ಬೆಂಗಳೂರು: 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ ಪರೀಕ್ಷಾ ಶುಲ್ಕವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಹೊಸದಾಗಿ ಪರೀಕ್ಷೆ ಬರೆಯುವವರು, ಖಾಸಗಿ ಹಾಗೂ ಪುನರಾವರ್ತಿತ ಅಭ್ಯರ್ಥಿಗಳ ನೋಂದಣಿ ಮತ್ತು ಪರೀಕ್ಷಾ ಶುಲ್ಕಗಳನ್ನು ಸಹ ಏರಿಕೆ ಮಾಡಲಾಗಿದೆ. ಪ್ರಥಮ ಬಾರಿಗೆ ಪರೀಕ್ಷೆ ಬರೆಯುವವರಿಗೆ ಪರೀಕ್ಷಾ ಶುಲ್ಕವನ್ನು ಶೇ.5ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ 710 ರೂಪಾಯಿಗಳಿಂದ 746 ರೂಪಾಯಿಗೆ ಏರಿಕೆಯಾಗಿದೆ.
ಈಗಾಗಲೇ 10ನೇ ತರಗತಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿರುವ ಅಭ್ಯರ್ಥಿಗಳಿಗೂ ಹೆಚ್ಚುವರಿ ಶುಲ್ಕ ಪಾವತಿ ಮಾಡುವಂತೆ ಶಾಲಾ ಶಿಕ್ಷಣ ಮೌಲ್ಯಮಾಪನ ಮಂಡಳಿ ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳು 76 ಹೆಚ್ಚುವರಿ ಶುಲ್ಕ ಪಾವತಿಸಬೇಕಿದೆ.
ಪುನರಾವರ್ತಿತವಾಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಶುಲ್ಕದಲ್ಲೂ ಏರಿಕೆಯಾಗಿದೆ. ಈ ಮೊದಲು ಒಂದು ವಿಷಯಕ್ಕೆ 448 ರೂಪಾಯಿ ಪಾವತಿಸಬೇಕಿತ್ತು. ಆದರೆ ಈ ಒಂದು ವಿಷಯಕ್ಕೆ 470 ರೂಪಾಯಿ ಪಾವತಿಸಬೇಕಿದೆ. ಇನ್ನು ಎರಡು ವಿಷಯಕ್ಕೆ 559 ರೂ,ನಿಂದ 587 ರೂಪಾಯಿಗೆ ಏರಿಕೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಮೂರು ಅಥವಾ ಮೂರಕ್ಕಿಂತ ಹೆಚ್ಚಿನ ವಿಷಯಗಳಿಗೆ ಪರೀಕ್ಷೆ ಬರೆಯುವವರು 752 ರೂಪಾಯಿಗಳ ಬದಲಿಗೆ 790 ರೂಪಾಯಿ ಪಾವತಿಸಬೇಕು.
ಇನ್ನು ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕವೂ ಏರಿಕೆಯಾಗಿದೆ. ಈ ಮೊದಲು ಹೊಸದಾಗಿ ನೋಂದಣಿಯಾಗುವ ಖಾಸಗಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ನೋಂದಣಿ ಶುಲ್ಕ 248 ರುಪಾಯಿ ಪಾವತಿಸಬೇಕಿತ್ತು. ಈಗ 260 ರೂಪಾಯಿಗೆ ಏರಿಕೆಯಾಗಿದೆ. ಅಂದರೆ ಖಾಸಗಿ ಅಭ್ಯರ್ಥಿಗಳು ನೋಂದಣಿ ಶುಲ್ಕವನ್ನೂ 12 ರೂಪಾಯಿ ಹೆಚ್ಚುವರಿಯಾಗಿ ವಿದ್ಯಾರ್ಥಿಗಳು ಪಾವತಿಸಬೇಕಿದೆ. ಇನ್ನು ಈಗಾಗಲೇ ಖಾಸಗಿ ಅಭ್ಯರ್ಥಿಯಾಗಿ ನೋಂದಣಿಯಾಗಿ ಪರೀಕ್ಷಾ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ನೋಂದಣಿ ಶುಲ್ಕ 72 ರೂಪಾಯಿಗಳಿಂದ 76 ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಟ್ರೆಕ್ಕಿಂಗ್ ವೇಳೆ ಈಜಲು ಹೋಗಿ ದುರಂತ: ಕಲ್ಲು ಕ್ವಾರಿಯಲ್ಲಿ ಶವವಾಗಿ ಪತ್ತೆಯಾದ ಟೆಕ್ಕಿ
ಜಿಗಣಿ: ಸ್ನೇಹಿತರೊಂದಿಗೆ ಟ್ರೆಕ್ಕಿಂಗ್ ಹೋಗಿದ್ದ ವೇಳೆ ಕಲ್ಲು ಕ್ವಾರಿಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ ಟೆಕ್ಕಿ ಶವವಾಗಿ ಪತ್ತೆಯಾಗಿದ್ದಾನೆ.
ಬೆಂಗಳೂರು ಹೊರವಲಯದ ಜಿಗಣಿ ಸಮೀಪದ ಯಲ್ಲಮ್ಮನದೊಡ್ಡಿಯಲ್ಲಿ ಕಲ್ಲು ಕ್ವಾರಿಯಲ್ಲಿ ಟೆಕ್ಕಿ ಶವ ಪತ್ತೆಯಾಗಿದೆ. ವಿನಯ್ ಮೃತ ಟೆಕ್ಕಿ. ಕಳೆದ ಎರದು ದಿನಗಳಿಂದ ನಾಪತ್ತೆಯಾಗಿದ್ದ ವಿನಯ್ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.
ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಸೇರಿದಂತೆ ಈಶ್ವರ್ ಮಲ್ಪೆ ಮುಳುಗು ತಜ್ಞರ ತಂಡದಿಂದ ಎರಡು ದಿನಗಳಿಂದ ಕಲ್ಲು ಕ್ವಾರಿಯ ನೀರಿನಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ನಿರಂತರ ಹುಡುಕಾಟದ ಬಳಿಕ ಕೊನೆಗೂ ಮೃತದೇಹ ಪತ್ತೆಯಾಗಿದೆ.
ಸದ್ಯ ಮೃತದೇಹವನ್ನ ಅತ್ತಿಬೆಲೆಯ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆಂಧ್ರಪ್ರದೇಶ ಮೂಲದ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದ ವಿನಯ್ ಬೆಂಗಳೂರಿನ ಹಲಸೂರಿನಲ್ಲಿ ವಾಸವಿದ್ದರು. ಗಾಂಧಿ ಜಯಂತಿ ರಜೆ ಹಿನ್ನೆಲೆ ಟ್ರಕ್ಕಿಂಗ್ ಪ್ಲ್ಯಾನ್ ಮಾಡಿದ್ದು, ಬಿಎಲ್‌ಆರ್ ಹೈಕ್ ಎಂಬ ಇನ್ಸ್ಟಾ ಗ್ರೂಪ್ ಮೂಲಕ ಎಂಟು ಜನರ ತಂಡ ಟ್ರೆಕ್ಕಿಂಗ್ ತೆರಳಿದ್ದರು.
ಟ್ರೆಕ್ಕಿಂಗ್ ವೇಳೆ ವಿನಯ್ ಸೇರಿದಂತೆ ಇಡೀ ತಂಡ ಕಲ್ಲು ಕ್ವಾರಿಯಲ್ಲಿ ಈಜಲು ತೆರಳಿತ್ತು. ಕಲ್ಲು ಕ್ವಾರಿಯ ಮೇಲಿನಿಂದ ಯುವಕ-ಯುವತಿಯರ ತಂಡ ನೀರಿಗೆ ಡೈವ್ ಹೊಡೆದು ಮೋಜುಮಸ್ತಿ ಮಾಡಿದ್ದರು. ಈ ವೇಳೆ ಟೆಕ್ಕಿ ವಿನಯ್ ಏಕಾಏಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸತತ ಶೋಧ ಕಾರ್ಯಾಚರಣೆ ಬಳಿಕ ಇಂದು ವಿನಯ್ ಮೃತದೇಹ ಕಲ್ಲು ಕ್ವಾರಿಯಲ್ಲಿ ಪತ್ತೆಯಾಗಿದೆ.

