹಲ ಮೂಡಿಸಿದೆ.
ಆದರೆ ಈ ರೈಲು ಸೇವೆಯನ್ನು ಮುಂದುವರಿಸುವುದು ಯಾವಾಗಲೂ ಸುಲಭವಾಗಿರಲಿಲ್ಲ. ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, 2011ರಲ್ಲಿ BBMB ಉಚಿತ ಪ್ರಯಾಣವನ್ನು ಸ್ಥಗಿತಗೊಳಿಸಿ ಟಿಕೆಟ್ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತಿಸಿತ್ತು. ಆದರೆ ನಂತರ ರೈಲನ್ನು ವಾಣಿಜ್ಯ ಆದಾಯದ ಮೂಲವನ್ನಾಗಿ ಮಾಡದಿರಲು ಅಧಿಕಾರಿಗಳು ನಿರ್ಧರಿಸಿದರು.
ಹೀಗಾಗಿ ಭಕ್ರಾ-ನಂಗಲ್ ಅಣೆಕಟ್ಟು ನಿರ್ಮಾಣದೊಂದಿಗೆ ಬೆಸೆದುಕೊಂಡಿರುವ ಐತಿಹಾಸಿಕ ಪರಂಪರೆಯ ಸಂಕೇತವಾಗಿ ಈ ಉಚಿತ ರೈಲು ಸೇವೆಯನ್ನು ಮುಂದುವರಿಸಲಾಯಿತು.
ಇಂದಿಗೂ ಸ್ಥಳೀಯ ಗ್ರಾಮಸ್ಥರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರು ಈ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಭಾರತದಲ್ಲಿ ಶುಲ್ಕವಿಲ್ಲದೆ, ಟಿಕೆಟ್ ಖರೀದಿಸುವ ಅಗತ್ಯವಿಲ್ಲದೆ ಪ್ರಯಾಣಿಸಬಹುದಾದ ಅಪರೂಪದ ರೈಲು ಸೇವೆ ಎಂಬ ಹೆಗ್ಗಳಿಕೆಯನ್ನು ಇದು ಉಳಿಸಿಕೊಂಡಿದೆ.

