ತುಮಕೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರವೇ ನೆರವು ನೀಡುವಂತೆ ರಾಜ್ಯ ಮನವಿ ಮಾಡಿದೆ. ಕೇಂದ್ರ ತಂಡ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಕೇಂದ್ರಕ್ಕೆ ಸೂಕ್ತ ವರದಿ ನೀಡಲಿದೆ ಎಂಬ ವಿಶ್ವಾಸವಿದೆ. ಅದರ ಆಧಾರದ ಮೇಲೆ ಕರ್ನಾಟಕಕ್ಕೆ ಅಗತ್ಯ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆಯೂ ಇದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಇಂದು ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮತ್ತು ನಿರ್ವಹಣೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕುಡಿಯುವ ನೀರು, ಮೇವು, ಉದ್ಯೋಗ ಸೃಷ್ಟಿ ಸೇರಿದಂತೆ ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೇಂದ್ರ ತಂಡಕ್ಕೆ ಬರದ ವಾಸ್ತವ ಸ್ಥಿತಿ ಮನವರಿಕೆ:
ರಾಜ್ಯದಲ್ಲಿ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆಯಾಗುತ್ತಿದ್ದರೂ ಬರ ಪರಿಸ್ಥಿತಿಯಲ್ಲಿ ಯಾವುದೇ ಗಮನಾರ್ಹ ಸುಧಾರಣೆ ಕಂಡುಬಂದಿಲ್ಲ. ರಾಜ್ಯ ಸರ್ಕಾರ ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್ ಸಲ್ಲಿಸಿತ್ತು. ರಾಜ್ಯದ ಮನವಿಯ ಮೇರೆಗೆ ಕೇಂದ್ರ ಸರ್ಕಾರ ಮೂರು ತಂಡಗಳನ್ನು ಕಳುಹಿಸಿದ್ದು, ಅಕ್ಟೋಬರ್ 3ರಿಂದ 6ರವರೆಗೆ ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸುತ್ತಿವೆ. ರಾಜ್ಯಕ್ಕೆ ಆಗಮಿಸಿರುವ ಕೇಂದ್ರದ ತಂಡಗಳಿಗೆ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮುಖ್ಯ ಕಾರ್ಯದರ್ಶಿ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ರಾಜ್ಯದ ಬರ ಪರಿಸ್ಥಿತಿ ಕುರಿತು ಸಮಗ್ರ ಮಾಹಿತಿ ನೀಡಿದ್ದಾರೆ. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ತಂಡಗಳಿಗೆ ಸ್ಥಳೀಯ ಪರಿಸ್ಥಿತಿ ವಿವರಿಸಿದ್ದಾರೆ. ಬರದಿಂದ ತೀವ್ರವಾಗಿ ಬಾಧಿತವಾದ ಪ್ರದೇಶಗಳಿಗೆ ತಂಡಗಳನ್ನು ನೇರವಾಗಿ ಕರೆದೊಯ್ದು ವಾಸ್ತವ ಸ್ಥಿತಿಯನ್ನು ತೋರಿಸಲಾಗಿದೆ ಎಂದರು.
ತುಮಕೂರು ಜಿಲ್ಲೆಯಲ್ಲಿಯೂ ಕೇಂದ್ರ ತಂಡ ಮೂರ್ನಾಲ್ಕು ತಾಲ್ಲೂಕುಗಳಿಗೆ ಭೇಟಿ ನೀಡಿದ್ದು, ಜಿಲ್ಲಾಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಬರದ ಪರಿಣಾಮಗಳ ಕುರಿತು ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಸುಮಾರು 217 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದೆ. 177 ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಲಾಗಿದ್ದು, ಈ ಪ್ರದೇಶಗಳಲ್ಲಿ ಸುಮಾರು ₹46 ಸಾವಿರ ಕೋಟಿ ನಷ್ಟ ಉಂಟಾಗಿದೆ.
ಎನ್‌ಡಿಆರ್‌ಎಫ್ ಮಾರ್ಗಸೂಚಿಗಳಡಿ ಸದ್ಯ ಸುಮಾರು ₹10 ಸಾವಿರದಿಂದ ₹11 ಸಾವಿರ ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿದೆ. ಸಂಪೂರ್ಣ ನಷ್ಟದ ಮಾಹಿತಿ ಲಭ್ಯವಾದ ಬಳಿಕ ರಾಜ್ಯದ ಬೇಡಿಕೆಯ ಪ್ರಮಾಣವೂ ಹೆಚ್ಚಾಗಲಿದೆ ಎಂದರು.
ಕಳೆದ ಬಾರಿ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿ ನಿರ್ದೇಶನ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಅಂತಹ ಪರಿಸ್ಥಿತಿ ಎದುರಾಗುವುದಿಲ್ಲ ಎಂಬ ವಿಶ್ವಾಸವಿದೆ. ತುಮಕೂರು ನಗರಕ್ಕೆ ಜನವರಿವರೆಗೆ ಮಾತ್ರ ನೀರು; ತುರ್ತು ಪರ್ಯಾಯ ವ್ಯವಸ್ಥೆಗೆ ಸೂಚನೆ : ತುಮಕೂರು ಜಿಲ್ಲೆಯಲ್ಲಿ ಬರ ನಿರ್ವಹಣೆ ಕುರಿತು ನಿರಂತರವಾಗಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗುತ್ತಿದೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಬರ ನಿರ್ವಹಣೆಗೆ ಸಂಬಂಧಿಸಿದ ಸಭೆ ನಡೆಸಲು ಅಥವಾ ಅಗತ್ಯ ಕ್ರಮ ಕೈಗೊಳ್ಳಲು ಯಾವುದೇ ಅಡಚಣೆ ಇಲ್ಲ. ಇದೇ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಲಾಗಿದೆ ಎಂದರು.
ತುಮಕೂರು ನಗರ ಮತ್ತು ಜಿಲ್ಲೆಯ ಕೆಲವು ಪ್ರದೇಶಗಳಿಗೆ ಕುಡಿಯುವ ನೀರಿನ ಪ್ರಮುಖ ಮೂಲ ಹೇಮಾವತಿ ನದಿಯಾಗಿದೆ. ಈಗಾಗಲೇ ಎರಡನೇ ಬಾರಿಗೆ ಹೇಮಾವತಿಯಿಂದ ನೀರು ಹರಿಸಲಾಗಿದೆ. ಆದರೆ ಪ್ರಸ್ತುತ ಲಭ್ಯವಿರುವ ನೀರಿನ ಪ್ರಮಾಣವನ್ನು ಗಮನಿಸಿದರೆ ತುಮಕೂರು ನಗರಕ್ಕೆ ಜನವರಿವರೆಗೆ ಮಾತ್ರ ಕುಡಿಯುವ ನೀರು ಪೂರೈಸಲು ಸಾಧ್ಯವಾಗಬಹುದು. ಮುಂದಿನ ದಿನಗಳಲ್ಲಿ ಮಳೆಯಾಗಿ ಹೇಮಾವತಿ ಜಲಾಶಯಕ್ಕೆ ಒಳಹರಿವು ಬಂದರೆ ಪರಿಸ್ಥಿತಿ ಸುಧಾರಿಸಬಹುದು. ಆದರೆ ಜನವರಿ ನಂತರವೂ ಮಳೆಯಾಗದಿದ್ದರೆ ಗಂಭೀರ ಸಮಸ್ಯೆ ಎದುರಾಗಲಿದೆ. ಆಗ ಕೊಳವೆಬಾವಿಗಳ ಮೇಲೆ ಅವಲಂಬಿಸಬೇಕಾಗುತ್ತದೆ. ತುಮಕೂರು ನಗರದಲ್ಲಿ 800ಕ್ಕೂ ಹೆಚ್ಚು ಕೊಳವೆಬಾವಿಗಳಿದ್ದರೂ, ಅವುಗಳಿಂದ ದೊರೆಯುವ ನೀರು ಇಡೀ ನಗರದ ಪ್ರತಿದಿನದ ಅಗತ್ಯ ಪೂರೈಸಲು ಸಾಕಾಗುವುದಿಲ್ಲ ಎಂದರು.
ಹೇಮಾವತಿಯನ್ನು ಹೊರತುಪಡಿಸಿ ತುಮಕೂರು ನಗರಕ್ಕೆ ದೊಡ್ಡ ಪ್ರಮಾಣದಲ್ಲಿ ನೀರು ಒದಗಿಸಬಹುದಾದ ಪರ್ಯಾಯ ಮೂಲ ಲಭ್ಯವಿಲ್ಲ. ಹೀಗಾಗಿ ಜನವರಿ ನಂತರ ಎದುರಾಗಬಹುದಾದ ಪರಿಸ್ಥಿತಿಗೆ ಈಗಿನಿಂದಲೇ ಕಂಟಿಂಜೆನ್ಸಿ ಪ್ಲಾನ್ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೆಚ್ಚುವರಿ ಕೊಳವೆಬಾವಿಗಳ ಅಗತ್ಯವಿದೆಯೇ, ಬೇರೆ ಯಾವ ಪರ್ಯಾಯ ನೀರಿನ ಮೂಲಗಳನ್ನು ಬಳಸಬಹುದು ಎಂಬುದನ್ನು ಪರಿಶೀಲಿಸಲು ತಿಳಿಸಿದ್ದೇನೆ. ನೀರನ್ನು ಮಿತವಾಗಿ ಬಳಸಿ; ಮೇ ತಿಂಗಳವರೆಗೆ ಪರಿಸ್ಥಿತಿ ಸವಾಲಿನದ್ದಾಗಬಹುದು : ನೀರಿನ ಬಳಕೆಗೆ ಕಟ್ಟುನಿಟ್ಟಿನ ಮಾರ್ಗಸೂಚಿ ರೂಪಿಸುವುದಕ್ಕಿಂತ ಜನರ ಮೂಲಭೂತ ಕುಡಿಯುವ ನೀರಿನ ಅಗತ್ಯವನ್ನು ಪೂರೈಸುವುದು ಸರ್ಕಾರದ ಮೊದಲ ಆದ್ಯತೆ ಎಂದರು.
ರಾಜ್ಯದ ಜನರು ನೀರನ್ನು ಅತ್ಯಂತ ಮಿತವಾಗಿ ಬಳಸಬೇಕು. ವಾಹನಗಳನ್ನು ತೊಳೆಯಲು, ಅನಗತ್ಯವಾಗಿ ಹೆಚ್ಚಿನ ನೀರು ಬಳಸಲು ಸಾಧ್ಯವಾದಷ್ಟು ಕಡಿವಾಣ ಹಾಕಬೇಕು. ಮನೆಯ ದಿನನಿತ್ಯದ ಬಳಕೆಯಲ್ಲಿಯೂ ನೀರನ್ನು ಉಳಿತಾಯ ಮಾಡುವ ಮೂಲಕ ಜನರು ಸರ್ಕಾರದೊಂದಿಗೆ ಸಹಕರಿಸಬೇಕು ಎಂದರು.
ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಮುಂದಿನ ಹಲವು ತಿಂಗಳುಗಳವರೆಗೆ ಸಮರ್ಪಕ ಮಳೆಯ ಸಾಧ್ಯತೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಬಹುದು. ಈ ಕಾರಣದಿಂದ ಈಗಿರುವ ನೀರಿನ ಸಂಪನ್ಮೂಲವನ್ನು ಅತ್ಯಂತ ಜಾಗರೂಕತೆಯಿಂದ ಬಳಸುವುದು ಅನಿವಾರ್ಯ. ಬರ ನಿರ್ವಹಣೆ ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯ. ಪ್ರತಿಯೊಬ್ಬರೂ ತಮ್ಮ ಮಟ್ಟದಲ್ಲಿ ನೀರಿನ ಸಂರಕ್ಷಣೆ ಮತ್ತು ಮಿತ ಬಳಕೆಗೆ ಆದ್ಯತೆ ನೀಡಬೇಕು ಎಂದರು.
33 ವಾರಗಳಿಗೆ ಸಾಕಾಗುವ ಮೇವು ಲಭ್ಯ: ಜಾನುವಾರುಗಳು ರೈತರ ಆಸ್ತಿಯಾಗಿದ್ದು, ಅವುಗಳನ್ನು ರಕ್ಷಿಸುವುದು ಸರ್ಕಾರದ ಪ್ರಮುಖ ಆದ್ಯತೆ. ಎರಡು ತಿಂಗಳ ಹಿಂದೆಯೇ ರೈತರಿಗೆ ಮೇವು ಬೀಜದ ಕಿಟ್‌ಗಳನ್ನು ವಿತರಿಸಲಾಗಿದ್ದು, ಈಗ ಅವುಗಳಿಂದ ಬೆಳೆದ ಮೇವು ಬಳಕೆಗೆ ಬರುವ ಹಂತದಲ್ಲಿದೆ. ಜೋಳ ಸೇರಿದಂತೆ ಮೇವು ಬೆಳೆಗಳು ಮೂರು-ನಾಲ್ಕು ಅಡಿಯಷ್ಟು ಬೆಳೆದಿದ್ದು, ಮುಂದಿನ ದಿನಗಳಲ್ಲಿ ಅವು ರೈತರಿಗೆ ನೆರವಾಗಲಿವೆ ಎಂದರು.
ರಾಜ್ಯ ಸರ್ಕಾರ ಮೇವು ಖರೀದಿ ಮತ್ತು ಪೂರೈಕೆಗಾಗಿ ಈಗಾಗಲೇ ₹125 ಕೋಟಿ ಒದಗಿಸಿದೆ. ಅಗತ್ಯವಿದ್ದರೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಲಾಗುವುದು. ಸ್ಥಳೀಯವಾಗಿ ಮೇವು ಕೊರತೆಯಾದಲ್ಲಿ ಲಭ್ಯವಿರುವ ಇತರೆ ಪ್ರದೇಶಗಳು ಹಾಗೂ ರಾಜ್ಯಗಳಿಂದ ಮೇವು ತರಿಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತ ಸುಮಾರು 33 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಪಾವಗಡದಲ್ಲಿ ಸುಮಾರು 15 ವಾರಗಳಿಗೆ ಸಾಕಾಗುವಷ್ಟು ಮೇವು ಇದೆ. ಅಲ್ಲಿ ಪರ್ಯಾಯ ಬೆಳೆ ಹಾಗೂ ಇತರೆ ಮೂಲಗಳ ಮೂಲಕ ಕೊರತೆಯನ್ನು ಸರಿದೂಗಿಸಲಾಗುವುದು ಎಂದರು.
ತಿಪಟೂರು ಭಾಗದ ರೈತರು ಮೇವು ಬ್ಯಾಂಕ್ ಸ್ಥಾಪಿಸುವಂತೆ ಬೇಡಿಕೆ ಇಟ್ಟಿದ್ದಾರೆ. ರೈತರ ಬೇಡಿಕೆಗಳಿಗೆ ಸರ್ಕಾರ ಗೌರವ ನೀಡುತ್ತದೆ. ಸದ್ಯ ತಕ್ಷಣವೇ ಮೇವು ಬ್ಯಾಂಕ್ ಆರಂಭಿಸಬೇಕಾದ ಪರಿಸ್ಥಿತಿ ಬಂದಿಲ್ಲ. ಆದರೆ ಅಗತ್ಯ ಉಂಟಾದ ತಕ್ಷಣವೇ ಮೇವು ಬ್ಯಾಂಕ್ ಹಾಗೂ ಗೋಶಾಲೆಗಳನ್ನು ಆರಂಭಿಸಲು ಸರ್ಕಾರ ಸಿದ್ಧವಾಗಿದೆ ಎಂದರು.

