ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹೊರವಲಯದ ಗ್ರಾಮವೊಂದರಲ್ಲಿ ಎಚ್ಐವಿ (HIV) ಸೋಂಕಿಗೆ ಒಳಗಾಗಿದ್ದ ಇಬ್ಬರು ಸಹೋದರರು ಅಲ್ಪಾವಧಿಯ ಅಂತರದಲ್ಲಿ ಮೃತಪಟ್ಟಿದ್ದು, ಇಡೀ ಪ್ರದೇಶದಲ್ಲಿ ತೀವ್ರ ಆತಂಕ ಹಾಗೂ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಘಟನೆಯ ವಿವರ
ಮೃತಪಟ್ಟ 51 ಹಾಗೂ 43 ವರ್ಷದ ವ್ಯಕ್ತಿಗಳು ಸೋದರ ಸಂಬಂಧಿಗಳಾಗಿದ್ದರು. ಇಬ್ಬರೂ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. 51 ವರ್ಷದ ವ್ಯಕ್ತಿಯ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಅವರನ್ನು ಸ್ಥಳೀಯ ಆಸ್ಪತ್ರೆಯಿಂದ ರಿಷಿಕೇಶದ ಏಮ್ಸ್ (AIIMS) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅವರಿಗೆ ಎಚ್ಐವಿ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೆ ಉಸಿರಾಟದ ತೊಂದರೆಯಿಂದ ಅವರು ಕೊನೆಯುಸಿರೆಳೆದಿದ್ದರು. ಈ ಘಟನೆ ನಡೆದ ಕೇವಲ ಮೂರೇ ದಿನಗಳಲ್ಲಿ ಅವರ 43 ವರ್ಷದ ಸೋದರ ಸಂಬಂಧಿಯೂ ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದು, ಅವರಲ್ಲೂ ಎಚ್ಐವಿ ಸೋಂಕು ಪತ್ತೆಯಾಗಿತ್ತು ಎಂದು ಮೃತರ ಕುಟುಂಬಸ್ಥರು ತಿಳಿಸಿದ್ದಾರೆ.
ಯುವತಿಯೊಂದಿಗಿನ ನಂಟು ಮತ್ತು ಕುಟುಂಬಸ್ಥರ ಸಂಶಯ
ಕೆಲವು ಸಮಯದ ಹಿಂದೆ ಗ್ರಾಮದಲ್ಲಿ ಬಾಡಿಗೆಗೆ ವಾಸವಿದ್ದ ಯುವತಿಯೊಬ್ಬಳ ಜೊತೆ ಇಬ್ಬರೂ ನಿಕಟ ಸಂಪರ್ಕ ಹೊಂದಿದ್ದರು ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ. ಆ ಯುವತಿ ವಾಸವಿದ್ದ ಕೊಠಡಿಗೆ ಇಬ್ಬರೂ ಹೋಗುತ್ತಿದ್ದನ್ನು ಗಮನಿಸಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ. ಪ್ರಸ್ತುತ ಆ ಯುವತಿ ಆ ಬಾಡಿಗೆ ಮನೆಯನ್ನು ಖಾಲಿ ಮಾಡಿ ಬೇರೆಡೆಗೆ ತೆರಳಿದ್ದು, ಆಕೆಯ ಸಂಪರ್ಕದಲ್ಲಿದ್ದ ಇತರ ಗ್ರಾಮಸ್ಥರಲ್ಲೂ ಈಗ ಭೀತಿ ಆವರಿಸಿದೆ.
ಆದಾಗ್ಯೂ, ಆ ಯುವತಿಗೆ ಎಚ್ಐವಿ ಸೋಂಕು ಇದೆಯೇ ಅಥವಾ ಆಕೆಯ ಮೂಲಕವೇ ಇವರಿಗೆ ಸೋಂಕು ಹರಡಿದೆಯೇ ಎಂಬುದಕ್ಕೆ ಯಾವುದೇ ಅಧಿಕೃತ ವೈದ್ಯಕೀಯ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಕೇವಲ ವೈದ್ಯಕೀಯ ತನಿಖೆ ಹಾಗೂ ರಕ್ತ ತಪಾಸಣೆಯ ಮೂಲಕ ಮಾತ್ರ ಸೋಂಕಿನ ಮೂಲವನ್ನು ಪತ್ತೆಹಚ್ಚಲು ಸಾಧ್ಯ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಇಲಾಖೆಯ ತುರ್ತು ಕ್ರಮ:
ಈ ಘಟನೆಯ ಬೆನ್ನಲ್ಲೇ ಬಿಜ್ನೋರ್ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ (CMO) ಡಾ. ಕೌಶಲೇಂದ್ರ ಸಿಂಗ್ ಅವರು ತಕ್ಷಣವೇ ಸ್ಪಂದಿಸಿದ್ದು, ವೈದ್ಯರ ವಿಶೇಷ ತಂಡವನ್ನು ಗ್ರಾಮಕ್ಕೆ ಕಳುಹಿಸಿ ಕೌನ್ಸಿಲಿಂಗ್ ನೀಡಲು ನಿರ್ದೇಶಿಸಿದ್ದಾರೆ. ಯಾವುದೇ ರೀತಿಯ ವದಂತಿಗಳು ಹಾಗೂ ಆಧಾರರಹಿತ ಶಂಕೆಗಳಿಗೆ ಕಿವಿಗೊಡದಂತೆ ತಿಳಿಸಿರುವ ಅವರು, ಶಂಕಿತರು ಅಧಿಕೃತ ಆರೋಗ್ಯ ಕೇಂದ್ರಗಳಲ್ಲಿ ಗೌಪ್ಯವಾಗಿ ರಕ್ತ ತಪಾಸಣೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

