ಬೆಂಗಳೂರು: ಬೆಂಗಳೂರಿನಲ್ಲಿ ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ಯುವಕನೊಬ್ಬ ತಿಂಗಳಿಗೆ ₹3 ಲಕ್ಷ ವೇತನ ಪಡೆಯುತ್ತಿದ್ದರೂ ಮದುವೆಗೆ ವಧು ಸಿಗುತ್ತಿಲ್ಲ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ‘ಅರೇಂಜ್ಡ್ ಮ್ಯಾರೇಜ್’ ವ್ಯವಸ್ಥೆಯ ಬಗ್ಗೆಯೂ ನೆಟ್ಟಿಗರು ಪರ-ವಿರೋಧದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಎಕ್ಸ್ ಬಳಕೆದಾರ @Ajinkya Revdikar ಅವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, ತಮ್ಮ ಸ್ನೇಹಿತ ಕಳೆದ ಎರಡು ವರ್ಷಗಳಿಂದ ಮದುವೆಗೆ ವಧುವನ್ನು ಹುಡುಕುತ್ತಿದ್ದರೂ ಹಲವು ಕಡೆಗಳಿಂದ ನಿರಾಕರಣೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಯುವಕನಿಗೆ ಉತ್ತಮ ಉದ್ಯೋಗ, ತಿಂಗಳಿಗೆ ₹3 ಲಕ್ಷ ಆದಾಯ, 5 ಅಡಿ 9 ಇಂಚು ಎತ್ತರ ಹಾಗೂ ಉತ್ತಮ ನೋಟವಿದೆ ಎಂದು ಅವರು ತಿಳಿಸಿದ್ದಾರೆ.
ಇಷ್ಟೆಲ್ಲಾ ಅರ್ಹತೆಗಳಿದ್ದರೂ ಹಲವು ಯುವತಿಯರು ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಅವರಲ್ಲಿ ಕೆಲವರು ತಿಂಗಳಿಗೆ ಸುಮಾರು ₹50 ಸಾವಿರ ವೇತನ ಪಡೆಯುತ್ತಿರುವವರೂ ಇದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಈ ನಡುವೆ, ಯುವಕ ಹಾಗೂ ಯುವತಿಯೊಬ್ಬರ ನಡುವಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಕೂಡ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅದರಲ್ಲಿ ಯುವತಿ, “ನಮ್ಮ ಹಿನ್ನೆಲೆಗಳು ತುಂಬಾ ವಿಭಿನ್ನವಾಗಿವೆ. ಹೀಗಾಗಿ ನಾವು ಪರಸ್ಪರ ಹೊಂದಿಕೆಯಾಗುವುದಿಲ್ಲ ಎಂದು ಅನಿಸುತ್ತಿದೆ. ಈ ಸಂಬಂಧವನ್ನು ಮುಂದುವರಿಸದಿರುವುದು ಉತ್ತಮ. ನಿಮ್ಮ ಭವಿಷ್ಯಕ್ಕೆ ಶುಭವಾಗಲಿ” ಎಂದು ತಿಳಿಸಿದ್ದಾಳೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಸಂಬಳ ಅಥವಾ ವೃತ್ತಿಪರ ಯಶಸ್ಸು ಮಾತ್ರ ಮದುವೆಯಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲು ಸಾಕಾಗುವುದಿಲ್ಲ. ಹೊಂದಾಣಿಕೆ, ವ್ಯಕ್ತಿತ್ವ ಮತ್ತು ಪರಸ್ಪರ ಅರ್ಥೈಸಿಕೊಳ್ಳುವಿಕೆ ಕೂಡ ಮುಖ್ಯ ಎಂದು ಹೇಳಿದ್ದಾರೆ.
ಇನ್ನು ಕೆಲವರು, “ತಿಂಗಳಿಗೆ ₹3 ಲಕ್ಷ ಗಳಿಸುತ್ತಿದ್ದಾನೆ ಎಂದ ಮಾತ್ರಕ್ಕೆ ಮದುವೆ ಖಚಿತವಾಗಬೇಕೇ? ವ್ಯಕ್ತಿತ್ವವೂ ಮುಖ್ಯ” ಎಂದು ಪ್ರಶ್ನಿಸಿದ್ದಾರೆ.
ಮತ್ತೊಬ್ಬರು, “ಹೆಚ್ಚು ಹಣ ಗಳಿಸುವುದು ಮದುವೆಯಾಗುವ ಅರ್ಹತೆಯ ಖಾತರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನೊಬ್ಬ ನೆಟ್ಟಿಗರು ವ್ಯಂಗ್ಯವಾಗಿ, “ಆಕೆ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾಳೆ. ನಿಮ್ಮ ಬಳಿ ನೀಡಲು ಇರುವುದು ಹಣ ಮಾತ್ರ ಎಂಬಂತೆ ಕಾಣುತ್ತಿದೆ” ಎಂದು ಟೀಕಿಸಿದ್ದಾರೆ.
ಮತ್ತೊಂದೆಡೆ, ಬೆಂಗಳೂರಿನಂತಹ ನಗರದಲ್ಲಿ ಉತ್ತಮ ಆದಾಯ ಹೊಂದಿರುವ ವ್ಯಕ್ತಿಯೊಬ್ಬರು ಏಕೆ ಕೇವಲ ಅರೇಂಜ್ಡ್ ಮ್ಯಾರೇಜ್‌ನ್ನೇ ಅವಲಂಬಿಸಬೇಕು ಎಂದು ಕೆಲವರು ಪ್ರಶ್ನಿಸಿದ್ದಾರೆ. “ಬೆಂಗಳೂರಿನಂತಹ ನಗರದಲ್ಲಿ ವಾಸಿಸುತ್ತಿದ್ದು, ಉತ್ತಮವಾಗಿ ಸಂಪಾದಿಸುತ್ತಿರುವಾಗ ಡೇಟಿಂಗ್ ಮೂಲಕ ಸಂಗಾತಿಯನ್ನು ಹುಡುಕಿ ಮದುವೆಯಾಗಲು ಏಕೆ ಸಾಧ್ಯವಿಲ್ಲ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ.
ಇನ್ನೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದು, “ನಾನೂ ಕಳೆದ ಒಂದು ವರ್ಷದಿಂದ ಅರೇಂಜ್ಡ್ ಮ್ಯಾರೇಜ್ ಪ್ರಕ್ರಿಯೆಯಲ್ಲಿದ್ದೇನೆ. ನಿಮ್ಮ ಸ್ನೇಹಿತನ ಅನುಭವವೇ ನನ್ನದೂ ಆಗಿದೆ. ‘ವೈಬ್ಸ್ ಮ್ಯಾಚ್ ಆಗುತ್ತಿಲ್ಲ’ ಅಥವಾ ‘ನಾವು ಹೊಂದಿಕೆಯಾಗುವುದಿಲ್ಲ’ ಎಂಬ ಕಾರಣಗಳೇ ಹೆಚ್ಚಾಗಿ ಕೇಳಿಬರುತ್ತಿವೆ” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ, ಈ ಪೋಸ್ಟ್ ಮದುವೆಗೆ ಹಣ ಮತ್ತು ಉದ್ಯೋಗ ಮಾತ್ರ ಸಾಕೇ? ಅಥವಾ ವ್ಯಕ್ತಿತ್ವ ಹಾಗೂ ಹೊಂದಾಣಿಕೆಯೇ ಮುಖ್ಯವೇ? ಎಂಬ ಚರ್ಚೆಯನ್ನು ಮತ್ತೊಮ್ಮೆ ಹುಟ್ಟುಹಾಕಿದೆ.

