ಮುಂಬೈ: ಭವಿಷ್ಯದಲ್ಲಿ ವೈದ್ಯಕೀಯ ತಂತ್ರಜ್ಞಾನ ಮತ್ತಷ್ಟು ಅಭಿವೃದ್ಧಿಯಾದಾಗ ತಂದೆಯನ್ನು ಮತ್ತೆ ಬದುಕಿಸಬಹುದು ಎಂಬ ಅತಿಯಾದ ನಂಬಿಕೆಯಿಂದ ಮಹಿಳೆಯೊಬ್ಬಳು ತನ್ನ ತಂದೆಯ ಮೃತದೇಹವನ್ನು ಬರೋಬ್ಬರಿ ನಾಲ್ಕು ವರ್ಷಗಳ ಕಾಲ ರಹಸ್ಯವಾಗಿ ಫ್ರೀಜರ್ನಲ್ಲಿ ಸಂರಕ್ಷಿಸಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ.
ಮೃತದೇಹದಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಈ ಘಟನೆ ಬಹಿರಂಗವಾಗಿದೆ. ಮುಂಬೈನ ಮಲಾಡ್ ಪ್ರದೇಶದಲ್ಲಿರುವ ಕಟ್ಟಡವೊಂದರ ಹೊರಭಾಗದಲ್ಲಿ ಶೀಘ್ರದಲ್ಲೇ ಡೇ ಕೇರ್ ಸೆಂಟರ್ ಆರಂಭಿಸಲಾಗುವುದು ಎಂಬ ಫಲಕವಿತ್ತು. ಆದರೆ ಕಟ್ಟಡದ ಗೇಟ್ಗೆ ಯಾವಾಗಲೂ ಬೀಗ ಹಾಕಲಾಗುತ್ತಿತ್ತು.
ಕಳೆದ ಕೆಲವು ದಿನಗಳಿಂದ ಕಟ್ಟಡದಿಂದ ತೀವ್ರ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೀಗ ಒಡೆದು ಒಳಗೆ ಪ್ರವೇಶಿಸಿದಾಗ, ಅಲ್ಲಿ ಫ್ರೀಜರ್ನಲ್ಲಿ ಸಂರಕ್ಷಿಸಲಾಗಿದ್ದ ಮೃತದೇಹ ಪತ್ತೆಯಾಗಿದೆ.
ತನಿಖೆ ನಡೆಸಿದಾಗ ಹಲವು ಆಘಾತಕಾರಿ ಸಂಗತಿಗಳು ಹೊರಬಂದಿವೆ. ಮೃತ ವ್ಯಕ್ತಿ ಕ್ಯಾನ್ಸರ್ನಿಂದ ಬಳಲುತ್ತಿದ್ದು, 2022ರ ಜೂನ್ನಲ್ಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ತಂದೆಯ ಮೇಲಿನ ಅಪಾರ ಪ್ರೀತಿಯಿಂದ, ಭವಿಷ್ಯದಲ್ಲಿ ವೈದ್ಯಕೀಯ ತಂತ್ರಜ್ಞಾನದಿಂದ ಅವರನ್ನು ಮತ್ತೆ ಬದುಕಿಸಬಹುದು ಎಂಬ ಆಶಯದಿಂದ ಮಗಳು ಮೃತದೇಹವನ್ನು ಸಂರಕ್ಷಿಸಿದ್ದಾಳೆ ಎನ್ನಲಾಗಿದೆ.
ಮೃತದೇಹವನ್ನು ದೀರ್ಘಕಾಲ ಸಂರಕ್ಷಿಸುವ ಮಾರ್ಗಗಳಿಗಾಗಿ ಆಕೆ ಇಂಟರ್ನೆಟ್ನಲ್ಲಿ ಹುಡುಕಾಟ ನಡೆಸಿದ್ದಳು. ಈ ವೇಳೆ ಅಮೆರಿಕದಲ್ಲಿ ಅತ್ಯಂತ ಕಡಿಮೆ ತಾಪಮಾನದಲ್ಲಿ ಮೃತದೇಹಗಳನ್ನು ಸಂರಕ್ಷಿಸುವ ವಿಧಾನವೊಂದರ ಬಗ್ಗೆ ತಿಳಿದುಕೊಂಡಿದ್ದಾಳೆ ಎನ್ನಲಾಗಿದೆ.
ತಂದೆಯ ಮೃತದೇಹವನ್ನು ಅಮೆರಿಕಕ್ಕೆ ಕೊಂಡೊಯ್ಯಲು ಹಣ ಸಂಗ್ರಹಿಸುತ್ತಿದ್ದು, ಅಲ್ಲಿಯವರೆಗೆ ಸ್ಥಳೀಯವಾಗಿಯೇ ಸಂರಕ್ಷಿಸುತ್ತಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಈ ತಾತ್ಕಾಲಿಕ ವ್ಯವಸ್ಥೆಗಾಗಿ ಡೇ ಕೇರ್ ಸೆಂಟರ್ ನಿರ್ವಾಹಕರಿಗೆ ತಿಂಗಳಿಗೆ ಸುಮಾರು ₹1.60 ಲಕ್ಷ ಪಾವತಿಸುತ್ತಿದ್ದಳು ಎನ್ನಲಾಗಿದೆ.
ಸದ್ಯ ಈ ಪ್ರಕರಣದಲ್ಲಿ ಕಾನೂನು ಉಲ್ಲಂಘನೆಯಾಗಿದೆಯೇ ಎಂಬುದನ್ನು ಕುರಾರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಭಾರತದಲ್ಲಿ ಮಾನವ ಮೃತದೇಹಗಳನ್ನು ಫ್ರೀಜರ್ನಲ್ಲಿ ದೀರ್ಘಕಾಲ ಸಂರಕ್ಷಿಸುವ ಕುರಿತು ನಿರ್ದಿಷ್ಟ ಕಾನೂನು ಸ್ಪಷ್ಟತೆ ಇಲ್ಲದಿದ್ದರೂ, ಈ ವಿಚಾರ ಹಲವು ಕಾನೂನು ಹಾಗೂ ಸಾರ್ವಜನಿಕ ಆರೋಗ್ಯದ ಅಂಶಗಳಿಗೆ ಸಂಬಂಧಿಸಿದೆ. ಮೃತ ವ್ಯಕ್ತಿಗೂ ಗೌರವಯುತ ಅಂತ್ಯಕ್ರಿಯೆ ಪಡೆಯುವ ಹಕ್ಕಿದೆ ಎಂಬ ಕಾನೂನು ತತ್ವವಿದೆ. ಯಾವುದೇ ಅನುಮತಿ ಇಲ್ಲದೆ ಅಥವಾ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಮೃತದೇಹವನ್ನು ರಹಸ್ಯವಾಗಿ ಇರಿಸುವುದು ಕಾನೂನು ಸಮಸ್ಯೆಗಳಿಗೆ ಕಾರಣವಾಗಬಹುದು. ವಿಶೇಷವಾಗಿ ಕೊಲೆ ಅಥವಾ ಇತರ ಅಪರಾಧಗಳನ್ನು ಮುಚ್ಚಿಹಾಕುವ ಉದ್ದೇಶವಿದ್ದರೆ ಕಠಿಣ ಕಾನೂನು ಕ್ರಮಕ್ಕೆ ಅವಕಾಶವಿದೆ.
2014ರಲ್ಲೂ ಇಂತಹದ್ದೇ ಘಟನೆ
ಇದೇ ರೀತಿಯ ಮತ್ತೊಂದು ಘಟನೆ 2014ರಲ್ಲಿ ಪಂಜಾಬ್ನಲ್ಲಿ ನಡೆದಿತ್ತು. ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನದ ಆಧ್ಯಾತ್ಮಿಕ ಗುರು ಅಶುತೋಷ್ ಮಹಾರಾಜ್ ಕ್ಲಿನಿಕಲ್ವಾಗಿ ಮೃತಪಟ್ಟಿದ್ದರೂ, ಅವರು ಸಮಾಧಿ ಸ್ಥಿತಿಯಲ್ಲಿದ್ದಾರೆ ಎಂದು ಅನುಯಾಯಿಗಳು ನಂಬಿದ್ದರು. ಹೀಗಾಗಿ ಅವರ ಮೃತದೇಹವನ್ನು ಫ್ರೀಜರ್ನಲ್ಲಿ ಸಂರಕ್ಷಿಸಲಾಗಿತ್ತು.
ಸಾರ್ವಜನಿಕ ಆರೋಗ್ಯದ ವಿಚಾರ ಹಾಗೂ ಧಾರ್ಮಿಕ ನಂಬಿಕೆಗಳನ್ನು ಪರಿಗಣಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕೆಲವು ನಿಯಮಗಳೊಂದಿಗೆ ಮೃತದೇಹವನ್ನು ಸಂರಕ್ಷಿಸಲು ಅನುಮತಿ ನೀಡಿತ್ತು. ಬಳಿಕ ಸರ್ಕಾರಿ ವೈದ್ಯರ ಮೇಲ್ವಿಚಾರಣೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ ಎಂದು ವರದಿಯಾಗಿದೆ. ಇದೀಗ ಮುಂಬೈನಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯ ಬಳಿಕ ಕಾನೂನು ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

