ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ, ದಳಪತಿ ನಟ ವಿಜಯ್ರನ್ನು ಭೇಟಿಯಾಗಿ ಅವರನ್ನು ತಬ್ಬಿಕೊಳ್ಳಬೇಕು ಎಂದು ಮಹಿಳೆಯೊಬ್ಬರು ಹಠ ಹಿಡಿದು ಕುಳಿತಿದ್ದು, ನಡು ರಸ್ತೆಯಲ್ಲಿಯೇ ಮಲಗಿ ರಂಪಾಟ ನಡೆಸಿರುವ ವಿಚಿತ್ರ ಘಟನೆ ದೆಹಲಿಯ ಜಂತರ್ ಮಂತರ್ ಬಳಿ ನಡೆದಿದೆ.
ಪೊಲೀಸರು ಆಕೆಯನ್ನು ರಸ್ತೆಯಿಂದ ತೆರವುಗೊಳಿಸಲು ಪ್ರಯತ್ನಿಸಿದರೂ, ವಿಜಯ್ ಬಂದು ತಮ್ಮನ್ನು ಅಪ್ಪಿಕೊಳ್ಳುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಮಹಿಳೆ ಪಟ್ಟು ಹಿಡಿದಿ ಕುಳಿತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.
ಜಂತರ್ ಮಂತರ್ ಸಮೀಪದ ಟ್ರಾಫಿಕ್ ಸಿಗ್ನಲ್ ಬಳಿ ಸೆಪ್ಟೆಂಬರ್ 29ರಂದು ಮಹಿಳೆಯೊಬ್ಬರು ರಸ್ತೆಯ ಮಧ್ಯದಲ್ಲಿ ಕುಳಿತು ಬಳಿಕ ಅಲ್ಲಿಯೇ ಮಲಗಿದ್ದಾರೆ. ಸುತ್ತಲೂ ಪೊಲೀಸರು ನಿಂತು ಆಕೆಯನ್ನು ಅಲ್ಲಿಂದ ತೆರವುಗೊಳಿಸಲು ಪ್ರಯತ್ನಿಸಿದ್ದಾರೆ. ಮಹಿಳೆಯನ್ನು ಪ್ರಶ್ನಿಸಿದಾಗ, “ತಮಿಳುನಾಡು ಸಿಎಂ ವಿಜಯ್ ಬಂದು ನನ್ನನ್ನು ಅಪ್ಪಿಕೊಳ್ಳುವವರೆಗೆ ನಾನು ಇಲ್ಲಿಂದ ಹೋಗುವುದಿಲ್ಲ” ಎಂದು ಮೊಂಡಾಟ ಹಿಡಿದಿದ್ದಾರೆ. ಅಲ್ಲದೇ ವಿಜಯ್ ಅವರನ್ನು ಭೇಟಿಯಾಗುವುದೇ ತನ್ನ ಕೊನೆಯ ಆಸೆ ಎಂದು ಹೇಳಿದ್ದಾಳೆ.
ಸ್ಥಳದಲ್ಲಿದ್ದ ಯೂಟ್ಯೂಬರ್ ಮಹಿಳೆಗೆ ರಸ್ತೆಯಲ್ಲಿ ಮಲಗಿರುವುದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆ ವಿಜಯ್ ಅವರನ್ನು ಅಪ್ಪಿಕೊಳ್ಳಬೇಕು ಎಂಬ ತನ್ನ ಬೇಡಿಕೆಯಿಂದ ಹಿಂದೆ ಸರಿಯಲಿಲ್ಲ. ಪೊಲೀಸರು ಆಕೆಯನ್ನು ರಸ್ತೆಯಿಂದ ಎಬ್ಬಿಸಲು ಮುಂದಾದಾಗ, “ನನ್ನನ್ನು ಮುಟ್ಟಬೇಡಿ, ಇದು ನನ್ನ ಹಕ್ಕು” ಎಂದು ಮಹಿಳೆ ಹೇಳಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.
ವಿಜಯ್ ಮೇಲಿನ ಅಭಿಮಾನವೋ, ದುರಭಿಮಾನವೋ ಗೊತ್ತಿಲ್ಲ. ಆದರೆ ಮಹಿಳೆಯನ್ನು ಸ್ಥಳದಿಂದ ಕರೆದೊಯ್ಯಲು ಪೊಲೀಸರು ಮಾತ್ರ ಹರಸಾಹಸ ಪಟ್ಟಿದ್ದಾರೆ. ಮಹಿಳೆಯ ಹುಚ್ಚಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

