ಆಲೂ ಪಿಯಾಜ್ ಕಚೋರಿ ಪ್ರತಿಯೊಬ್ಬರ ನೆಚ್ಚಿನ ತಿಂಡಿಗಳಲ್ಲಿ ಒಂದಾಗಿದೆ. ಕ್ರಿಸ್ಪಿ ಹೊರಪದರ ಹಾಗೂ ಖಾರ-ಖಾರವಾದ ಆಲೂಗಡ್ಡೆ-ಈರುಳ್ಳಿ ಮಿಶ್ರಣದ ಸ್ಟಫಿಂಗ್ ಹೊಂದಿರುವ ಈ ಕಚೋರಿ, ಸಂಜೆಯ ಟೀ ಟೈಮ್ ಹಾಗೂ ಹಬ್ಬದ ದಿನಗಳಲ್ಲಿ ಸವಿಯಲು ಹೇಳಿಮಾಡಿಸಿದ ತಿಂಡಿ. ಅಂಗಡಿಗಳಲ್ಲಿ ಸಿಗುವ ರೀತಿಯಲ್ಲೇ ಗರಿಗರಿಯಾದ ಹಾಗೂ ರುಚಿಕರ ಕಚೋರಿಗಳನ್ನು ಸರಿಯಾದ ವಿಧಾನ ಅನುಸರಿಸಿ ಮನೆಯಲ್ಲೇ ತಯಾರಿಸಬಹುದು. ನೀವು ಮನೆಯಲ್ಲೇ ಹಿಟ್ಟು ತಯಾರಿಸುವುದು, ಸ್ಟಫಿಂಗ್ ಮಾಡುವುದು ಹಾಗೂ ಕರಿಯುವಾಗ ಈ ಕೆಳಗಿನ 6 ಸರಳ ಸಲಹೆಗಳನ್ನು ಅನುಸರಿಸಿದರೆ ಪರ್ಫೆಕ್ಟ್ ಕಚೋರಿ ಸಿದ್ಧವಾಗುತ್ತದೆ.
1. ಈರುಳ್ಳಿಯಲ್ಲಿರುವ ಹೆಚ್ಚುವರಿ ತೇವಾಂಶ ತೆಗೆಯಿರಿ
ಈರುಳ್ಳಿಯನ್ನು ಹೆಚ್ಚಿದ ನಂತರ ಅದು ನೀರು ಬಿಟ್ಟುಕೊಳ್ಳುತ್ತದೆ. ಇದರಿಂದ ಸ್ಟಫಿಂಗ್ ಮೆತ್ತಗಾಗಿ ಕಚೋರಿ ಕಟ್ಟುವುದು ಕಷ್ಟವಾಗುತ್ತದೆ. ಇದನ್ನು ತಡೆಯಲು ಮಸಾಲೆಯೊಂದಿಗೆ ಸ್ವಲ್ಪ ಕಡಲೆ ಹಿಟ್ಟನ್ನು (ಬೇಸನ್) ಸೇರಿಸಿ. ಕಡಲೆ ಹಿಟ್ಟು ಹೆಚ್ಚುವರಿ ತೇವಾಂಶವನ್ನು ಹೀರಿಕೊಂಡು ಮಿಶ್ರಣವನ್ನು ಒಣಗಿಸಿ, ಕಚೋರಿ ಮಾಡಲು ಸುಲಭಗೊಳಿಸುತ್ತದೆ.
2. ತರಿತರಿಯಾಗಿ ಕುಟ್ಟಿದ ಖಾರ ಮಸಾಲೆ ಬಳಸಿ
ಕೇವಲ ಮಸಾಲೆ ತೂಳುಗಳನ್ನು ಬಳಸುವ ಬದಲು, ಧನಿಯಾ (ಕೊತ್ತಂಬರಿ ಬೀಜ), ಸೋಂಪು ಮತ್ತು ಜೀರಿಗೆಯನ್ನು ಹಗುರವಾಗಿ ಹುರಿದು ತರಿತರಿಯಾಗಿ ಪುಡಿ ಮಾಡಿ ಸೇರಿಸಿ. ಇದು ಸ್ಟಫಿಂಗ್‌ಗೆ ಉತ್ತಮ ಪರಿಮಳ ನೀಡುತ್ತದೆ ಹಾಗೂ ಪ್ರತಿ ತುತ್ತಿನಲ್ಲೂ ನೈಜ ರುಚಿ ನೀಡುತ್ತದೆ.
3. ಆಲೂಗಡ್ಡೆಯನ್ನು ಚೆನ್ನಾಗಿ ಪೇಸ್ಟ್‌ನಂತೆ ಹದಗೊಳಿಸಿ
ಬೇಯಿಸಿದ ಆಲೂಗಡ್ಡೆಯನ್ನು ಈರುಳ್ಳಿ ಮತ್ತು ಮಸಾಲೆಯೊಂದಿಗೆ ಬೆರೆಸುವ ಮೊದಲು ಗಂಟಿಲ್ಲದಂತೆ ನಯವಾಗಿ ಕಿವುಚಿ. ಆಲೂಗಡ್ಡೆ ತುಂಡುಗಳು ದೊಡ್ಡದಾಗಿದ್ದರೆ ಕಚೋರಿ ಲಟ್ಟಿಸುವಾಗ ಅಥವಾ ಕರಿಯುವಾಗ ಹರಿದುಹೋಗುವ ಸಾಧ್ಯತೆ ಇರುತ್ತದೆ.
4. ಹಿಟ್ಟು ಮೆದುವಾಗಿರಲಿ ಆದರೆ ಗಟ್ಟಿಯಾಗಿರಲಿ
ಕಚೋರಿ ಹಿಟ್ಟು ತುಂಬಾ ಗಟ್ಟಿಯಾಗಿಯೂ ಇರಬಾರದು ಅಥವಾ ತೀರಾ ಸಡಿಲವಾಗಿಯೂ ಇರಬಾರದು. ಹಿಟ್ಟು ಕಲಸುವಾಗ ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ ನಾದಿದರೆ ಹೊರಪದರ ಗರಿಗರಿಯಾಗಿ ಮೂಡಿಬರುತ್ತದೆ. ಹಿಟ್ಟು ಕಲಸಿದ ನಂತರ ಕನಿಷ್ಠ 20 ರಿಂದ 30 ನಿಮಿಷಗಳ ಕಾಲ ನೆನೆಯಲು ಬಿಡಿ.
5. ಅತಿಯಾಗಿ ಸ್ಟಫಿಂಗ್ ತುಂಬಬೇಡಿ
ಹೆಚ್ಚು ಮಸಾಲೆ ಮಿಶ್ರಣವನ್ನು ಹಿಟ್ಟಿನೊಳಗೆ ತುಂಬಿದರೆ, ಲಟ್ಟಿಸುವಾಗ ಅಥವಾ ಕರಿಯುವಾಗ ಕಚೋರಿ ಒಡೆದುಹೋಗಬಹುದು. ಕಚೋರಿಯನ್ನು ಸರಿಯಾಗಿ ಮುಚ್ಚಲು ಜಾಗ ಬಿಟ್ಟು, ಹದವಾಗಿ ಸ್ಟಫಿಂಗ್ ತುಂಬಿ.
6. ಸಣ್ಣ ಉರಿಯಲ್ಲಿ ನಿಧಾನವಾಗಿ ಕರಿಯಿರಿ
ಕಚೋರಿ ಕರಿಯುವಾಗ ತಾಳ್ಮೆ ಅತ್ಯಗತ್ಯ. ಹಿಟ್ಟು ಸಂಪೂರ್ಣವಾಗಿ ಬೆಂದು ಗರಿಗರಿಯಾಗಲು ಕಡಿಮೆ ಅಥವಾ ಸಾಧಾರಣ ಉರಿಯಲ್ಲಿ ಕರಿಯಿರಿ. ಹೆಚ್ಚಿನ ಉರಿಯಲ್ಲಿ ಕರೆದರೆ ಹೊರಭಾಗ ಬೇಗ ಕಂದು ಬಣ್ಣಕ್ಕೆ ತಿರುಗುತ್ತದೆ ಆದರೆ ಒಳಗಿನ ಹಿಟ್ಟು ಬೇಯದೆ ಹಸಿಯಾಗಿಯೇ ಉಳಿಯುತ್ತದೆ.
ಈ ಸರಳ ಬದಲಾವಣೆಗಳನ್ನು ಅನುಸರಿಸುವ ಮೂಲಕ ನೀವು ಅಂಗಡಿ ಶೈಲಿಯ ರುಚಿಕರ ಮತ್ತು ಗರಿಗರಿಯಾದ ಆಲೂ ಪಿಯಾಜ್ ಕಚೋರಿಯನ್ನು ಮನೆಯಲ್ಲೇ ಸವಿಯಬಹುದು.

